ಶಾಂತವಾದ ತುಂಗಭದ್ರಾ ಮುನಿಸು

7
ತಗ್ಗಿದ ಒಳಹರಿವು; ಪ್ರವಾಹ ಇಳಿಮುಖ

ಶಾಂತವಾದ ತುಂಗಭದ್ರಾ ಮುನಿಸು

Published:
Updated:
Deccan Herald

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ತಗ್ಗಿದ್ದು, ನದಿಯಲ್ಲಿ ನೀರು ಇಳಿಮುಖಗೊಂಡಿದೆ.

ತಾಲ್ಲೂಕಿನ ಹಂಪಿ ಸುತ್ತಮುತ್ತಲಿನ ಗದ್ದೆಗಳಿಗೆ ನುಗ್ಗಿದ ನೀರು ನದಿಯಲ್ಲಿ ಹರಿದು ಹೋಗಿದೆ. ಜಲಾವೃತವಾಗಿದ್ದ ಹಂಪಿಯ ಪುರಂದರ ಮಂಟಪದ ಗೋಪುರ ಗೋಚರಿಸುತ್ತಿದೆ. ವಿಜಯನಗರ ಕಾಲದ ಕಾಲು ಸೇತುವೆಯ ಅರ್ಧ ಭಾಗ ಕಾಣಿಸಿಕೊಳ್ಳುತ್ತಿದೆ. ಕೋದಂಡರಾಮ ದೇಗುಲದಿಂದ ನೀರು ಹೊರ ಹೋಗಿದ್ದು, ಭಕ್ತರು ಭಾನುವಾರ ಭೇಟಿ ನೀಡಿ ದರ್ಶನ ಪಡೆದರು. ಕಂಪ್ಲಿ–ಸಿರುಗುಪ್ಪ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಯಿಂದ ನೀರು ಇಳಿದು ಹೋಗಿದೆ.

ಆ. 14ರಿಂದ ಆ. 17ರ ವರೆಗೆ 2 ರಿಂದ 2.50 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ನದಿಗೆ ಬಿಟ್ಟಿದ್ದರಿಂದ ತಾಲ್ಲೂಕಿನ ಹಂಪಿಯ ಸ್ಮಾರಕಗಳು ಸಂಪೂರ್ಣ ಮುಳುಗಡೆಯಾಗಿದ್ದವು. ಬಾಳೆ ಹಾಗೂ ಕಬ್ಬಿನ ತೋಟಕ್ಕೆ ಅಪಾರ ನೀರು ನುಗ್ಗಿತ್ತು. ಕಂಪ್ಲಿ–ಸಿರುಗುಪ್ಪ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿ, ಸಂಚಾರ ಸ್ಥಗಿತಗೊಂಡಿತ್ತು.

ನದಿ ಅಂಚಿನ ಸುಮಾರು 35ಕ್ಕೂ ಹೆಚ್ಚು ಕುಟುಂಬಗಳನ್ನು ಜಿಲ್ಲಾ ಆಡಳಿತ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿತ್ತು. ಹೊಸಪೇಟೆ, ಕಂಪ್ಲಿ, ಸಿರುಗುಪ್ಪ ಹಾಗೂ ಹೂವಿನಹಡಗಲಿಯಲ್ಲಿ ಒಟ್ಟು 2,000 ಹೆಕ್ಟೇರ್‌ಗೂ ಅಧಿಕ ಬೆಳೆ ಜಲಾವೃತವಾಗಿತ್ತು. ಈಗ ನೀರು ಇಳಿಮುಖಗೊಂಡಿದ್ದರಿಂದ ಸಹಜ ಸ್ಥಿತಿಗೆ ಬರುತ್ತಿದೆ.

‘ಭತ್ತದ ಬೆಳೆಗೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ನಾಲ್ಕೈದು ದಿನ ಗದ್ದೆಯಲ್ಲಿಯೇ ನದಿ ನೀರು ಉಳಿದುಕೊಂಡಿದ್ದರೆ ಸಂಪೂರ್ಣ ಹಾಳಾಗುತ್ತಿತ್ತು’ ಎಂದು ಕೃಷಿ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಭಾನುವಾರ ಜಲಾಶಯದಲ್ಲಿ 1,630.53 ಅಡಿ ನೀರಿನ ಸಂಗ್ರಹವಿತ್ತು. 1,01,175 ಕ್ಯುಸೆಕ್‌ ಒಳಹರಿವು ಇದ್ದರೆ, 76,650 ಕ್ಯುಸೆಕ್‌ ಹೊರಹರಿವು ದಾಖಲಾಗಿದೆ. 22 ಕ್ರಸ್ಟ್‌ಗೇಟ್‌ಗಳ ಮೂಲಕ 62,194 ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ.

 

 

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !