ಭಾನುವಾರ, ಆಗಸ್ಟ್ 18, 2019
26 °C

ಬಾವುಟ ಮಾರಲು ಬೀದರಿನಿಂದ ಬಂದರು!

Published:
Updated:
Prajavani

ಬಳ್ಳಾರಿ: ಸ್ವಾತಂತ್ರ್ಯ ದಿನಾಚರಣೆ ಮುನ್ನಾ ದಿನವಾದ ಬುಧವಾರ ನಗರದಲ್ಲಿ ರಾಷ್ಟ್ರಧ್ವಜಗಳ ಮಾರಾಟ ಭರದಿಂದ ನಡೆದಿದೆ. ಅಂದ ಹಾಗೆ, ಅವುಗಳನ್ನು ಮಾರಾಟ ಮಾಡುತ್ತಿದ್ದವರು ಸ್ಥಳೀಯರಲ್ಲ. ಬದಲಿಗೆ ದೂರದ ಬೀದರ್‌, ಅನಂತರಪುರದಿಂದ ಬಂದವರು.

ನಗರದ ಎಚ್‌.ಆರ್‌.ಗವಿಯಪ್ಪ ವೃತ್ತದಲ್ಲಿ ಬಾವುಟ ಮಾರಲು ನಿಂತಿದ್ದವರನ್ನು ‘ಪ್ರಜಾವಾಣಿ’ ಮಾತಿಗೆಳೆದಾಗ ಈ ವಿಷಯ ಬೆಳಕಿಗೆ ಬಂತು. ‘ಬಾವುಟಗಳನ್ನು ನಿಮ್ಮೂರಿನಲ್ಲೇ ಮಾರಬಹುದಿತ್ತಲ್ಲವೇ? ಇಷ್ಟು ದೂರ ಬಂದು ಮಾರಾಟ ಮಾಡುವ ಅವಶ್ಯಕತೆ ಏನಿತ್ತು’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೀದರಿನ ನಿಂಗಪ್ಪ, ‘ನಾವು ಹತ್ತಾರು ಕುಟುಂಬಗಳು ಒಟ್ಟಿಗೇ ಬಂದಿದ್ದೇವೆ. ನಮ್ಮೂರಿನಲ್ಲಿ ಕಡಿಮೆ ಬೆಲೆಗೆ ಬಾವುಟ ಮಾರಬೇಕು. ಇಲ್ಲಿ ಕೊಂಚ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಧ್ಯವೆಂದು ಬಂದೆವು’ ಎಂದರು.

ಅಲ್ಲಿಯೇ ಇದ್ದ ಅನಂತಪುರದ ಯುವಕ ಕೃಷ್ಣ ಕೂಡ ಅದೇ ಮಾತುಗಳನ್ನು ಹೇಳಿದರು. ‘ಎಲ್ಲರೂ ಒಂದೇ ಕಡೆ ಬಿಡಾರ ಹೂಡಿದ್ದೇವೆ. ನಗರದ ವಿವಿಧೆಡೆ ಸಂಚರಿಸಿ ಬಾವುಟ ಮಾರುತ್ತಿದ್ದೇವೆ. ನಾಳೆ ನಮ್ಮೂರಿಗೆ ಹೋಗುತ್ತೇವೆ’ ಎಂದರು.

ಪ್ಲಾಸ್ಟಿಕ್‌ ಬಾವುಟವಿಲ್ಲ: ಪ್ಲಾಸ್ಟಿಕ್‌ ಬಳಕೆಯನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಅವರೆಲ್ಲರೂ ಬಟ್ಟೆಯಿಂದ ಮಾಡಿದ ಬಾವುಟವನ್ನು ಮಾರುತ್ತಿದ್ದರು. ಕೋಲಿಗೆ ಸಿಕ್ಕಿಸಿದ ಚಿಕ್ಕ ಗಾತ್ರದ ಬಾವುಟದ ಬೆಲೆ ₨ 40, ದೊಡ್ಡ ಗಾತ್ರದ್ದಾದರೆ ₨100ರಿಂದ 150ರವರೆಗೂ ದರವಿತ್ತು. ಚೌಕಾಸಿಯೂ ನಡೆದಿತ್ತು. ಬಾವುಟ ಮಾರುತ್ತಿದ್ದವರಲ್ಲಿ ಗೃಹಿಣಿಯರು, ಯುವತಿಯರೂ, ಕೆಲವೆಡೆ ಬಾಲಕಿಯರೂ ಕಂಡುಬಂದರು.

Post Comments (+)