ಬಯಲು ಶೌಚಮುಕ್ತದತ್ತ ದಾಪುಗಾಲು

7

ಬಯಲು ಶೌಚಮುಕ್ತದತ್ತ ದಾಪುಗಾಲು

Published:
Updated:
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಳೆ ಚಿಕ್ಕಸೊಬಟಿಯಲ್ಲಿ ಫಲಾನುಭವಿಗಳು ಶೌಚಾಲಯವನ್ನು ನಿರ್ಮಿಸಿಕೊಂಡಿದ್ದಾರೆ

ಹಗರಿಬೊಮ್ಮನಹಳ್ಳಿ: ಇಡೀ ತಾಲ್ಲೂಕನ್ನು ಬಯಲು ಶೌಚ ಮುಕ್ತಗೊಳಿಸಲು 23 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಶೌಚಾಲಯಗಳ ನಿರ್ಮಾಣ ಕೆಲಸ ಭರದಿಂದ ಸಾಗಿದೆ.

2013–14ರಲ್ಲಿ ಕೈಗೊಂಡ ಸಮೀಕ್ಷೆ ಪ್ರಕಾರ ತಾಲ್ಲೂಕಿನಲ್ಲಿ ಒಟ್ಟು 31,691 ಶೌಚಾಲಯಗಳ ಅಗತ್ಯವಿದೆ. ಇಲ್ಲಿಯವರೆಗೆ 27,181 ಶೌಚಾಲಯಗಳನ್ನು ನಿರ್ಮಿಸಲಾಗಿದೆ. 4,509 ನಿರ್ಮಿಸಬೇಕಿದೆ. ಈ ಪೈಕಿ 2,300 ನಿರ್ಮಾಣದ ಕೊನೆಯ ಹಂತದಲ್ಲಿವೆ. 2,209 ಶೌಚಾಲಯಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ಅಲಬೂರು, ಬಾಚಿಗೊಂಡನಹಳ್ಳಿ, ಬೆಣ್ಣೆಕಲ್ಲು, ಗದ್ದಿಗೇರಿ, ಕೋಗಳಿ, ಮಾದೂರು, ಮುತ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಗದಿತ ಗುರಿ ಸಾಧನೆ ಮಾಡಲಾಗಿದೆ. ಅವುಗಳನ್ನು ಬಯಲು ಶೌಚಮುಕ್ತ ಗ್ರಾಮಗಳಾಗಿವೆ. ಉಳಿದ ಗ್ರಾಮ ಪಂಚಾಯಿತಿಗಳಲ್ಲಿ ಆ. 15ರ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಇತ್ತೀಚೆಗೆ ಈ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಲ್ಲೂಕಿನ ಮೋರಿಗೇರಿ, ಸೊನ್ನ, ಹನಸಿ, ಹಂಪಾಪಟ್ಟಣ, ಮಾಲವಿ, ನೆಲ್ಕುದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಈಗಲೂ ಶೌಚಾಲಯಗಳು ನಿರ್ಮಾಣಗೊಂಡಿಲ್ಲ. ಇದರಿಂದಾಗಿ ಗ್ರಾಮಸ್ಥರು ಬಯಲಲ್ಲೇ ಶೌಚಾಲಯ ಮಾಡುತ್ತಾರೆ. ಈ ಕುರಿತು ಜಾಗೃತಿ ಮೂಡಿಸಿದರೂ ಪ್ರಯೋಜನವಾಗಿಲ್ಲ.

ಪಡಿತರ ಅಸ್ತ್ರ:

ಕಳೆದ ವರ್ಷ ಬ್ಯಾಸಿಗಿದೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಶೌಚಾಲಯ ನಿರ್ಮಿಸುವ ಗುರಿ ಸಾಧನೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸುಲಭವಾದ ಅಸ್ತ್ರ ಒಂದನ್ನು ಕಂಡುಕೊಂಡರು. ಶೌಚಾಲಯ ಹೊಂದಿರದಿದ್ದರೆ ಆ ಕುಟುಂಬಗಳ ಪಡಿತರ ಚೀಟಿ ರದ್ದು ಗೊಳಿಸಲಾಗುವುದು ಎಂದು ಗ್ರಾಮಗಳಲ್ಲಿ ಡಂಗೂರ ಸಾರಿದರು. ಇದರಿಂದ ಬೆಚ್ಚಿ ಬಿದ್ದ ತಾಲ್ಲೂಕಿನ ಹಳೆ ಚಿಕ್ಕ ಸೊಬಟಿ ಗ್ರಾಮದಲ್ಲಿನ 40 ಮನೆಗಳವರು ಶೌಚಾಲಯ ನಿರ್ಮಿಸಿಕೊಂಡರು. ಈ ಪಡಿತರ ಅಸ್ತ್ರವೇ ನಿಗದಿತ ಗುರಿ ಸಾಧನೆಗೆ ಕಾರಣವಾಯಿತು. ಈ ಕಾರಣಕ್ಕಾಗಿ ಬ್ಯಾಸಿಗಿದೇರಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆಯಿತು. ಹೀಗೆ ತಾಲ್ಲೂಕಿನ ಐದಕ್ಕೂ ಹೆಚ್ಚು ಗ್ರಾಮ ಪಮಚಾಯಿತಿಗಳಲ್ಲಿ ಇದೇ ವಿಧಾನವನ್ನು ಅನುಸರಿಸಿ ಗುರಿ ಸಾಧನೆಗೆ ಸುಲಭ ಮಾರ್ಗೋಪಾಯ ಕಂಡುಕೊಂಡರು.

ತಾಲ್ಲೂಕಿನ ಹನಸಿ, ಹಿರೇ ಸೊಬಟಿ, ಕೋಗಳಿ, ಕೋಡಿಹಳ್ಳಿ, ಬನ್ನಿಕಲ್ಲು ಸೇರಿದಂತೆ ಕೆಲವು ಗ್ರಾಮಗಳಲ್ಲಿ ಅಧಿಕಾರಿಗಳ ಒತ್ತಡಕ್ಕೆ ಮಣಿದು ನಿರ್ಮಿಸಿಕೊಂಡ ಕೆಲ ಶೌಚಾಲಯಗಳು ನೀರಿನ ಸಮಸ್ಯೆಯಿಂದಾಗಿ ನಿರುಪಯುಕ್ತವಾಗಿವೆ.

ಕುಡಿಯಲು ನೀರಿನ ಸಮಸ್ಯೆ ಇದೆ. ಶೌಚಾಲಯಕ್ಕೆ ಎಲ್ಲಿಂದ ನೀರು ತರಬೇಕು. ಮೊದಲು ನೀರಿನ ವ್ಯವಸ್ಥೆ ಮಾಡಿ, ಶೌಚಾಲಯಗಳನ್ನು ಕಟ್ಟಿಕೊಡಬೇಕು.
ಕೊಟ್ರೇಶಪ್ಪ, ಗ್ರಾಮಸ್ಥ, ಹಳೆ ಚಿಕ್ಕ ಸೊಬಟಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !