ಪ್ರವಾಸಿಗರಿಗೆ ಹಂಪಿಯಲ್ಲಿ ಅತ್ಯಾಧುನಿಕ ಸೌಲಭ್ಯ ಕೇಂದ್ರ

ಗುರುವಾರ , ಏಪ್ರಿಲ್ 25, 2019
33 °C
ನಾಲ್ಕು ಕಡೆ ಪ್ರವಾಸಿಗರಿಗೆ ಒಂದೇ ಸೂರಿನಡಿ ಹಲವು ರೀತಿಯ ಸೌಕರ್ಯ

ಪ್ರವಾಸಿಗರಿಗೆ ಹಂಪಿಯಲ್ಲಿ ಅತ್ಯಾಧುನಿಕ ಸೌಲಭ್ಯ ಕೇಂದ್ರ

Published:
Updated:
Prajavani

ಹೊಸಪೇಟೆ: ಹಂಪಿಗೆ ಬರುವ ಪ್ರವಾಸಿಗರಿಗೆ ಒಂದೇ ಸೂರಿನಡಿ ಹಲವು ರೀತಿಯ ಸೌಲಭ್ಯ ಕಲ್ಪಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎ.ಎಸ್‌.ಐ.) ಮುಂದಾಗಿದೆ.

ಇದಕ್ಕಾಗಿ ಹಂಪಿಯ ನಾಲ್ಕು ಕಡೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಕಟ್ಟಡಗಳನ್ನು ನಿರ್ಮಿಸುತ್ತಿದೆ.

ಕೃಷ್ಣ ದೇವಸ್ಥಾನದ ಹಿಂಭಾಗ, ವಿಜಯ ವಿಠಲ ದೇಗುಲಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿನ ಗೆಜ್ಜಲ ಮಂಟಪ, ಕಮಲಾಪುರ–ಗಂಗಾವತಿ ರಸ್ತೆಯ ಈದ್ಗಾ ಬಳಿ ಹಾಗೂ ಕಮಲ ಮಹಲ್‌ ಬಳಿ ಕಟ್ಟಡಗಳ ನಿರ್ಮಾಣ ಕೆಲಸ ಭರದಿಂದ ನಡೆಯುತ್ತಿದೆ.

ಬಯಲು ಸಂಗ್ರಹಾಲಯದಂತಿರುವ ಹಂಪಿಯಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಬೇಕಾದರೆ ಪ್ರವಾಸಿಗರು ಸಾಕಷ್ಟು ಹೆಣಗಾಡಬೇಕಾಗುತ್ತದೆ. ಕಮಲಾಪುರ ವಸ್ತು ಸಂಗ್ರಹಾಲಯ, ಕಮಲ ಮಹಲ್‌ ಹಾಗೂ ವಿಜಯ ವಿಠಲ ದೇಗುಲದ ಬಳಿ ಟಿಕೆಟ್‌ ಕೌಂಟರ್‌ಗಳಿವೆ. ವಿರೂಪಾಕ್ಷ ದೇಗುಲದ ಆವರಣದಲ್ಲಿ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ರಾಣಿ ಸ್ನಾನಗೃಹ, ವಿರೂಪಾಕ್ಷ ದೇವಸ್ಥಾನ, ಕಮಲ ಮಹಲ್‌ ಬಳಿಯಷ್ಟೇ ಶೌಚಾಲಯದ ವ್ಯವಸ್ಥೆ ಇದೆ. ಇನ್ನುಳಿದ ಬಹುತೇಕ ಸ್ಮಾರಕಗಳ ಬಳಿ ಯಾವುದೇ ವ್ಯವಸ್ಥೆ ಇಲ್ಲ. 

ಹೆಚ್ಚಿನ ಸ್ಮಾರಕಗಳ ಬಳಿ ಉಪಾಹಾರ, ಊಟ, ಹಣ್ಣಿನ ರಸ, ಕಾಫಿ ಸೇರಿದಂತೆ ಇತರೆ ತಿನಿಸುಗಳು ಹಾಗೂ ಅಗತ್ಯ ವಸ್ತುಗಳು ಪ್ರವಾಸಿಗರಿಗೆ ಸಿಗುವುದಿಲ್ಲ. ಪುನಃ ಅವರು ಕಮಲಾಪುರ ಪಟ್ಟಣಕ್ಕೆ ಹೋಗಬೇಕು ಇಲ್ಲವೇ ನಗರಕ್ಕೆ ಹಿಂತಿರುಗುವಂತಹ ಸ್ಥಿತಿ ಇದೆ. ಪ್ರವಾಸಿಗರು ಎದುರಿಸುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಎ.ಎಸ್‌.ಐ. ಈಗ ಒಂದೇ ಸೂರಿನಡಿ ಟಿಕೆಟ್‌ ಕೌಂಟರ್‌, ಶೌಚಾಲಯ, ಉಪಾಹಾರ ಗೃಹ ತೆರೆಯಲು ಮುಂದಾಗಿದೆ. 

ಎ.ಎಸ್‌.ಐ.ನ ಈ ನಿರ್ಧಾರದಿಂದ ಪ್ರವಾಸಿಗರಿಗೆ ಅಲೆದಾಟ ತಪ್ಪಲಿದೆ. ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸಿಗಲಿವೆ. ವಿಶ್ವ ಪಾರಂಪರಿಕ ತಾಣವಾದರೂ ಹಂಪಿಯಲ್ಲಿ ಸೌಕರ್ಯಗಳ ಕೊರತೆ ಇದ್ದು, ದೇಶ–ವಿದೇಶಗಳಿಂದ ಬರುವವರು ಸಮಸ್ಯೆ ಎದುರಿಸುತ್ತಿದ್ದರು. ಕೆಲವರು ಈ ಕುರಿತು ಇಲಾಖೆ ವಿರುದ್ಧ ಹಲವು ಸಲ ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಹಂಪಿಗೆ ಭೇಟಿ ನೀಡಿದ್ದ ಸಂಸದ ವಿ.ಎಸ್‌. ಉಗ್ರಪ್ಪನವರು ಅಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಈಗ ಎಚ್ಚೆತ್ತುಕೊಂಡಿರುವ ಇಲಾಖೆಯು ಸಕಲ ರೀತಿಯ ಸೌಕರ್ಯ ಕಲ್ಪಿಸಲು ಚಿತ್ತ ಹರಿಸಿದೆ. ಇಲಾಖೆಯ ಈ ನಿರ್ಧಾರವನ್ನು ಸ್ಥಳೀಯರು, ಮಾರ್ಗದರ್ಶಿಗಳು ಸ್ವಾಗತಿಸಿದ್ದಾರೆ.

‘ಒಂದೇ ಕಟ್ಟಡದ ಅಡಿಯಲ್ಲಿ ಹಲವು ರೀತಿಯ ಸೌಕರ್ಯಗಳನ್ನು ಕಲ್ಪಿಸಬೇಕೆಂಬ ಬೇಡಿಕೆ ಬಹಳ ವರ್ಷಗಳಿಂದ ಇತ್ತು. ಕೊನೆಗೂ ಅದಕ್ಕೆ ಸ್ಪಂದಿಸಿರುವ ಎ.ಎಸ್‌.ಐ. ಈಗ ಕ್ರಮ ಕೈಗೊಂಡಿರುವುದು ಖುಷಿ ತಂದಿದೆ. ಇದರಿಂದ ಹಂಪಿಗೆ ಬರುವ ಪ್ರವಾಸಿಗರಿಗೆ ಸಾಕಷ್ಟು ಅನುಕೂಲವಾಗಲಿದೆ’ ಎಂದು ಮಾರ್ಗದರ್ಶಿ ಗೋಪಾಲ್‌, ಹಂಪಿ ನಿವಾಸಿ ರಾಜು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !