ಸೋಮವಾರ, ಮಾರ್ಚ್ 1, 2021
29 °C
10 ಕ್ರಸ್ಟ್‌ಗೇಟ್‌ಗಳಿಂದ ನೀರು ಬಿಡುಗಡೆ; ಇಂದು ಎಲ್ಲ ಗೇಟ್‌ ತೆರೆಯುವ ಸಾಧ್ಯತೆ

ತುಂಗಭದ್ರಾ ನದಿಗೆ ಬಂತು ಜೀವಕಳೆ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಮಳೆಗಾಲ ಆರಂಭವಾಗಿ ಎರಡು ತಿಂಗಳಾದರೂ ಸಮರ್ಪಕವಾಗಿ ಮಳೆಯಾಗದ ಕಾರಣ ಇಲ್ಲಿನ ತುಂಗಭದ್ರಾ ನದಿ ಬತ್ತು ಹೋಗುವ ಹಂತಕ್ಕೆ ಬಂದಿತ್ತು. ಆದರೆ, ಶನಿವಾರ ಸಂಜೆ ಅಣೆಕಟ್ಟೆಯ ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರು ಹರಿಸಿದ್ದರಿಂದ ನದಿಗೆ ಜೀವ ಕಳೆ ಬಂದಿದೆ.

ನೀರಿಲ್ಲದೆ ಕಲ್ಲು ಬಂಡೆಗಳು, ಪೊದೆಗಳಷ್ಟೇ ನದಿ ಪಾತ್ರದಲ್ಲಿ ಕಾಣಿಸುತ್ತಿತ್ತು. ಜಲಚರಗಳು ನೀರಿಗಾಗಿ ತಹತಹಿಸುತ್ತಿದ್ದವು. ಆದರೆ, ಈಗ ಅದು ದೂರವಾಗಿದೆ. ನದಿ ಪಾತ್ರ ಮೈದುಂಬಿಕೊಂಡು ಹರಿಯುತ್ತಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ರೈತರು, ಸಾರ್ವಜನಿಕರು ಶನಿವಾರ ತುಂಗಭದ್ರೆಯ ಚೆಲುವು, ವಯ್ಯಾರ ನೋಡಲು ಬಂದಿದ್ದರು. 

ಜಲಾಶಯದ ಪರಿಸರದಲ್ಲಿ ಜನಜಾತ್ರೆ, ವಾಹನಗಳ ಕಾರುಬಾರು ಕಂಡು ಬಂತು. ಸ್ನೇಹಿತರು, ಕುಟುಂಬ ಸದಸ್ಯರೊಂದಿಗೆ ಬಂದಿದ್ದ ಜನರು ನದಿ ಆಸುಪಾಸಿನಲ್ಲಿ, ಅಣೆಕಟ್ಟೆಯ ಸಮೀಪ ಸೆಲ್ಫಿ, ಛಾಯಾಚಿತ್ರಗಳನ್ನು ತೆಗೆದುಕೊಂಡು ಸಂಭ್ರಮಿಸಿದರೆ, ರೈತರು, ’ಕೊನೆಗೂ ನಮಗೆ ತುಂಗಭದ್ರೆ ಉಳಿಸಿದಳು. ಅವಳಿಗೆ ನಮೋ ನಮೋ..‘ ಎಂದು ಉದ್ಗಾರ ತೆಗೆಯುತ್ತಿರುವ ದೃಶ್ಯ ಕಂಡು ಬಂತು.

ನಾಲ್ಕೈದು ದಿನಗಳ ಹಿಂದೆ ಅಣೆಕಟ್ಟೆಯ ಪರಿಸರದಲ್ಲಿ ಬಿಕೋ ಎನ್ನುವ ವಾತಾವರಣ ಇತ್ತು. ಅದೆಲ್ಲ ಈಗ ಬದಲಾಗಿದೆ. ಅದೀಗ ಮದುವೆ ಮನೆಯಂತಾಗಿದ್ದು, ಎಲ್ಲೆಡೆ ಸಂಭ್ರಮ ಕಂಡು ಬರುತ್ತಿದೆ. ಸುತ್ತಮುತ್ತಲಿನ ಹೋಟೆಲ್‌, ಗೂಡಂಗಡಿಗಳವರಿಗೆ ಕೈತುಂಬ ಕೆಲಸ ಸಿಕ್ಕಿದೆ. ದಿನವಿಡೀ ದುಡಿದು ಕೈತುಂಬ ಹಣ ಗಳಿಸುತ್ತಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದರೆ ಇನ್ನೂ ಒಂದು ತಿಂಗಳ ವರೆಗೆ ಇದೇ ವಾತಾವರಣ ಇರುವ ಸಾಧ್ಯತೆ ಇದೆ. 

ಸದ್ಯ ಜಲಾಶಯದಲ್ಲಿ 90 ಟಿ.ಎಂ.ಸಿ. ಅಡಿ ನೀರು ಸಂಗ್ರಹವಾಗಿದ್ದು, 2 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿದು ಬರುತ್ತಿದೆ. ಭಾನುವಾರ ಜಲಾಶಯ ಸಂಪೂರ್ಣ ಭರ್ತಿಯಾಗುವ ಸಾಧ್ಯತೆ ಇರುವುದರಿಂದ ಶನಿವಾರ ಸಂಜೆ ಹತ್ತು ಗೇಟ್‌ಗಳನ್ನು ಒಂದೂವರೆ ಅಡಿವರೆಗೆ ತೆರೆದು 60 ಸಾವಿರ ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ. ಭಾನುವಾರ ಬೆಳಿಗ್ಗೆ ಎಲ್ಲ ಗೇಟ್‌ಗಳನ್ನು ತೆರೆದು 2 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ನದಿಗೆ ಬಿಡುವ ಸಾಧ್ಯತೆ ಇದೆ. 

ಶನಿವಾರ ಸಂಜೆ ಕೊಪ್ಪಳ ಸಂಸದ ಕರಡಿ ಸಂಗಣ್ಣ, ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಜಿ. ನಾಗಮೋಹನ್‌, ತುಂಗಭದ್ರಾ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಅವರು ಅಣೆಕಟ್ಟೆಗೆ ಪೂಜೆ ಸಲ್ಲಿಸಿ, ಬಾಗಿನ ಸಮರ್ಪಿಸಿ, ನದಿಗೆ ನೀರು ಹರಿಸಿದರು.

’ಇಡೀ ರಾಜ್ಯದಲ್ಲಿ ಮಳೆಯಾಗುತ್ತಿದೆ. ಆದರೆ, ಬಳ್ಳಾರಿ, ಕೊಪ್ಪಳ ಜಿಲ್ಲೆಯಲ್ಲಿ ಮಳೆಯಿಲ್ಲ. ಅಣೆಕಟ್ಟೆ ತುಂಬುವ ವಿಶ್ವಾಸವಿರಲಿಲ್ಲ. ಆದರೆ, ನಾವು ಅದೃಷ್ಟವಂತರು. ಅಪಾರ ಪ್ರಮಾಣದಲ್ಲಿ ನೀರು ಬಂದು ಜಲಾಶಯ ತುಂಬುತ್ತಿದೆ. ರೈತರು ಯಾವುದೇ ಆತಂಕವಿಲ್ಲದೆ ಕೃಷಿ ಚಟುವಟಿಕೆ ಕೈಗೊಳ್ಳಬಹುದು‘ ಎಂದು ಕರಡಿ ಸಂಗಣ್ಣ ಹೇಳಿದರು.

’ಪ್ರತಿ ವರ್ಷ ಜಲಾಶಯ ತುಂಬಿದ ಬಳಿಕ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ನದಿಯಲ್ಲಿ ಹರಿದು ಹೋಗುತ್ತಿದೆ. ಸಮನಾಂತರ ಜಲಾಶಯ ನಿರ್ಮಿಸುವುದರ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ಈಗಾಗಲೇ ಈ ಕುರಿತು ಸಭೆ ಕೂಡ ನಡೆದಿದೆ. ಮತ್ತೊಮ್ಮೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ, ಆದಷ್ಟು ಬೇಗ ಕೆಲಸ ಕೈಗೆತ್ತಿಕೊಳ್ಳಲು ಮನವಿ ಮಾಡುವೆ‘ ಎಂದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು