ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರ ರೈಲಿನ ಸಮಯ ಪರಿಷ್ಕರಿಸಲು ಆಗ್ರಹ

Last Updated 11 ಮಾರ್ಚ್ 2020, 9:14 IST
ಅಕ್ಷರ ಗಾತ್ರ

ಹೊಸಪೇಟೆ: ಹರಿಹರ–ಕೊಟ್ಟೂರು–ಹೊಸಪೇಟೆ ಪ್ರಯಾಣಿಕರ ರೈಲಿನ ಸಂಚಾರದ ಸಮಯ ಬದಲಿಸಬೇಕೆಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಆಗ್ರಹಿಸಿದೆ.

ಈ ಸಂಬಂಧ ಸಮಿತಿಯ ಪದಾಧಿಕಾರಿಗಳು ಬುಧವಾರ ರೈಲು ನಿಲ್ದಾಣದ ಸೂಪರಿಟೆಂಡೆಂಟ್‌ ಉಮೇಶ್‌ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.

‘ಎರಡು ದಶಕಗಳ ಹೋರಾಟದ ಫಲವಾಗಿ ಪ್ರಯಾಣಿಕರ ರೈಲು ಸೇವೆ ಆರಂಭಗೊಂಡಿದೆ. ಆದರೆ, ಪ್ರಸ್ತುತ ರೈಲು ಸಂಚಾರದ ಸಮಯದಿಂದ ಸಾರ್ವಜನಿಕರಿಗೆ ಪ್ರಯೋಜನವಾಗುತ್ತಿಲ್ಲ. ರೈಲು ನಿತ್ಯ ಬೆಳಿಗ್ಗೆ 6.30ಕ್ಕೆ ಹರಿಹರದಿಂದ ಹೊರಟು ಮಧ್ಯಾಹ್ನ 1ಕ್ಕೆ ನಗರಕ್ಕೆ ಬರುತ್ತಿದೆ. 130 ಕಿ.ಮೀ ಅಂತರ ಕ್ರಮಿಸಲು ಆರು ತಾಸು ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದಾಗಿ ಯಾರು ಕೂಡ ಈ ರೈಲಿನಲ್ಲಿ ಸಂಚರಿಸಲು ಇಷ್ಟಪಡುತ್ತಿಲ್ಲ’ ಎಂದು ತಿಳಿಸಿದರು.

‘ಈ ರೈಲನ್ನು ಬಳ್ಳಾರಿ ವರೆಗೆ ವಿಸ್ತರಿಸಬೇಕು. ಬಳ್ಳಾರಿ ಹಾಗೂ ಹರಿಹರದಿಂದ ಏಕಕಾಲಕ್ಕೆ ಬೆಳಿಗ್ಗೆ 7ಕ್ಕೆ ರೈಲು ಸಂಚಾರ ಬೆಳೆಸುವಂತೆ ಸಮಯ ಪರಿಷ್ಕರಿಸಬೇಕು. ಹೀಗೆ ಮಾಡಿದರೆ ಎರಡೂ ಕಡೆ ಓಡಾಡುವವರಿಗೆ ಅನುಕೂಲವಾಗುತ್ತದೆ. ನಿಗದಿತ ಸಮಯಕ್ಕೆ ರೈಲು ಸಂಚರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ವಿಜಯಪುರ–ಯಶವಂತಪುರ (ಗಾಡಿ ಸಂಖ್ಯೆ 06542) ರೈಲಿನ ಸಮಯ ಕೂಡ ಬದಲಿಸಬೇಕು. ಈ ರೈಲು ನಿತ್ಯ ರಾತ್ರಿ ಹತ್ತು ಗಂಟೆಯೊಳಗೆ ನಗರಕ್ಕೆ ಬರಬೇಕು. ಬೆಳಿಗ್ಗೆ 7ಗಂಟೆಯೊಳಗೆ ಯಶವಂತಪುರ ತಲುಪುವಂತೆ ಸಮಯ ಪರಿಷ್ಕರಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಒಂದುವೇಳೆ ಎರಡು ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮನೆ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಸಮಿತಿಯ ಮುಖಂಡರಾದ ವೈ. ಯಮುನೇಶ್‌, ಪ್ರಹ್ಲಾದ್ ಸ್ವಾಮೀಜಿ, ಎಂ.ಶಾಮಪ್ಪ ಅಗೋಲಿ, ಕೆ.ಮಹೇಶ್, ಹನುಮಂತಪ್ಪ ಪೂಜಾರ್, ಯು.ಅಶ್ವತಪ್ಪ, ಎ.ಮಲ್ಲಿಕಾರ್ಜುನ, ಜಿ.ಸೋಮಣ್ಣ, ಎಚ್‌.ಮಹೇಶ್, ಶರಣಗೌಡ, ಜಗದೀಶ್, ಪೀರಾನ್‌ ಸಾಬ್, ಎಲ್.ರಮೇಶ್, ಗೌಡಣ್ಣನವರ್, ಬಿ.ಜಹಾಂಗೀರ್, ಶೇಖರ್, ಪ್ರಭಾಕರ್, ನಾಗೇಶ್, ಮರಿಯಪ್ಪ, ಆರ್.ರಮೇಶ್ ಗೌಡ, ಲೋಕನಾಥನ್, ಏಕನಾಥ್, ಕೃಷ್ಣಮೂರ್ತಿ, ಶಿವಾನಂದ, ವಿಶ್ವನಾಥ ಕೌತಾಳ್, ಯೇಸು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT