ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಜಲ ಸಂರಕ್ಷಣೆ ಉಸಾಬರಿ ನಮಗೇಕೇ?

ತುಂಗಭದ್ರಾ ಜಲಾಶಯವಿರುವ ಕಾರಣಕ್ಕೆ ನೀರಿನ ಮಹತ್ವ ಅರಿಯದ ಜಾಣರು
Last Updated 21 ಮಾರ್ಚ್ 2019, 11:52 IST
ಅಕ್ಷರ ಗಾತ್ರ

ಹೊಸಪೇಟೆ: ಬೇಸಿಗೆಯಿರಲಿ, ಮಳೆಗಾಲವಿರಲಿ ಇಲ್ಲಿನ ಜನ ಮನೆಯಂಗಳವನ್ನು ಎರಡು ಸಲ ನೀರಿನಿಂದ ಸ್ವಚ್ಛಗೊಳಿಸುತ್ತಾರೆ. ಮನೆಯ ವಾಹನಗಳನ್ನು ತೊಳೆಯುತ್ತಾರೆ. ಗಿಡಗಳಿಗೆ ನೀರು ಹರಿಸುತ್ತಾರೆ. ಅಷ್ಟೇ ಅಲ್ಲ, ದೂಳು ಏಳದಿರಲೆಂದು ಮನೆ ಮುಂದಿನ ರಸ್ತೆಯ ಮೇಲೆಲ್ಲಾ ನೀರು ಚಿಮುಕಿಸುತ್ತಾರೆ.

ಇದು ನಗರದ ಕೆಲ ಬಡಾವಣೆಗಳಲ್ಲಿ ನಿತ್ಯ ಕಂಡು ಬರುವ ದೃಶ್ಯ. ಸನಿಹದಲ್ಲೇ ತುಂಗಭದ್ರಾ ಜಲಾಶಯವಿದೆ. ಎಲ್ಲ ಕಾಲದಲ್ಲೂ ನಗರವಾಸಿಗಳಿಗೆ ಯಥೇಚ್ಛವಾಗಿ ನೀರು ಸಿಗುತ್ತದೆ. ಭೀಕರ ಬರಗಾಲವಿದ್ದರೂ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ತುಂಗಭದ್ರಾ ಮಂಡಳಿ ಮುತುವರ್ಜಿ ವಹಿಸುತ್ತದೆ. ಇದೇ ಕಾರಣಕ್ಕಾಗಿ ಸ್ಥಳೀಯರಿಗೆ ಜೀವಜಲದ ಮಹತ್ವ ಗೊತ್ತಾಗಿಲ್ಲ. ಹೀಗಾಗಿಯೇ ನೀರನ್ನು ಬೇಕಾಬಿಟ್ಟಿಯಾಗಿ ಪೋಲು ಮಾಡುತ್ತಾರೆ. ನೀರಿನ ಮಹತ್ವ ಅರಿತಿದ್ದರೂ ‘ಅದರ ಉಸಾಬರಿ ನಮಗೇಕೇ?’ ಎಂಬ ಭಾವನೆ ಜನರಲ್ಲಿ ಮನೆ ಮಾಡಿರುವಂತಿದೆ.

ಅನಗತ್ಯವಾಗಿ ನೀರು ಪೋಲು ಮಾಡುವವರಲ್ಲಿ ಅಕ್ಷರಸ್ಥರು–ಅನಕ್ಷರಸ್ಥರು, ಬಡವರು–ಶ್ರೀಮಂತರು ಎಂಬ ಯಾವುದೇ ಭೇದವಿಲ್ಲ. ಸ್ಪರ್ಧೆಗೆ ಬಿದ್ದವರಂತೆ ತಾ ಮುಂದು, ನಾ ಮುಂದು ಎಂದು ಅಮೂಲ್ಯ ಜೀವಜಲವನ್ನು ಹಾಳು ಮಾಡುತ್ತಾರೆ.

ಅಂದಹಾಗೆ, ನೀರಿನ ಸಂರಕ್ಷಣೆ ವಿಷಯದಲ್ಲಿ ನಗರಸಭೆ, ಸ್ಥಳೀಯ ಸಂಘ ಸಂಸ್ಥೆಗಳು ವರ್ಷದಲ್ಲಿ ಅನೇಕ ಸಲ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಸಂಘಟಿಸಿ ಅದರ ಬಗ್ಗೆ ಅರಿವು ಮೂಡಿಸುತ್ತವೆ. ತಜ್ಞರನ್ನು ಕರೆಸಿ, ನೀರಿನ ಮಹತ್ವ ತಿಳಿಸಿಕೊಡುವ ಕೆಲಸ ಮಾಡುತ್ತಿವೆ. ಆದರೆ, ಇದ್ಯಾವುದು ಜನರ ತಲೆಗೆ ಹೋಗಿದಂತಿಲ್ಲ. ಹೋದರೂ ಅವರ ಹಳೆಯ ಚಾಳಿ ಬಿಟ್ಟಿಲ್ಲ. ಇದಕ್ಕೆ ಕಡಿವಾಣ ಹಾಕಬೇಕು ಎನ್ನುತ್ತಾರೆ ಪರಿಸರ ಪ್ರೇಮಿ ವೀರೇಂದ್ರ.

‘ಜನ ಮನೆಯಂಗಳ, ವಾಹನಗಳನ್ನು ತೊಳೆಯುವುದಲ್ಲದೇ ಮೋಟರ್‌ ಮೂಲಕ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಅದಕ್ಕೆ ಕಡಿವಾಣ ಹಾಕಬೇಕು. ನಗರಸಭೆಯವರು ಬೆಳಿಗ್ಗೆ ನೀರು ಬಿಟ್ಟಾಗ ವಿದ್ಯುತ್‌ ಕಡಿತಗೊಳಿಸಬೇಕು. ಆ ವೇಳೆ ನೀರು ಸಂಗ್ರಹಿಸಿ ಇಟ್ಟುಕೊಳ್ಳಲು ಬರುವುದಿಲ್ಲ. ನೀರು ಕಡಿಮೆ ಒತ್ತಡದ ಮೂಲಕ ಹರಿಸಬೇಕು. ಹೀಗಾದಾಗ ಪೈಪ್‌ ಮೂಲಕ ಬೇರೆ ಕಡೆ ಹರಿಸಲು ಆಗುವುದಿಲ್ಲ. ಇಂತಿಷ್ಟೇ ಸಮಯ ನಿಗದಿಪಡಿಸಬೇಕು’ ಎಂದು ಸಲಹೆ ನೀಡಿದರು.

‘ಇಂತಹ ಕ್ರಮಗಳನ್ನು ಕೈಗೊಳ್ಳುವುದರ ಜತೆಗೆ ಹೆಚ್ಚೆಚ್ಚೂ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಹನಿ ನೀರಿಗೂ ಕೂಡ ಎಷ್ಟು ಮಹತ್ವ ಇದೆ ಎಂಬುದನ್ನು ಮನದಟ್ಟು ಮಾಡಿಕೊಡಬೇಕು. ಎಷ್ಟೋ ದೇಶಗಳಲ್ಲಿ ಕುಡಿಯಲು ನೀರು ಸಿಗುತ್ತಿಲ್ಲ. ಸಮುದ್ರದ ನೀರನ್ನೇ ಸಿಹಿಯಾಗಿಸಿ ಉಪಯೋಗಿಸುತ್ತಿದ್ದಾರೆ. ಇಂತಹ ವಿಚಾರಗಳನ್ನು ಜನರಿಗೆ ತಿಳಿಸಿಕೊಡಬೇಕು. ಜನ ಸಹ ಭವಿಷ್ಯದ ಬಗ್ಗೆ ಚಿಂತಿಸಬೇಕು. ಈಗಿನದಷ್ಟೇ ನೋಡಿಕೊಂಡು ನೀರನ್ನು ಬೇಕಾಬಿಟ್ಟಿ ಉಪಯೋಗಿಸುವುದನ್ನು ಬಿಡಬೇಕು. ಮಕ್ಕಳಿಗೂ ಈ ಕುರಿತು ತಿಳಿ ಹೇಳಬೇಕು’ ಎಂದರು.

ನಗರದಲ್ಲಿನ ಎಷ್ಟೋ ಎತ್ತರದ ಪ್ರದೇಶಗಳಿಗೆ ಈಗಲೂ ಸಮರ್ಪಕವಾಗಿ ನೀರು ಪೂರೈಕೆ ಆಗುವುದಿಲ್ಲ. ಬೇಸಿಗೆಯಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಅಂತಹ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತದೆ. ಅವರು ಎದುರಿಸುತ್ತಿರುವ ಸಮಸ್ಯೆ ಮನಗಂಡು ಇತರೆ ಭಾಗದ ಜನ ಎಚ್ಚೆತ್ತುಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT