ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive | ಬ್ಯಾಡರ ಹುಡುಗಿ, ಕುರುಬರ ಹುಡುಗನ ಒಲವಿನ ಕಥೆ...

ಬಂಡಿಹಟ್ಟಿಯಲ್ಲಿ ಅರಳಿದ ಪ್ರೀತಿ!
Last Updated 13 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಬಳ್ಳಾರಿ: ‘ಬಂಡಿಹಟ್ಟಿಯ ಸರ್ಕಾರಿ ಹೈಸ್ಕೂಲಿಗೆ ಒಟ್ಟಿಗೇ ಹೋಗುತ್ತಿದ್ದೆವು. ಇಬ್ಬರೂ ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾದೆವು. ಆಕೆ ಮೂರು ವಿಷಯಗಳಲ್ಲಿ ಫೇಲ್‌ ಆದರೆ, ನಾನು ಎಲ್ಲ ವಿಷಯಗಳಲ್ಲೂ ಫೇಲ್‌ ಆದೆ. ಆಗ ನಾವೇನೂ ಮಾತಾಡ್ತಿರಲಿಲ್ಲ. ಆದರೆ ಪ್ರತಿ ನೋಟದೊಳಗೊಂದು ಮೌನಸಂವಾದವಿರುತ್ತಿತ್ತು..’

–ನಗರದ ಬಂಡಿಹಟ್ಟಿ ಪ್ರದೇಶದ ಚಿಕ್ಕ ಮನೆಯಲ್ಲಿ ಶನಿವಾರ ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ಪತ್ನಿ ಪಾರ್ವತಿಯವರತ್ತ ನೋಡುತ್ತಾ ಷಣ್ಮುಖ ತಮ್ಮ ಪ್ರೇಮದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದರು.

ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಗಳಲ್ಲಿ ಸಮರ್ಥ ಆಟಗಾರನೆಂದೇ ಪ್ರಖ್ಯಾತನಾಗಿರುವ ಷಣ್ಮುಖ ಅವರಿಗಾಗಿ ಗೆಳೆಯರು ಮೈದಾನದಲ್ಲಿ ಕಾಯುತ್ತಿದ್ದರು. ಆದರೆ ಆ ದಿನಗಳ ನೆನಪುಗಳು ಅವರನ್ನು ಹಿಡಿದಿಟ್ಟುಕೊಂಡಿದ್ದವು.

‘ನಾನು ಪ್ಲಂಬಿಂಗ್‌ ಕೆಲಸಕ್ಕಾಗಿ ತಂದೆಯೊಂದಿಗೆ ಗದಗ್‌ಗೆ ಹೋದೆ. ಆಕೆ ಮತ್ತೆ ಪರೀಕ್ಷೆ ಕಟ್ಟಿ ಪಾಸಾಗಿ ಗರ್ಲ್ಸ್‌ ಕಾಲೇಜಿಗೆ ಸೇರಿದಳು. ನಾನು ವಾಪಸು ಬಂದವನೇ, ಆಕೆ ಪಾಸಾದ ಮೇಲೆ ನಾನೂ ಪಾಸಾಗಲೇಬೇಕು ಎಂಬ ಹಠದಿಂದ ಪರೀಕ್ಷೆ ಕಟ್ಟಿ ಪಾಸಾದೆ. ನಂತರ ಇಬ್ಬರೂ ಐಟಿಐ ಸೇರಿದೆವು. ಆಕೆ ಸರ್ಕಾರಿ ಪಾಲಿಟೆಕ್ನಿಕ್‌, ನಾನು ಖಾಸಗಿ ಪಾಲಿಟೆಕ್ನಿಕ್‌ ಸೇರಿದೆ. ಆಕೆ ಬಂಡಿಹಟ್ಟಿಯಿಂದ ಬೆಳಗಲ್‌ ಕ್ರಾಸ್‌ವರೆಗೂ ಬೈಸಿಕಲ್‌ನಲ್ಲಿ ಬರುತ್ತಿದ್ದಳು. ನಮ್ಮ ಮನೆ ಅಲ್ಲಿತ್ತು. ನಾನು ಕಾಯುತ್ತಾ ನಿಂತಿರುತ್ತಿದ್ದೆ. ನಂತರ ಇಬ್ಬರೂ ನಡೆದುಕೊಂಡು ಹೋಗುತ್ತಿದ್ದೆವು..’ ಹೀಗೆ ಹೇಳಿ ಷಣ್ಮುಖ ಕೊಂಚ ಗಂಭೀರವಾದರು.

‘ಒಂದು ವರ್ಷ ಹಾಗೇ ನಡೆಯಿತು. ಪ್ರೀತಿಯನ್ನು ಒಳಗೇ ಇಟ್ಟುಕೊಂಡು ಸುಮ್ಮನೆ ಇರಲು ಆಗಲಿಲ್ಲ. ಪಾರುವಿನ ಬರ್ತಡೇಗೆ ಒಂದು ದಿನ ಮುಂಚೆ, 2007ರ ಅಕ್ಟೋಬರ್‌ 8ರಂದು ನಮ್ಮ ಪಾಲಿಟೆಕ್ನಿಕ್‌ನ ವಾಟರ್‌ ಟ್ಯಾಂಕ್‌ ಮುಂದೆ ನಿಂತುಕೊಂಡು ಆಕೆಗೆ ಮನದಾಳವನ್ನು ತೆರೆದಿಟ್ಟೆ’

ನೆನಪನ್ನು ಪಾರ್ವತಿ ಮುಂದುವರಿಸಿದರು. ‘ಷಣ್ಮುಖ ಪ್ರೀತಿ ಬಗ್ಗೆ ಹೇಳಿದಾಗ ನಿಜಕ್ಕೂ ಭಯವಾಯಿತು. ಏನು ಹೇಳಬೇಕೆಂದೇ ತೋಚದೆ ಅಲ್ಲಿಂದ ತರಗತಿಗೆ ಹೊರಟುಹೋದೆ. ಆದರೆ ನನಗೆ ಇಷ್ಟವಿತ್ತು. ಮನೆಯಲ್ಲಿ ನಾನೇ ದೊಡ್ಡ ಮಗಳು. ವಿಷಯ ಹೇಳಿದಾಗ, ಹುಡುಗನ ಮನೆಯವರು ಒಪ್ಪಿದರೆ ಮದುವೆ ಮಾಡಿಕೊಡುವುದಾಗಿ ಹೇಳಿದರು. ಅದನ್ನೇ ಷಣ್ಮುಖನಿಗೆ ಹೇಳಿದೆ’.

ಷಣ್ಮುಖ ಮುಂದುವರಿಸಿ, ‘ಆಗ ಅನಾರೋಗ್ಯಪೀಡಿತಳಾಗಿದ್ದ ನನ್ನ ಅಮ್ಮ ಒಪ್ಪಲಿಲ್ಲ. ಬ್ಯಾಡರ ಹುಡುಗಿಯನ್ನು ಮಗ ಪ್ರೀತಿ ಮಾಡಿದನೆಂದು ಅಪ್ಪ ನೊಂದುಕೊಂಡರು. ನಮ್ಮ ಮದುವೆಗೆ ಒಪ್ಪಿಗೆ ದೊರಕಲಿಲ್ಲ. ಆದರೆ ಗೆಳೆಯರು ನೆರವಿಗೆ ನಿಂತರು. ಬಳ್ಳಾರಿಯಿಂದ ಮೈಸೂರಿಗೆ ಹೋಗಿ ಚರ್ಚೊಂದರಲ್ಲಿ 2008ರ ಡಿ.5ರಂದು ಗೆಳೆಯರ ಸಮ್ಮುಖದಲ್ಲಿ ಮದುವೆಯಾದೆವು. ನಂತರ ರಿಜಿಸ್ಟರ್‌ ಮದುವೆಯೂ ಆದೆವು. ವಾಪಸಾಗಿ ಬೆಳಗಲ್‌ ಕ್ರಾಸ್‌ನಲ್ಲಿ ಒಂದು ಚಿಕ್ಕ ಬಾಡಿಗೆ ಮನೆಯಲ್ಲಿ ನೆಲೆ ನಿಂತೆವು. ಅದಾಗಿ ಒಂದು ವರ್ಷಕ್ಕೆ ಬಂಡಿಹಟ್ಟಿಯ ಈ ಬಾಡಿಗೆ ಮನೆಗೆ ಬಂದೆವು’ ಎಂದು ನಕ್ಕರು.

‘ನಮ್ಮ ಪ್ರೀತಿಗೆ ಜಾತಿಯೇ ಅಡ್ಡ ಬಂದಿತ್ತು. ನಿಂದನೆ, ಮೆಚ್ಚುಗೆಗಳೆರಡನ್ನೂ ನುಂಗಿ ನಡೆದೆವು. ನಮ್ಮ ಮಕ್ಕಳು ಎರಡೂ ಕುಟುಂಬಗಳ ನಡುವೆ ಅದೇ ಪ್ರೀತಿಯ ಬೆಸುಗೆ ಹಾಕಿದರು. ಪಾರು ಗರ್ಭಿಣಿಯಾದಾಗ ಆಕೆಯ ತಾಯಿ ನೆರವಿಗೆ ನಿಂತರು. ನಂತರ ಎಲ್ಲರೂ ನಿಧಾನಕ್ಕೆ ಹತ್ತಿರ ಬಂದರು’ ಎಂದ ಷಣ್ಮುಖ ಅವರ ಮುಖದಲ್ಲಿ ಸಾರ್ಥಕತೆಯ ಬೆಳಕು ಮಿಂಚಿತು.

‘ಪ್ರೀತಿ ಮಾಡಿ ಎಲ್ಲೋ ಹೋಗಿ ಮದುವೆ ಮಾಡಿಕೊಂಡು ಬಂದಿದ್ದೀರಿ. ಪ್ರೀತಿಸಿ ಮದುವೆಯಾದವರ ಬದುಕನ್ನ ಕಂಡಿದ್ದೀವಿ. ನೀವೇನು ಉದ್ಧಾರವಾಗಲ್ಲ’ ಎಂದು ಕೆಲವರು ಬೆದರಿಸಿದರು. ತಾತ್ಸಾರದ ಮಾತಾಡಿದರು. ಆದರೆ ಈಗ ನಮ್ಮ ಬದುಕನ್ನು ನೋಡಿದರೆ ಅಂಥದ್ದೇನೂ ಆಗಿಲ್ಲ’ ಎಂದು ಪಾರ್ವತಿ ಸಂತೃಪ್ತಿ ವ್ಯಕ್ತಪಡಿಸಿದರು.

ವಾಲ್ಮೀಕಿ ಸಮುದಾಯಕ್ಕೆ ಸೇರಿದ ಪಾರ್ವತಿಯವರ ಕುಟುಂಬದವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರು. ಅವರನ್ನು ಮದುವೆಯಾಗುವ ಮುಂಚೆಯಿಂದಲೂ ಷಣ್ಮುಖ ಅವರಿಗೆ ಯೇಸುವಿನ ಮೇಲೆ ಭಕ್ತಿ ಇತ್ತು. ಅದು ಈಗಲೂ ಮುಂದುವರಿದಿದೆ. ಧರ್ಮ ಅವರ ಒಲವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಅವರ ಇಬ್ಬರ ಮಕ್ಕಳ ಹೆಸರು ಜೀವನ್‌ ಮತ್ತು ಜೋಯಲ್‌.

ಷಣ್ಮುಖ–ಪಾರ್ವತಿ ದಂಪತಿ ದೇವರು, ಧರ್ಮದ ಬಗೆಗೆ ನಿರ್ದಿಷ್ಟ ಗೆರೆಗಳನ್ನೇನೂ ಎಳೆದುಕೊಂಡಿಲ್ಲ. ನಿಯಮಿತವಾಗಿ ಪತ್ನಿಯೊಂದಿಗೆ ಚರ್ಚಿಗೆ ಹೋಗುವ ಷಣ್ಮುಖ ಅವರಿಗೆ ಗೆಳೆಯರ ಜೊತೆ ಬಂಡಿಹಟ್ಟಿಯ ರಾಮುಲಮ್ಮ ಗುಡಿಯ ಕಟ್ಟೆ ಮೇಲೆ ಕುಳಿತು ಹರಟೆ ಹೊಡೆಯುವುದೂ ಅಷ್ಟೇ ಇಷ್ಟ.

‘ದೇವರು, ಧರ್ಮಗಳಾಚೆಗೆ ಬದುಕಿನಲ್ಲಿ ಪ್ರೀತಿ ಉಳಿಸಿಕೊಳ್ಳುವುದೇ ಮುಖ್ಯ. ಆಗ ದೂರ ಸರಿದವರೂ ಹತ್ತಿರ ಬರುತ್ತಾರೆ’ ಎಂಬ ತತ್ವ ಅವರ ಬದುಕಿನಲ್ಲೇ ಈಗ ಹಾಸುಹೊಕ್ಕಾಗಿದೆ. ಹೋಂಗಾರ್ಡ್‌ ಕೆಲಸ ಮಾಡುತ್ತಾ, ಕಬಡ್ಡಿ ಆಡುತ್ತಾ ಷಣ್ಮಖ, ತಮ್ಮ ಪ್ರೀತಿಯ ಪತ್ನಿ ಪಾರು ಮತ್ತು ಮಕ್ಕಳೊಂದಿಗೆ ಒಲವಿನ ದಾರಿಯಲ್ಲಿ ನಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT