ಬುಡಕಟ್ಟು ಜನಕ್ಕೆ ಅಕ್ಷರ ಜ್ಞಾನ ಸಿಗಬೇಕು: ಡಾ.ಕೆ.ಎಂ.ಮೇತ್ರಿ

7

ಬುಡಕಟ್ಟು ಜನಕ್ಕೆ ಅಕ್ಷರ ಜ್ಞಾನ ಸಿಗಬೇಕು: ಡಾ.ಕೆ.ಎಂ.ಮೇತ್ರಿ

Published:
Updated:
Deccan Herald

ಹೊಸಪೇಟೆ: ‘ಅನೇಕ ಬುಡಕಟ್ಟು ಸಮುದಾಯಗಳಿಗೆ ಈಗಲೂ ಸರ್ಕಾರ, ಸಂವಿಧಾನ ಏನೆಂದರೆ ಗೊತ್ತಿಲ್ಲ. ಅದರ ಬಗ್ಗೆ ಕೆಳಹಂತದಿಂದ ಅವರಿಗೆ ತಿಳಿವಳಿಕೆ ಮೂಡಿಸುವ ಅಗತ್ಯವಿದೆ’ ಎಂದು ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟು ಒಕ್ಕೂಟದ ರಾಜ್ಯ ಘಟಕದ ಗೌರವ ಅಧ್ಯಕ್ಷ ಡಾ.ಕೆ.ಎಂ.ಮೇತ್ರಿ ತಿಳಿಸಿದರು.

ಒಕ್ಕೂಟದಿಂದ ಭಾನುವಾರ ನಗರದ ಬುಡ್ಗ ಜಂಗಮ ಕಾಲೊನಿಯಲ್ಲಿ ಹಮ್ಮಿಕೊಂಡಿದ್ದ ‘ಬುಡಕಟ್ಟು ಸಮುದಾಯಗಳ ಸ್ಥಿತಿಗತಿ ಹಾಗೂ ಅವುಗಳ ಶ್ರೇಯೋಭಿವೃದ್ಧಿಗೆ ಸರ್ಕಾರ ವೆಚ್ಚ ಮಾಡುತ್ತಿರುವ ಅನುದಾನದ ಸದ್ಭಳಕೆ’ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.

‘2015–16ನೇ ಸಾಲಿನಲ್ಲಿ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರವು ₨250 ಕೋಟಿ ನೀಡಿತು. ಆದರೆ, ಅದು ಸಮರ್ಪಕವಾಗಿ ಬಳಕೆಯಾಗಿಲ್ಲ. ಸಮುದಾಯಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ. ಅದಕ್ಕೆ ಪ್ರಮುಖ ಕಾರಣ ಸಮುದಾಯದವರಲ್ಲಿ ಅದರ ಬಗ್ಗೆ ತಿಳಿವಳಿಕೆ ಇಲ್ಲದಿರುವುದು’ ಎಂದರು.

‘ಸಮುದಾಯದ ಪ್ರತಿಯೊಬ್ಬರಿಗೂ ಅಕ್ಷರ ಜ್ಞಾನ ಸಿಗಬೇಕು. ಸಂವಿಧಾನ ನಮಗೆ ಕೊಟ್ಟಿರುವ ಹಕ್ಕುಗಳ ಬಗ್ಗೆ ಅರಿತುಕೊಳ್ಳಬೇಕು. ಕನ್ನಡ ಪುಸ್ತಕ ಪ್ರಾಧಿಕಾರವು ಬುಡಕಟ್ಟು ಸಮುದಾಯಗಳ ಕುರಿತು ಪ್ರಕಟಿಸಿರುವ 22 ಪುಸ್ತಕಗಳು ಸಮುದಾಯದ ಬಗ್ಗೆ ತಿಳಿದುಕೊಳ್ಳಲು ಬಹಳ ಸಹಕಾರಿಯಾಗಿದೆ’ ಎಂದು ವಿವರಿಸಿದರು.

‘ಸಿಂಧೋಳಿ, ಚೆನ್ನದಾಸರು, ಶಿಳ್ಳೆಕ್ಯಾತರಿಗೆ ಸರ್ಕಾರ ಜಾತಿ ಪ್ರಮಾಣ ಪತ್ರವೇ ನೀಡುತ್ತಿರಲಿಲ್ಲ. ಅವರಲ್ಲಿ ತಿಳಿವಳಿಕೆ ಬಂದು, ಹೋರಾಟ ಮಾಡಿದ ನಂತರ ಈಗ ಪ್ರಮಾಣ ಪತ್ರ ಸಿಗುತ್ತಿದೆ. ಅದು ಎಲ್ಲ ಸಮುದಾಯಗಳಲ್ಲಿ ಬರಬೇಕು’ ಎಂದು ಹೇಳಿದರು.

ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಭಾಸ್ಕರ್ ದಾಸ್ ಹೆಕ್ಕರ್, ಉಪಾಧ್ಯಕ್ಷ ಚಾವಡಿ ಲೋಕೇಶ್, ಪ್ರಧಾನ ಕಾರ್ಯದರ್ಶಿ ಜಗದೀಶ್, ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ಸಣ್ಣ ಮಾರೆಪ್ಪ, ಮುಖಂಡರಾದ ಹನುಮಂತಪ್ಪ, ಶಿವಣ್ಣ, ಎಚ್‌.ಪಿ. ಶಿಕಾರಿರಾಮ, ರಾಮು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !