ಬುಧವಾರ, ನವೆಂಬರ್ 13, 2019
22 °C

ಲೇಖನಿ– ಖಡ್ಗ ಎರಡರಿಂದ ಟಿಪ್ಪು ಹತ್ಯೆ: ಚಿಂತಕ ಪ್ರೊ. ಚಿನ್ನಸ್ವಾಮಿ ಸೋಸಲೆ

Published:
Updated:
Prajavani

ಹೊಸಪೇಟೆ: ‘ಮತಾಂಧರು, ಮೂಲಭೂತವಾದಿಗಳು ಹಾಗೂ ವೈದಿಕಷಾಹಿ ವ್ಯವಸ್ಥೆಯ ವಿರುದ್ಧ ಇದ್ದ ಎಂಬ ಏಕೈಕ ಕಾರಣಕ್ಕಾಗಿ ಟಿಪ್ಪು ಸುಲ್ತಾನನನ್ನು ಲೇಖನಿ ಮತ್ತು ಖಡ್ಗ ಎರಡರಿಂದಲೂ ಸಾಯಿಸಲಾಗಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ, ಚಿಂತಕ ಪ್ರೊ. ಚಿನ್ನಸ್ವಾಮಿ ಸೋಸಲೆ ಮಾರ್ಮಿಕವಾಗಿ ಹೇಳಿದರು.

ತಾಲ್ಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟವು ಶನಿವಾರ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ‘ಟಿಪ್ಪು ಸುಲ್ತಾನ ಜೀವನ ಮತ್ತು ಸಾಧನೆ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ವೈದಿಕಷಾಹಿಗಳು ಲೇಖನಿ ಮೂಲಕ ಆತನ ಚರಿತ್ರೆಯನ್ನು ತಿರುಚಿ ಸಾಯಿಸಿದರೆ, ಬ್ರಿಟಿಷರು ಆತನನ್ನು ಬೆನ್ನ ಹಿಂದೆ ಖಡ್ಗ ಇರಿದು ಸಾಯಿಸಿದರು. ಇದು ಚರಿತ್ರೆಯಲ್ಲಿ ಆಗಿರುವ ದೊಡ್ಡ ಪ್ರಮಾದ’ ಎಂದು ತಿಳಿಸಿದರು.

‘ಟಿಪ್ಪುವಿನ ಆಳ್ವಿಕೆ ಕಾಲದಲ್ಲಿ ದಲಿತರಿಗೆ ಉಳುಮೆಗೆ ಭೂಮಿ ಕೊಟ್ಟಿದ್ದ. ಜೀತದಿಂದ ಅವರನ್ನು ಮುಕ್ತಗೊಳಿಸಿದ್ದ. ಅಸ್ಪೃಶ್ಯರಿಗೆ ದೇವಸ್ಥಾನಕ್ಕೆ ಪ್ರವೇಶ ಕೊಡಿಸಿದ್ದ. ಮೂಲಭೂತವಾದಿಗಳಿಗೆ ಸಿಂಹಸ್ವಪ್ನವಾಗಿದ್ದ. ವೈದಿಕಷಾಹಿ ಪರಂಪರೆ ನಾಶಪಡಿಸಿ ರಾಜಪ್ರಭುತ್ವ ಸ್ಥಾಪಿಸಿದ್ದ. ಈ ಸಿಟ್ಟಿನಿಂದ ಸವರ್ಣೀಯರು ಆತನ ಇತಿಹಾಸವನ್ನೇ ತಿರುಚಿ ತಪ್ಪಾಗಿ ಬಿಂಬಿಸಿದರು’ ಎಂದು ಹೇಳಿದರು.

‘ಟಿಪ್ಪು ಆತನ ಕಾಲದಲ್ಲಿ ಅನೇಕ ಜನಪರ ನಿರ್ಧಾರಗಳನ್ನು ಕೈಗೊಂಡಿದ್ದ. ಅನಿಷ್ಠ ಆಚರಣೆಗಳಿಗೆ ಕಡಿವಾಣ ಹಾಕಿದ್ದ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ. ಭಾರತಕ್ಕೆ 1947ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕರೆ, ಬ್ರಿಟಿಷರಿಗೆ 1799ರಲ್ಲಿ ಟಿಪ್ಪು ಸುಲ್ತಾನ ಮರಣ ನಂತರ ಭಾರತದಲ್ಲಿ ಸ್ವಾತಂತ್ರ್ಯ ಸಿಕ್ಕಿತು. ಅದರ ನಂತರವಷ್ಟೇ ಅವರು ಸುಲಭವಾಗಿ ಸಾಮ್ರಾಜ್ಯ ವಿಸ್ತರಣೆ ಮಾಡಿದರು. ಟಿಪ್ಪು ದೇಶಕ್ಕಾಗಿ ತನ್ನ ಮಕ್ಕಳನ್ನು ಬ್ರಿಟಿಷರ ಬಳಿ ಒತ್ತೆಯಾಳಾಗಿಟ್ಟಿದ್ದ. ಅಂತಹ ಅಪ್ರತಿಮ ಧೀರ, ಸಮಾಜ ಸುಧಾರಕನಿಗೆ ಸಂಬಂಧಿಸಿದ ವಿಚಾರಗಳನ್ನು ಪಠ್ಯ ಪುಸ್ತಕದಿಂದ ತೆಗೆಯಲು ಹೊರಟಿರುವುದು ದುರದೃಷ್ಟಕರ’ ಎಂದು ವಿಷಾದಿಸಿದರು.

‘ಟಿಪ್ಪು ಸುಲ್ತಾನ ಎಷ್ಟೇ ಕಠಿಣ ಸಂದರ್ಭ ಬಂದರೂ ಬ್ರಿಟಿಷರ ಜತೆಗೆ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ. ಒಂದುವೇಳೆ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರೆ 1947ರ ವರೆಗೆ ಮೈಸೂರು ಸಂಸ್ಥಾನವನ್ನು ಟಿಪ್ಪು ವಂಶಸ್ಥರೇ ಆಳುತ್ತಿದ್ದರು. ನಮ್ಮ ಇತಿಹಾಸ ರಾಣಿ ಚೆನ್ನಮ್ಮ, ಅಬ್ಬಕ್ಕ ರಾಣಿ, ಒನಕೆ ಓಬವ್ವನಿಗೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಟಿಪ್ಪುಗೆ ಕೊಡದೇ ಇರುವುದು ವಿಷಾದದ ಸಂಗತಿ. ಇದು ಚರಿತ್ರೆಗೆ ಮಾಡುತ್ತಿರುವ ಅಪಮಾನ’ ಎಂದು ಹೇಳಿದರು.

‘ವೈದಿಕರು ಹಾಕಿದ ಆಲದ ಮರದಡಿ ಭಾರತದ ಶಿಕ್ಷಣ ವ್ಯವಸ್ಥೆ ಬೆಳೆದಿದೆ. ಅದರಲ್ಲಿ ಅನೇಕ ವಾಸ್ತವಾಂಶಗಳನ್ನು ಮರೆ ಮಾಚಲಾಗಿದೆ. ಟಿಪ್ಪು ವಿಷಯದಲ್ಲೂ ಹಾಗೆಯೇ ಆಗಿದೆ. ಹೊಸ ತಲೆಮಾರು ಆಳಕ್ಕೆ ಹೋಗಿ ಇತಿಹಾಸದ ನೈಜ ಸಂಗತಿಗಳನ್ನು ತಿಳಿದುಕೊಳ್ಳಬೇಕಿದೆ’ ಎಂದರು.

ಒಕ್ಕೂಟದ ಸಂಚಾಲಕ ದುರುಗಪ್ಪ ಪೂಜಾರ ಮಾತನಾಡಿ, ‘ದೇಶಪ್ರೇಮಿ ಟಿಪ್ಪು ಹೆಸರನ್ನು ರಾಜಕೀಯ ಕಾರಣಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆತನನ್ನು ಮತಾಂಧ, ಕ್ರೂರಿ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ’ ಎಂದು ಹೇಳಿದರು.

ಡಾ.ಬಿ.ಆರ್‌. ಅಂಬೇಡ್ಕರ್‌ ಸಂಘದ ಗೌರವ ಅಧ್ಯಕ್ಷ ಬಿ. ತಿಪ್ಪಣ್ಣ, ರೈತ ಮುಖಂಡ ಖಾಜಾ ಹುಸೇನ್‌ ನಿಯಾಜಿ ಇದ್ದರು.

ಪ್ರತಿಕ್ರಿಯಿಸಿ (+)