ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕ್ಷೀಣ; ಪ್ರವಾಹದಿಂದ ಮುಂದುವರಿದ ಸಂಕಷ್ಟ

Last Updated 10 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಲಪ್ರಭಾ ಹಾಗೂ ಘಟಪ್ರಭಾ ನದಿಗಳಲ್ಲಿನ ಪ್ರವಾಹ ಪರಿಸ್ಥಿತಿ ಇಳಿಮುಖವಾಗಿದ್ದರೂ ನೆರೆಯ ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಕೃಷ್ಣಾ ನದಿ ಪಾತ್ರದ ಜನರನ್ನು ಸಂಕಷ್ಟಕ್ಕೀಡು ಮಾಡಿದೆ.

ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರ ಮಳೆ ಕ್ಷೀಣಿಸಿದೆ. ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಮಂಗಳವಾರ ಕೃಷ್ಣಾ ನದಿಗೆ 1.9 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿರುವುದು ಆತಂಕ ಮೂಡಿಸಿದೆ. ದೂಧ್‌ಗಂಗಾ ನದಿ ಒಳ ಹರಿವಿನಲ್ಲೂ ನಿರಂತರ ಏರಿಕೆ ಕಂಡು ಬರುತ್ತಿದ್ದು ಈ ಭಾಗದ ಎರಡು ಸೇತುವೆಗಳು ಮುಳುಗಡೆಯಾಗಿವೆ. ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕುಗಳಲ್ಲಿ ಈ ಮುಂಚೆ ಮುಳುಗಡೆಯಾಗಿರುವ ಏಳು ಸೇತುವೆಗಳು ಈಗಲೂ ಜಲಾವೃತ ಸ್ಥಿತಿಯಲ್ಲಿಯೇ ಇವೆ.

ಮತ್ತೊಮ್ಮೆ ಕೃಷ್ಣಾ ನದಿಗೆ ಮಹಾಪೂರ ಬಂದಿರುವುದರಿಂದ ಅಥಣಿ ತಾಲ್ಲೂಕಿನ ನದಿತೀರದ ಗ್ರಾಮಗಳಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಜನರು ಪ್ರಾಣ ಭಯದಲ್ಲಿದ್ದಾರೆ. ತಾಲ್ಲೂಕಿನ ಹುಲಗಬಾಳಿ ಗ್ರಾಮದ ಮಾಂಗ್ ವಸತಿ ತೋಟ ನಡುಗಡ್ಡೆಯಾಗಿದೆ. ಅಲ್ಲಿ 40 ಕುಟುಂಬಗಳಿವೆ. ಪ್ಲಾಸ್ಟಿಕ್‌ ಡ್ರಮ್‌ನಿಂದ ಸಿದ್ಧಪಡಿಸಿದ ತೆಪ್ಪದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯಲಾಗುತ್ತಿದೆ. ಒಂದು ವಾರದಿಂದಲೂಅವರು ಹೀಗೆಯೇ ಶಾಲೆಗಳಿಗೆ ಹೋಗುತ್ತಿದ್ದಾರೆ.

ಬಾಗಲಕೋಟೆಯ ಮುಧೋಳ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಸಾವಿರಾರು ಎಕರೆ ಪೈರುಮತ್ತೆ ಘಟಪ್ರಭಾ ನದಿಯ ಪ್ರವಾಹದಿಂದ ಆವೃತವಾಗಿದೆ. ಮಾಚಕನೂರಿನ ಇತಿಹಾಸ ಪ್ರಸಿದ್ಧ ಹೊಳೆ ಬಸವೇಶ್ವರ ದೇವಸ್ಥಾನ ನೀರಿನಲ್ಲಿ ಮುಳುಗಿದೆ. ನೆರೆ ನೀರಿನಿಂದ ಸತತ ಮೂರನೇ ದಿನ ಹುಬ್ಬಳ್ಳಿ- ಸೊಲ್ಲಾಪುರ ನಡುವಿನ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಸಂಚಾರ ಸ್ಥಗಿತಗೊಂಡಿದೆ.

ಹೊಳೆ ಆಚೆಯ ಕೊಣ್ಣೂರ ಪಟ್ಟಣದಲ್ಲಿ ಮಲಪ್ರಭೆಯ ಆಟಾಟೋಪ ವ್ಯಾಪಕ ಹಾನಿ ಮಾಡಿದೆ. ಜನವಸತಿ ಪ್ರದೇಶ, ಬಸ್ ನಿಲ್ದಾಣ ಜಲಾವೃತವಾಗಿದ್ದು, ಊರ ಪಕ್ಕದ ಸೀಬೆ, ದಾಳಿಂಬೆ ತೋಟಗಳು ನೀರಿನಲ್ಲಿ ಮುಳುಗಿವೆ.

ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಬಾಧಿತವಾಗಿದ್ದ ಹುನಗುಂದ ತಾಲ್ಲೂಕಿನ ಕೂಡಲಸಂಗಮ ಪರಿಸ್ಥಿತಿ ಸುಧಾರಿಸಿದೆ. ದೇವಸ್ಥಾನವನ್ನು ಆವರಿಸಿದ್ದ ನೀರಿನ ಪ್ರಮಾಣ ಇಳಿಕೆಯಾಗಿದೆ. ಹೀಗಾಗಿ ಸಂಗಮನಾಥನ ದರ್ಶನಕ್ಕೆ ಮತ್ತೆ ಅವಕಾಶ ಕಲ್ಪಿಸಲಾಗಿದೆ. ಜಮಖಂಡಿ ತಾಲ್ಲೂಕಿನಲ್ಲಿ ಕೃಷ್ಣೆಯ ತೀರದಲ್ಲೂ ಪ್ರವಾಹದ ಆರ್ಭಟ ಕೊಂಚ ತಗ್ಗಿದೆ.

ಹೊಸಪೇಟೆಯ ತುಂಗಭದ್ರಾ ಜಲಾಶಯದ ಒಳಹರಿವು, ಹೊರಹರಿವು ಸತತವಾಗಿ ತಗ್ಗುತ್ತಿದೆ. ಆದರೆ ಹಂಪಿಯ ಕೆಲ ಸ್ಮಾರಕಗಳು ಈಗಲೂ ನೀರಿನಲ್ಲಿಯೇ ಇವೆ.

ಪರಿಹಾರ ಕೇಂದ್ರದಲ್ಲಿದ್ದ ಬಾಲಕ ಸಾವು

ರಾಮದುರ್ಗ (ಬೆಳಗಾವಿ): ತಾಲ್ಲೂಕಿನ ಸುರೇಬಾನ ಎಪಿಎಂಸಿ ಆವರಣದಲ್ಲಿನ ಪರಿಹಾರ ಕೇಂದ್ರದಲ್ಲಿದ್ದ ಬಾಲಕ ಅಬ್ದುಲ್‌ ರೆಹಮಾನ್‌ ಮುಲ್ಲಾನವರ (5) ಜ್ವರದಿಂದ ಸೋಮವಾರ ರಾತ್ರಿ ಮೃತಪಟ್ಟಿದ್ದಾನೆ.

ಮಲ‍ಪ್ರಭಾ ನದಿ ಪ್ರವಾಹದಿಂದಾಗಿ ದೊಡ್ಡಹಂಪಿಹೊಳಿ ಗ್ರಾಮದಲ್ಲಿ ಮನೆ ಬಿದ್ದಿರುವುದರಿಂದ ಮುಲ್ಲಾನವರ ಕುಟುಂಬ ಪರಿಹಾರ ಕೇಂದ್ರದಲ್ಲಿ ನಾಲ್ಕೈದು ದಿನಗಳಿಂದ ಆಶ್ರಯ ಪಡೆದಿದೆ. ಬಾಲಕನಿಗೆ ಚಿಕಿತ್ಸೆ ಕೊಡಿಸಲು ಪೋಷಕರು ಪರದಾಡಿದ್ದರು ಎನ್ನಲಾಗಿದೆ.

ಬಾಲಕನ ಪೋಷಕರಿಗೆ ₹ 5 ಲಕ್ಷ ಪರಿಹಾರದ ಚೆಕ್‌ ಅನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೀಡಿ, ಸಾಂತ್ವನ ಹೇಳಿದರು.

ಹರಿಗೋಲು ಮಗುಚಿ ಇಬ್ಬರ ಸಾವು

ಹೊಸಪೇಟೆ: ಹರಿಗೋಲು ಮಗುಚಿ ಬಿದ್ದು ಇಬ್ಬರು ಯುವಕರು ಮಂಗಳವಾರ ತಾಲ್ಲೂಕಿನ ಡಣಾಪುರ ಬಳಿಯ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಮೃತಪಟ್ಟಿದ್ದಾರೆ.

ಡಣಾಪುರದ ಡಿ.ಕೆ. ಬಸವರಾಜ (25), ಮೈಲಾಪುರದ ಹರೀಶ್‌(17) ಮೃತರು. ‘ಹಿನ್ನೀರಿನಲ್ಲಿ ವಿಹರಿಸಲು ಹೋಗಿದ್ದರು. ಅಗ್ನಿಶಾಮಕ ದಳ ಸಿಬ್ಬಂದಿ ಸುಮಾರು ಎರಡು ಗಂಟೆ ಶೋಧ ನಡೆಸಿ ಮೃತದೇಹಗಳನ್ನು ಹೊರತೆಗೆದಿದೆ’ ಎಂದು ಡಿವೈಎಸ್ಪಿ ಎಂ.ಸಿ. ಶಿವಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಕರಾವಳಿ: ಇಂದು, ನಾಳೆ ವ್ಯಾಪಕ ಮಳೆ

ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಸೆ. 11 ಹಾಗೂ 12ರಂದು ವ್ಯಾಪಕ ಮಳೆಯಾಗಲಿದೆ. ಬಳಿಕ ಈ ಭಾಗದಲ್ಲಿ ಮಳೆ ಪ್ರಮಾಣ ತಗ್ಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್‌.ಪಾಟೀಲ ‘ಪ‍್ರಜಾವಾಣಿ’ಗೆ ತಿಳಿಸಿದರು.

ಪಶ್ಚಿಮಘಟ್ಟ ಪ್ರದೇಶಗಳಲ್ಲಿಮಂಗಳವಾರದವರೆಗೆ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿತ್ತು. ಇಂದಿನಿಂದ ಈ ಭಾಗದಲ್ಲಿ ಮಳೆ ಕಡಿಮೆಯಾಗಲಿದೆ. ಉತ್ತರ ಒಳನಾಡಿನ ಕೆಲವೆಡೆ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹೇಳಿದರು.

ನೆರೆ ಸಂತ್ರಸ್ತರಿಗೆ 100 ಮನೆಗಳ ನಿರ್ಮಾಣ: ಶಿವಾಚಾರ್ಯ ಸ್ವಾಮೀಜಿ

ದಾವಣಗೆರೆ: ನೆರೆ ಸಂತ್ರಸ್ತರಿಗೆ ಶ್ರೀಶೈಲ ಪೀಠದಿಂದ 634 ಗ್ರಾಂ ಚಿನ್ನವನ್ನು ಮಾರಾಟ ಮಾಡಿ 100 ಮನೆಗಳನ್ನು ನಿರ್ಮಿಸಲು ಸಂಕಲ್ಪ ಮಾಡಲಾಗಿದೆ ಎಂದು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

‘ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಿಕೊಡುವ ಉದ್ದೇಶದಿಂದ ಶ್ರೀಶೈಲ ಪೀಠ ಹಾಗೂ ಇತರೆ ಮಠಾಧೀಶರ ಹಾಗೂ ಸಮಾಜದ ಭಕ್ತರ ಸಹಯೋಗದೊಂದಿಗೆ ಮನೆಗಳನ್ನು ನಿರ್ಮಿಸುವ ಯೋಜನೆ ಇದೆ. ಶ್ರೀಶೈಲ ಪೀಠದ ಪಂಡಿತಾರಾಧ್ಯರ ಉದ್ಭವಮೂರ್ತಿಗೆ ಕವಚ ನಿರ್ಮಿಸುವ ಉದ್ದೇಶದಿಂದ ಇಟ್ಟಿದ್ದ ಚಿನ್ನವನ್ನು ಮನೆಗಳ ನಿರ್ಮಾಣಕ್ಕೆ ವಿನಿಯೋಗಿಸಲಾಗುವುದು’ ಎಂದು ಮಂಗಳವಾರ ಮಾಹಿತಿ ನೀಡಿದರು.

‘ಹೊನ್ನಾಳಿ ಹಿರೇಕಲ್ಮಠದ ಸ್ವಾಮೀಜಿ, ಕುರುಗೋಡದ ರಾಘವಾಂಕ ಸ್ವಾಮೀಜಿ, ಸೊಲ್ಲಾಪುರ ಹೊಟಗಿ ಬೃಹನ್ಮಠದ ಸ್ವಾಮೀಜಿ, ಬಸವನಬಾಗೇವಾಡಿಯ ಶಾಸಕ ಶಿವಾನಂದ ಪಾಟೀಲ್, ದೇವದುರ್ಗದ ಭೀಮನಗೌಡ ಪೊಲೀಸ್ ಪಾಟೀಲ್, ಕಾರಟಗಿಯ ಚನ್ನಬಸಯ್ಯ ಮುತ್ತಿನಪೆಂಡಿಮಠ ಅವರು ತಲಾ ಒಂದು ಮನೆಗಳನ್ನು ನಿರ್ಮಿಸಿಕೊಡಲು ವಾಗ್ದಾನ ಮಾಡಿದ್ದು, ಅನೇಕರು ತಮ್ಮ ಶಕ್ತ್ಯಾನುಸಾರ ಸಹಾಯ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ’ ಎಂದು ಹೇಳಿದರು.

ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಟ್ಟ ಹಣವನ್ನು ಪ್ರವಾಹ ಸಂತ್ರಸ್ತರಿಗೆಬಳಸುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ‌.ಎಸ್. ಯಡಿಯೂರಪ್ಪಸೂಚನೆ

ಹುಬ್ಬಳ್ಳಿ/ಬೆಳಗಾವಿ: ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಟ್ಟ ಹಣವನ್ನು ಪ್ರವಾಹ ಸಂತ್ರಸ್ತರ ನೆರವಿಗೆ ಬಳಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಿ‌.ಎಸ್. ಯಡಿಯೂರಪ್ಪ ಹೇಳಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ಬೆಳಗಾವಿ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ‌ ನೀಡಿದ್ದೇನೆ. ನಿರಾಶ್ರಿತರಿಗೆ ಕೂಡಲೇ ಶೆಡ್ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

ಕೇಂದ್ರದಿಂದ ನೆರೆ ಪರಿಹಾರ ಬಂದಿದೆಯಾ ಎನ್ನುವ ಪ್ರಶ್ನೆಗೆ ‘ಕೇಂದ್ರ ತಂಡ ರಾಜ್ಯಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದೆ. ಶೀಘ್ರದಲ್ಲಿಯೇ ಹಣ ಬರಲಿದೆ’ ಎಂದರು.

ಮಹದಾಯಿ ತೀರ್ಮಾನ: ‘ಮಹದಾಯಿ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ಈಗಾಗಲೇ ಮಹಾರಾಷ್ಟ್ರದ ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದೇನೆ. ಸದ್ಯದಲ್ಲಿಯೇ ಗೋವಾ ಮುಖ್ಯಮಂತ್ರಿ ಜೊತೆ ಚರ್ಚಿಸಿ, ತೀರ್ಮಾನ ಕೈಗೊಳ್ಳುವೆ’ ಎಂದರು.

ಪರಿಹಾರಕ್ಕೆ ಆದ್ಯತೆ: ‘ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡುವ ಕುರಿತು ಕೇಂದ್ರ ಸರ್ಕಾರದ ಜೂತೆ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT