ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನ ಕೆಲ ಭಾಗದಲ್ಲಿ ಗುಂಪು ಘರ್ಷಣೆ; ಲಘು ಲಾಠಿ ಪ್ರಹಾರ

Last Updated 20 ಏಪ್ರಿಲ್ 2018, 17:51 IST
ಅಕ್ಷರ ಗಾತ್ರ

ಮೈಸೂರು: ಜಮ್ಮುವಿನ ಕಠುವಾದಲ್ಲಿ ಬಾಲಕಿಯೊಬ್ಬರ ಮೇಲೆ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಇಲ್ಲಿನ ಕ್ಯಾತಮಾರನಹಳ್ಳಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಮೈಸೂರು ಸಿಟಿ ಟೂರಿಸಂ ಮಾರ್ಕೇಟಿಂಗ್‌ ಮತ್ತು ಲೇಬರ್‌ ಯೂನಿಯನ್‌ ವತಿಯಿಂದ ನಗರದ ಮಿಲಾದ್‌ ಬಾಗ್‌ ಬಳಿ ಶುಕ್ರವಾರ ಮಧ್ಯಾಹ್ನ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಮಂಡಿ ಮೊಹಲ್ಲಾ, ಮೀನಾ ಬಜಾರ್‌ ಸೇರಿ ನಗರದ ವಿವಿಧೆಡೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಅಂಗಡಿ ಮುಚ್ಚಿಸಿದ್ದಾರೆ.

ಕ್ಯಾತಮಾರನಹಳ್ಳಿಯ ಟೆಂಟ್‌ ವೃತ್ತದ ಬಳಿಗೆ ಸಂಜೆ 5 ಗಂಟೆಯ ಸುಮಾರಿಗೆ ಧಾವಿಸಿದ ಪ್ರತಿಭಟನಾಕಾರರು ಅಂಗಡಿ ಮುಚ್ಚಿಸಲು ಮುಂದಾಗಿದ್ದಾರೆ. ಇದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದಾಗ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದೆ. ಕಲ್ಲು ತೂರಾಟದಲ್ಲಿ ವಿಜಯನಗರ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಅನಿಲ್‌ಕುಮಾರ್‌ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆಯನ್ನು ಖಂಡಿಸಿ ಸಂಘಪರಿವಾರ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಲಘು ಲಾಠಿ ಪ್ರಹಾರ ನಡೆಸುವ ಮೂಲಕ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಸ್ಥಳಕ್ಕೆ ಧಾವಿಸಿದ ಸಂಸದ ಪ್ರತಾಪ ಸಿಂಹ ಅವರನ್ನು ಒತ್ತಾಯಪೂರ್ವಕವಾಗಿ ಕಳುಹಿಸಲಾಯಿತು.

ಗಲಾಟೆಯ ಸುದ್ದಿ ತಿಳಿದು ಉದಯಗಿರಿ, ಎನ್‌.ಆರ್‌.ಮೊಹಲ್ಲಾ ಸೇರಿ ನಗರದ ವಿವಿಧೆಡೆ ಅಂಗಡಿಗಳು ಬಾಗಿಲು ಹಾಕಿದವು. ಸಂಜೆಯ ಬಳಿಕ ನಗರದ ಬಹುತೇಕ ಕಡೆ ಬಂದ್‌ ವಾತಾವರಣ ನಿರ್ಮಾಣವಾಗಿದೆ. ಸೂಕ್ಷ್ಮಪ್ರದೇಶಗಳಿಗೆ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT