ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿವಿಲಿಯರ್ಸ್‌ ಅಬ್ಬರಕ್ಕೆ ಡೇರ್‌ಡೆವಿಲ್ಸ್‌ ತತ್ತರ

ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಆಟ ವ್ಯರ್ಥ
Last Updated 21 ಏಪ್ರಿಲ್ 2018, 20:24 IST
ಅಕ್ಷರ ಗಾತ್ರ

ಬೆಂಗಳೂರು: ಕ್ರೀಸ್‌ಗೆ ಕಾಲಿಟ್ಟ ಕ್ಷಣದಿಂದಲೇ ಬೀಸಾಟ ಆರಂಭಿಸಿದ ಎಬಿ ಡಿವಿಲಿಯರ್ಸ್‌  ಆಟಕ್ಕೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು ಗೆಲುವಿನ ಸಂಭ್ರಮ ಆಚರಿಸಿತು. ಅಂಗಳದಲ್ಲಿ ಅಭಿಮಾನಿಗಳ ಸಂತಸ ಪುಟಿದೆದ್ದಿತು.

ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಬಿಡಿ ಗಳಿಸಿದ ಅಜೇಯ 90 ರನ್‌ಗಳ ಬಲದಿಂದ ಆರ್‌ಸಿಬಿ ತಂಡವು 6 ವಿಕೆಟ್‌ಗಳಿಂದ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಎದುರು ಜಯಿಸಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ ತಂಡಕ್ಕೆ  ಆರಂಭಿಕ ಓವರ್‌ಗಳಲ್ಲಿ ವಿರಾಟ್ ಕೊಹ್ಲಿ ಬಳಗದ ಬೌಲರ್‌ಗಳು ಬಿಗಿ ಹಿಡಿತ ಸಾಧಿಸಿದ್ದರು. ಆದರೆ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅವರ ಬಿರುಸಿನ ಬ್ಯಾಟಿಂಗ್‌ನಿಂದ ಡೆಲ್ಲಿ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 174ರನ್‌ ಗಳಿಸಿತು.

ಗುರಿ ಬೆನ್ನತ್ತಿದ ಆರ್‌ಸಿಬಿ ತಂಡವು 18 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 176 ಗಳಿಸಿತು. ಈ ಟೂರ್ನಿಯಲ್ಲಿ ಆರ್‌ಸಿಬಿಗೆ ಇದು ಐದನೇ ಪಂದ್ಯ ಮತ್ತು ಎರಡನೇ ಜಯ.

ಹೋದ ವಾರ ಇದೇ ಅಂಗಳದಲ್ಲಿ ಎಬಿಡಿ ಬಾರಿಸಿದ್ದ ಅರ್ಧಶತಕದ ನೆರವಿನಿಂದ ಆರ್‌ಸಿಬಿ ತಂಡವು ಕಿಂಗ್ಸ್‌ ಇಲೆವನ್ ಪಂಜಾಬ್ ವಿರುದ್ಧ ಜಯಿಸಿತು. ಈ ಪಂದ್ಯದಲ್ಲಿಯೂ ಅವರು 10 ಬೌಂಡರಿ ಮತ್ತು 5 ಸಿಕ್ಸರ್‌ಗಳ ಹೊಡೆದರು. ಎದುರಾಳಿ ಬೌಲರ್‌ಗಳ ಬೆವರಳಿಸಿದರು.

ಆರೆಂಜ್ ಕ್ಯಾಪ್ ಧರಿಸಿದ ಕೊಹ್ಲಿ: ಇದುವರೆಗಿನ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಇಲ್ಲಿ ಆರೆಂಜ್ ಕ್ಯಾಪ್ ಧರಿಸಿದರು. ಈಚೆಗೆ ಮುಂಬೈ ತಂಡದ ವಿರುದ್ಧ ಸೋತಿದ್ದ ಸಂದರ್ಭದಲ್ಲಿಯೂ ಅವರು ಅಗ್ರಸ್ಥಾನದಲ್ಲಿದ್ದರು. ಆದರೆ ಸೋತಿದ್ದ ನಿರಾಸೆಯಿಂದಾಗಿ ಆರೆಂಜ್ ಕ್ಯಾಪ್ ಧರಿಸಲು ಮನಸ್ಸಾಗುತ್ತಿಲ್ಲ ಎಂದು ಹೇಳಿದ್ದರು. ಇಲ್ಲಿಯೂ ಮೂವತ್ತು ರನ್ ಗಳಿಸಿ ತಮ್ಮ ಸ್ಥಾನ ಕಾಪಾಡಿಕೊಂಡ ಅವರಿಗೆ ವೀಕ್ಷಕ ವಿವರಣೆಕಾರ ಹರ್ಷ ಭೋಗ್ಲೆ ಆರೆಂಜ್ ಕ್ಯಾಪ್ ನೀಡಿದರು. ವಿರಾಟ್ ನಗುತ್ತಲೇ ಅದನ್ನು ಧರಿಸಿಕೊಂಡರು.

ಐದು ಓವರ್‌ಗಳಲ್ಲಿ 71 ರನ್: ಡೆಲ್ಲಿ ತಂಡದ ಆರಂಭವು ಉತ್ತಮವಾಗಿರಲಿಲ್ಲ. ಆರಂಭಿಕ ಜೋಡಿ ನಾಯಕ ಗೌತಮ್ ಗಂಭೀರ್ ಮತ್ತು ಜೇಸನ್ ರಾಯ್ ಎಚ್ಚರಿಕೆಯಿಂದ ಆಡಿದರು. ಆದರೆ ಮೂರನೇ  ಓವರ್‌ನಲ್ಲಿ ಉಮೇಶ್ ಯಾದವ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಗಂಭೀರ್ ಯಜುವೇಂದ್ರ ಚಾಹಲ್‌ಗೆ ಕ್ಯಾಚಿತ್ತರು. ನಂತರ ಬಂದ ಶ್ರೇಯಸ್ ಅಯ್ಯರ್ ಮತ್ತು ಜೇಸನ್‌ ನಿಧಾನಗತಿಯ ಆಟವಾಡಿದರು. ಆದರೆ ತಂಡದ ಮೊತ್ತವು 23 ರನ್‌ಗಳಾಗಿದ್ದಾಗ ಆರನೇ ಓವರ್‌ನಲ್ಲಿ ಜೇಸನ್ ರಾಯ್ ಔಟಾದರು. ನಂತರ ಅಯ್ಯರ್ ಜೊತೆಗೂಡಿದ ಪಂತ್ ಆಟದ ಚಿತ್ರಣ ಬದಲಿಸಿದರು.

ತಂಡವು 50 ರನ್ ಗಡಿ ಮುಟ್ಟಲು 8.5 ಓವರ್‌ಗಳನ್ನು ಬ್ಯಾಟ್ಸ್‌ ಮನ್‌ಗಳು ಆಡಿದ್ದರು. ಆದರ ನಂತರ ರಿಷಭ್ ಮತ್ತು ಅಯ್ಯರ್  ಮೂರನೇ ವಿಕೆಟ್‌ಗೆ 75 ರನ್‌ಗಳು ಸೇರಿದವು.

ಇದರಿಂದಾಗಿ ರನ್‌ ಗಳಿಕೆಯ ವೇಗ ಹೆಚ್ಚಿತು. 14ನೇ ಓವರ್‌ನಲ್ಲಿ ಅಯ್ಯರ್ ಔಟಾದಾಗ ಈ ಜೊತೆಯಾಟ ಮುರಿದು ಬಿತ್ತು. ಆದರೆ ಎಡಗೈ ಬ್ಯಾಟ್ಸ್‌ಮನ್  ಪಂತ್ ಅಬ್ಬರ ಮತ್ತಷ್ಟು ಹೆಚ್ಚಾಯಿತು. ಸ್ಕೂಪ್, ರಿವರ್ಸ್ ಸ್ವೀಪ್ ಮತ್ತು ಡ್ರೈವ್‌ಗಳನ್ನು ಆಡಿದ ಪಂತ್ ಬೌಲರ್‌ಗಳಿಗೆ ಕಬ್ಬಿಣದ ಕಡಲೆಯಾದರು. ಅವರು ಏಳು ಸಿಕ್ಸರ್‌ಗಳನ್ನು ಸಿಡಿಸಿದರು. ಆರು ಬೌಂಡರಿಗಳನ್ನು ಗಳಿಸಿದರು. ಕೊನೆಯ ಓವರ್‌ನಲ್ಲಿ ಮತ್ತೊಂದು ಸಿಕ್ಸರ್‌ ಎತ್ತುವ ಭರದಲ್ಲಿ ಎಬಿ ಡಿವಿಲಿಯರ್ಸ್‌ಗೆ ಕ್ಯಾಚಿತ್ತರು. ಆದರೆ ಆಗ ತಂಡವು ಉತ್ತಮ ಸ್ಥಿತಿಗೆ ತಲುಪಿತ್ತು. ಅವರ ಅಬ್ಬರಕ್ಕೆ ಕೊನೆಯ 5 ಓವರ್‌ಗಳಲ್ಲಿ 71 ರನ್‌ಗಳು ಸೇರಿದವು.

27ನೇ ಎಸೆತದಲ್ಲಿ ಮೊದಲ ಬೌಂಡರಿ ಇನಿಂಗ್ಸ್‌ ಆರಂಭದಲ್ಲಿ ಆತಿಥೇಯ ಬೌಲರ್‌ಗಳು ಪಿಚ್‌ನಲ್ಲಿದ್ದ ಸತ್ವದ ಲಾಭ ಪಡೆದರು. ಅದರಿಂದಾಗಿ ರನ್‌ಗಳು ಸರಾಗವು ಹರಿದು ಬರಲಿಲ್ಲ. ಡೆಲ್ಲಿ ತಂಡಕ್ಕೆ ಮೊದಲ ಬೌಂಡರಿ ಲಭಿಸಿದ್ದು 27ನೇ ಎಸೆತದಲ್ಲಿ. ಉಮೇಶ್ ಯಾದವ್ ಶಾರ್ಟ್ ಪಿಚ್ ಎಸೆತವನ್ನು ಫೈನ್‌ ಲೆಗ್‌ಗೆ ಹೊಡೆದ ಅಯ್ಯರ್ ಬೌಂಡರಿ ಗಳಿಸಿದರು.

ಇನಿಂಗ್ಸ್‌ನ ಮೊದಲ ಸಿಕ್ಸರ್‌ ಕೂಡ ಅಯ್ಯರ್ ಅವರಿಂದಲೇ ದಾಖಲಾಯಿತು. ಯಾದವ್ ಹಾಕಿದ ಒಂಬತ್ತನೆ ಓವರ್‌ನ ಕೊನೆಯ ಎಸೆತದಲ್ಲಿ ಅಯ್ಯರ್ ಮಿಡ್‌ವಿಕೆಟ್‌ ಫೀಲ್ಡರ್ ತಲೆ ಮೇಲಿಂದ ಸಿಕ್ಸರ್‌ ಹೊಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT