ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡತಗಳ ವಶ. ಗೋದಾಮಿಗೆ ಬೀಗಮುದ್ರೆ

ಎಂಎಸ್‌ಪಿಸಿ ಗೋದಾಮಿನ ಮೇಲೆ ಉಪ ವಿಭಾಗಾಧಿಕಾರಿ ಯಶೋದಾ ದಾಳಿ
Last Updated 6 ಮಾರ್ಚ್ 2018, 12:12 IST
ಅಕ್ಷರ ಗಾತ್ರ

ಪಾಂಡವಪುರ: ಆಹಾರ ಧಾನ್ಯಗಳ ಅಕ್ರಮ ದಾಸ್ತಾನು ಆರೋಪದ ಮೇಲೆ ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಪೂರೈಸುವ ಮಹಿಳಾ ಪೂರಕ ಪೌಷ್ಟಿಕ ಆಹಾರ ತರಬೇತಿ ಮತ್ತು ತಯಾರಿಕೆ ಕೇಂದ್ರದ (ಎಂಎಸ್‌ಪಿಸಿ) ಗೋದಾಮಿನ ಮೇಲೆ ಉಪ ವಿಭಾಗಾಧಿಕಾರಿ ಆರ್.ಯಶೋದಾ ಮತ್ತು ಸಿಬ್ಬಂದಿ ದಾಳಿ ನಡೆಸಿದರು.

ತಹಶೀಲ್ದಾರ್ ಡಿ.ಹನುಮಂತರಾಯಪ್ಪ ಅವರೂ ಸೋಮವಾರ ಬೆಳಿಗ್ಗೆ ನಡೆದ ದಿಢೀರ್ ದಾಳಿಯಲ್ಲಿದ್ದರು. ಕಡತ ವಶಪಡಿಸಿಕೊಂಡು ಬೀಗಮುದ್ರೆ ಹಾಕಲಾಯಿತು.

ಮೂರು ಗಂಟೆಗೂ ಹೆಚ್ಚು ಕಾಲ ಗೋದಾಮಿನಲ್ಲಿರುವ ಆಹಾರ ಧಾನ್ಯಗಳ ಸಂಗ್ರಹ ಮತ್ತು ಕಡತಗಳನ್ನು ಪರಿಶೀಲನೆ ನಡೆಸಲಾಯಿತು.

ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕೆ ಮತ್ತು ತರಬೇತಿ ಕೇಂದ್ರ (ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಾಯೋಜಕತ್ವ) ಪಾಂಡವಪುರ ಮತ್ತು ಕೆ.ಆರ್.ಪೇಟೆ ತಾಲ್ಲೂಕಿನ ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರು, ಬಾಣಂತಿಯರು ಮತ್ತು ಕಿಶೋರಿಯರಿಗೆ ಪೌಷ್ಟಿಕ ಆಹಾರ ಪೂರೈಕೆ ಮಾಡಲು ಗುತ್ತಿಗೆ ಪಡೆದಿದೆ.

ಫಲಾನುಭವಿಗಳಿಗೆ ಸಮರ್ಪಕವಾಗಿ ಪೌಷ್ಟಿಕ ಆಹಾರ ವಿತರಣೆ ಆಗುತ್ತಿಲ್ಲ ಎಂಬ ಆರೋಪದ ಮೇಲೆ ಗೋದಾಮಿನ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು ಎಂಬುದಾಗಿ ತಿಳಿದುಬಂದಿದೆ.

ಗೋದಾಮಿನಲ್ಲಿ ಇರುವ ಆಹಾರ ಧಾನ್ಯಗಳ ಸಂಗ್ರಹದ ಬಗ್ಗೆ ಕೇಂದ್ರದ ಅಧ್ಯಕ್ಷೆ ಹೇಮಾವತಿ, ಕಾರ್ಯದರ್ಶಿ ಕೆ.ಟಿ.ಮೀನಾಕುಮಾರಿ ಅವರಿಂದ ಮಾಹಿತಿ ಪಡೆದರು.

‘ಜಿಲ್ಲಾಧಿಕಾರಿ ಸುಚನೆಯಂತೆ ಆಹಾರ ಧಾನ್ಯಗಳ ಸಂಗ್ರಹ ಮತ್ತು ಸಂಬಂಧಪಟ್ಟ ಕಡತಗಳ ಪರಿಶೀಲನೆ ನಡೆಸಿದೆ’ ಎಂದು ಉಪ ವಿಭಾಗಾಧಿಕಾರಿ ತಿಳಿಸಿದರು.

ತಹಶೀಲ್ದಾರ್ ಡಿ.ಹನುಮಂತರಾಯಪ್ಪ ಅವರು ತಾಲ್ಲೂಕು ಕೃಷಿ ವ್ಯವಸಾಯೋತ್ಪನ್ನ ಸೇವಾ ಸಹಕಾರ ಸಂಘ (ಟಿಎಪಿಸಿಎಂಎಸ್) ಗೋದಾಮಿಗೂ ತೆರಳಿ ಆಹಾರ ಧಾನ್ಯ ಸಂಗ್ರಹ ಮತ್ತು ಕಡತಗಳನ್ನು ಪರಿಶೀಲಿಸಿದರು.

ದಾಳಿಯ ಸಂದರ್ಭದಲ್ಲಿ ಆಹಾರ ಶಿರಸ್ತೆದಾರ್ ಮಂಜುನಾಥ್, ರಾಜಸ್ವ ನಿರೀಕ್ಷಕರಾದ ಪ್ರಸನ್ನಕುಮಾರ್, ಮರೀಸ್ವಾಮಿ, ಗ್ರಾಮ ಲೆಕ್ಕಿಗರಾದ ಬಸವರಾಜು, ಕೃಷ್ಣಮೂರ್ತಿ, ನಂಜುಂಡಸ್ವಾಮಿ, ಪುಟ್ಟಸ್ವಾಮಿ, ಕೆಎಫ್‌ಸಿಸಿ ಡಿಪೋ ವ್ಯವಸ್ಥಾಪಕ ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT