ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾಪುರ ಪಟ್ಟಣ ಪಂಚಾಯಿತಿ: ಇಬ್ಬರು ಮುಸ್ಲಿಮರಿಗೆ ಬಿಜೆಪಿ ಟಿಕೆಟ್‌

ಮೋದಿ ಅಲೆಯಿಂದ ಗೆಲುವು; ಗವಿಯಪ್ಪ
Last Updated 16 ಮೇ 2019, 12:06 IST
ಅಕ್ಷರ ಗಾತ್ರ

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಇಬ್ಬರು ಮುಸ್ಲಿಂ ಸಮಾಜದ ಅಭ್ಯರ್ಥಿಗಳಿಗೆಬಿಜೆಪಿ ಟಿಕೆಟ್‌ ನೀಡಿದೆ.

ಈ ವಿಷಯವನ್ನು ಬಿಜೆಪಿ ಚುನಾವಣಾ ಉಸ್ತುವಾರಿ, ಮಾಜಿಶಾಸಕ ಎಚ್‌.ಆರ್‌.ಗವಿಯಪ್ಪನವರು ಗುರುವಾರ ಕಮಲಾಪುರದಲ್ಲಿ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕಮಲಾಪುರ ಪಟ್ಟಣದ ಎರಡನೇ ವಾರ್ಡ್‌ನಿಂದ ಮಾಬು ಸಾಬ್‌, ಮೂರನೇ ವಾರ್ಡ್‌ನಿಂದ ನೂರುಲ್ಲಾ ಖಾದ್ರಿ ಅವರನ್ನು ಕಣಕ್ಕಿಳಿಸಲಾಗಿದೆ. ಇಬ್ಬರು ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಸಾಮಾನ್ಯ ವರ್ಗದವರಿಗೆ ಹತ್ತು, ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡದ (ಎಸ್ಟಿ) ತಲಾ ಐವರಿಗೆ ಟಿಕೆಟ್‌ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಒಟ್ಟು ಇಪ್ಪತ್ತು ಅಭ್ಯರ್ಥಿಗಳಲ್ಲಿ ತಲಾ ಒಂಬತ್ತು ಯುವಕರು, ಮಹಿಳೆಯರು ಇದ್ದಾರೆ. ಸಾಮಾಜಿಕ ನ್ಯಾಯದಡಿ ಟಿಕೆಟ್‌ ಹಂಚಲಾಗಿದೆ. ಜಾತಿ ಆಧಾರದ ಮೇಲೆ ರಾಜಕೀಯ ಮಾಡುವುದಿಲ್ಲ. ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ತೋರಿ ಒಟ್ಟು 120 ಜನ ಅರ್ಜಿ ಹಾಕಿದ್ದರು. ಪಕ್ಷವು ಸಾರ್ವಜನಿಕರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ 20 ಜನರ ಹೆಸರು ಅಂತಿಮಗೊಳಿಸಿದೆ. ಟಿಕೆಟ್‌ ಕೈತಪ್ಪಿದವರಿಗೆ ಯಾವುದೇ ಅಸಮಾಧಾನವಿಲ್ಲ. ಒಗ್ಗಟ್ಟಾಗಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವರು. ಕನಿಷ್ಠ 15 ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಭರವಸೆ ಇದೆ’ ಎಂದು ತಿಳಿಸಿದರು.

‘ಕಮಲಾಪುರ ಪಟ್ಟಣದಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಇದ್ದು, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಆ ಸಮಸ್ಯೆಯನ್ನು ಆದ್ಯತೆ ಮೇರೆಗೆ ಬಗೆಹರಿಸಲಾಗುವುದು. ಐತಿಹಾಸಿಕ ಕಮಲಾಪುರ ಕೆರೆಯನ್ನು ಅಭಿವೃದ್ಧಿ ಪಡಿಸಿ, ಅದರ ಬಳಿ ಎಲ್ಲ ಮಹಾತ್ಮರ ಪ್ರತಿಮೆಗಳನ್ನು ಕೂರಿಸಲಾಗುವುದು. ಅದನ್ನು ಪ್ರವಾಸಿ ತಾಣವಾಗಿ ಬೆಳೆಸಲಾಗುವುದು. ಸುಸಜ್ಜಿತವಾದ ಬಸ್‌ ನಿಲ್ದಾಣ ನಿರ್ಮಿಸಲಾಗುವುದು. ಪಟ್ಟಣ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಲಾಗುವುದು. ಸ್ಥಳೀಯರ ಉದ್ಯೋಗ ಸೃಷ್ಟಿಗೆ ಪೂರಕವಾದ ಕೆಲಸ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಹೊಸಪೇಟೆ ಹಾಗೂ ಕಮಲಾಪುರ ಪಟ್ಟಣದಲ್ಲಿ ಸದ್ಯ ನಡೆಯುತ್ತಿರುವ ರಸ್ತೆ, ಒಳಚರಂಡಿ, ಪಾದಚಾರಿ ಮಾರ್ಗ ನಿರ್ಮಾಣ ಸೇರಿದಂತೆ ಇತರೆ ಕಾಮಗಾರಿಗಳು ಬಿ.ಎಸ್‌.ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದ ಅನುದಾನದಲ್ಲಿ ನಡೆಯುತ್ತಿವೆ’ ಎಂದು ಮಂಡಲ ಅಧ್ಯಕ್ಷ ಅನಂತ ಪದ್ಮನಾಭ ಹೇಳಿದರು.

ಮುಖಂಡರಾದ ಕಟಗಿ ರಾಮಕೃಷ್ಣ, ಫಯಾಜ್‌, ಜಯತೀರ್ಥ, ಗುಂಡಿ ರಾಘವೇಂದ್ರ, ಅನಂತ ಪದ್ಮನಾಭ, ಎಸ್‌.ಎಸ್‌. ರಾಚಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT