ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಬಿಗಿ ಬಂದೋಬಸ್ತ್‌ ನಡುವೆ ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ

ಇತಿಹಾಸ ತಿರುಚುವ ಪ್ರವೃತ್ತಿಗೆ ಕಳವಳ
Last Updated 10 ನವೆಂಬರ್ 2018, 8:46 IST
ಅಕ್ಷರ ಗಾತ್ರ

ಹೊಸಪೇಟೆ: ಬಿಗಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ಶನಿವಾರ ಚಿತ್ತವಾಡ್ಗಿಯ ಒಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸಲಾಯಿತು.

ಅಮೀರ್‌ ಖುಸ್ರೂ ಎಂಬ ಯುವಕ ಟಿಪ್ಪು ಸುಲ್ತಾನ್‌ ವೇಷಧಾರಿಯಾಗಿ ಗಮನ ಸೆಳೆದರೆ, ಮಕ್ಕಳು ಹಾಗೂ ಯುವಕರು ಟಿಪ್ಪು ಭಾವಚಿತ್ರವಿರುವ ಟೀ ಶರ್ಟ್‌ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇನ್ನು ಮುಸ್ಲಿಂ ಸಮಾಜದ ಮುಖಂಡರು ಟಿಪ್ಪು ಭಾವಚಿತ್ರವಿರುವ ಶಲ್ಯಗಳನ್ನು ಹಾಕಿಕೊಂಡಿದ್ದರು.

‘ಇತಿಹಾಸ ತಿರುಚುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಕೋಮುವಾದ, ಜನಾಂಗೀಯವಾದದ ಹೆಸರಿನಲ್ಲಿ ಜಾತ್ಯತೀತ ಪರಿಕಲ್ಪನೆಗೆ ಧಕ್ಕೆ ಉಂಟು ಮಾಡಲಾಗುತ್ತಿದೆ. ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ವಿಜಯನಗರ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಚಂದ್ರಶೇಖರ್‌ ಶಾಸ್ತ್ರಿ ಉಪನ್ಯಾಸ ನೀಡಿದರು.

‘ಕೆ.ಆರ್‌.ಎಸ್‌. ಜಲಾಶಯ ನಿರ್ಮಾಣಕ್ಕೆ ನೀಲನಕಾಶೆ ಸಿದ್ಧಗೊಂಡಿದ್ದು ಟಿಪ್ಪು ಸುಲ್ತಾನ್‌ ಕಾಲದಲ್ಲಿ. ದಲಿತರಿಗೆ ಸಮಾಜ ಹಾಕಿದ್ದ ಬಹಿಷ್ಕಾರದಂತಹ ಅನಿಷ್ಠ ಪದ್ಧತಿಯನ್ನು ತೆಗೆದು ಹಾಕಿದ್ದ. ಕೇರಳ ಹಾಗೂ ಮಲಬಾರಿನಲ್ಲಿ ಮಹಿಳೆಯರ ಮೇಲೆ ನಡೆಯುತ್ತಿದ್ದ ಶೋಷಣೆಗೆ ಕಡಿವಾಣ ಹಾಕಿದ್ದ. ತನ್ನ ಅರಮನೆ ಪಕ್ಕದಲ್ಲಿ ಗವಿ ಗಂಗಾಧರೇಶ್ವರ ದೇಗುಲ ಕಟ್ಟಿಸಿದ್ದ. ಅನೇಕ ದೇವಸ್ಥಾನಗಳಿಗೆ ದಾನ, ಧರ್ಮ ಮಾಡುತ್ತಿದ್ದ. ಹೀಗಿರುವಾಗ ಟಿಪ್ಪು ಹಿಂದೂ ವಿರೋಧಿಯಾಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ಟಿಪ್ಪು ಎಲ್ಲ ಧರ್ಮೀಯರನ್ನು ಸಮಾನರಾಗಿ ಕಾಣುತ್ತಿದ್ದ. ಎಲ್ಲರನ್ನೂ ಗೌರವದಿಂದ ನಡೆಸಿಕೊಳ್ಳುತ್ತಿದ್ದ. ಎಂದೂ ಬೇರೆಯವರ ಮನಸ್ಸು ನೋಯಿಸುವ ಕೆಲಸ ಮಾಡಲಿಲ್ಲ. ಇತರ ರಾಜರಂತೆ ಆತ ಕೂಡ ತನ್ನ ಸಂಸ್ಥಾನದ ವಿಸ್ತರಣೆ ಮಾಡಿದ್ದ. ಈ ವೇಳೆ ಆತ ಕೆಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದ. ಅದನ್ನೇ ತಿರುಚಿ ಹೇಳಿ ಇತಿಹಾಸಕ್ಕೆ ಅನ್ಯಾಯ ಮಾಡುವುದು ಒಳ್ಳೆಯದಲ್ಲ’ ಎಂದರು.

‘ಬಸವಣ್ಣನವರನ್ನು ಲಿಂಗಾಯತ, ಶಂಕರಾಚಾರ್ಯರನ್ನು ಬ್ರಾಹ್ಮಣ ಹಾಗೂ ಟಿಪ್ಪುವನ್ನು ಮುಸ್ಲಿಂ ಸಮಾಜಕ್ಕೆ ಸೀಮಿತಗೊಳಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಎಲ್ಲ ಮಹನೀಯರ ಆದರ್ಶಗಳು ಎಲ್ಲರೂ ಅಳವಡಿಸಿಕೊಂಡು ಒಳ್ಳೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಾಂಗ್ರೆಸ್‌ ಮುಖಂಡ ರತನ್‌ ಸಿಂಗ್‌, ‘ಎಲ್ಲ ಜನಾಂಗದವರು ಅವರ ಸಮಾಜದ ದಾರ್ಶನಿಕರ ಜಯಂತಿ ಮಾಡುತ್ತಾರೆ. ಅದೇ ರೀತಿ ಮುಸ್ಲಿಮರು ಟಿಪ್ಪು ಜಯಂತಿ ಮಾಡುತ್ತಿದ್ದಾರೆ. ಅದನ್ನೇಕೆ ವಿರೋಧಿಸಬೇಕು. ಟಿಪ್ಪು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವ್ಯಕ್ತಿ. ಜಾತಿ, ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು’ ಎಂದರು.

ಮುಖಂಡ ಸಿ.ಎ.ಸೈಯದ್‌ ಮೊಹಮ್ಮದ್‌ ಮಾತನಾಡಿ, ‘ಟಿಪ್ಪು ಈ ದೇಶಕ್ಕಾಗಿ ಪ್ರಾಣ ತ್ಯಜಿಸಿದ ಮಹಾನ್‌ ವ್ಯಕ್ತಿ. ಆದರೆ, ಆತನ ಬಗ್ಗೆ ಕಟ್ಟುಕಥೆಗಳನ್ನು ಸೃಷ್ಟಿಸಿ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಟಿಪ್ಪು ಸಾವಿರಾರು ಜನ ಹಿಂದೂಗಳನ್ನು ಇಸ್ಲಾಂಗೆ ಮತಾಂತರಗೊಳಿಸಿದ್ದ ಎಂದು ಹೇಳಲಾಗುತ್ತಿದೆ. ಒಂದುವೇಳೆ ಅದು ನಿಜವಾಗಿದ್ದಲ್ಲಿ ಭಾರತದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿರುತ್ತಿದ್ದರು’ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ಡಿ.ವೈ.ಎಸ್‌.ಪಿ. ಎ.ವಿ. ಲಕ್ಷ್ಮಿನಾರಾಯಣ, ಅಂಜುಮನ್‌ ಸಮಿತಿ ಅಧ್ಯಕ್ಷ ಸೈಯದ್‌ ಖಾದರ್‌ ರಫಾಯಿ, ಅಖಿಲ ಕರ್ನಾಟಕ ಹಜರತ್‌ ಟಿಪ್ಪು ಸುಲ್ತಾನ್‌ ಫೆಡರೇಶನ್‌ ಅಧ್ಯಕ್ಷ ಜೆ. ಸಲೀಂ, ರಾಜ್ಯ ಟಿಪ್ಪು ಸುಲ್ತಾನ್‌ ಅಭಿಮಾನಿಗಳ ಮಹಾವೇದಿಕೆ ಅಧ್ಯಕ್ಷ ಖಾದರ್‌ ನದಾಫ್‌, ಅಖಿಲ ಭಾರತ ಹಜರತ್‌ ಟಿಪ್ಪು ಸುಲ್ತಾನ್‌ ಫೆಡರೇಶನ್‌ ಅಧ್ಯಕ್ಷ ಕೆ.ಕೆ. ಮೈನುದ್ದೀನ್‌ ದರವೇಶ್‌, ಮುಖಂಡರಾದ ಮೊಹಮ್ಮದ್‌ ಇಮಾಮ್‌ ನಿಯಾಜಿ, ಬಿ.ಕಾಂ. ಮಾಬುಸಾಬ್‌, ಖಾಜಾ ಹುಸೇನ್‌ ನಿಯಾಜಿ, ಕೆ. ಬಡಾವಲಿ, ಫಹೀಮ್‌ ಬಾಷಾ, ಟಿಂಕರ್‌ ರಫೀಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT