ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ಕಾಮಗಾರಿ ಆರಂಭಿಸಲು ಆದೇಶ

ಉದ್ಯೋಗ ಖಾತ್ರಿ ಬದುಕು ಖಾತ್ರಿ ಅಭಿಯಾನ
Last Updated 20 ಡಿಸೆಂಬರ್ 2018, 12:42 IST
ಅಕ್ಷರ ಗಾತ್ರ

ಬಳ್ಳಾರಿ: ಬರಗಾಲದಿಂದ ಸಂತ್ರಸ್ತರಾಗಿರುವ ರೈತರು ಮತ್ತು ಕೃಷಿ ಕೂಲಿಕಾರರಿಗಾಗಿ ಜಿಲ್ಲಾ ಪಂಚಾಯ್ತಿ ರೂಪಿಸಿರುವ ‘ಉದ್ಯೋಗ ಖಾತ್ರಿ ಬದುಕು ಖಾತ್ರಿ’ ಅಭಿಯಾನದ ಅಡಿ ಏಕಕಾಲಕ್ಕೆ 22 ಪಂಚಾಯ್ತಿ ಕೇಂದ್ರಗಳಲ್ಲಿ ಫಲಾನುಭವಿಗಳಿಗೆ ವೈಯಕ್ತಿಕ ಕಾಮಗಾರಿ ಆದೇಶ ಪತ್ರ ನೀಡುವ ಕಾರ್ಯಕ್ಕೆ ತಾಲ್ಲೂಕಿನ ರೂಪನಗುಡಿ ಗ್ರಾಮದಲ್ಲಿ ಗುರವಾರ ಚಾಲನೆ ದೊರಕಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ‘ಹತ್ತು ಸಾವಿರ ಸಂತ್ರಸ್ತರಿಗೆ ಜನವರಿ 15ರೊಳಗೆ ವೈಯಕ್ತಿಕ ಕಾಮಗಾರಿ ಸೌಲಭ್ಯ ನೀಡುವ ಗುರಿ ಇದೆ’ ಎಂದು ತಿಳಿಸಿದರು.

‘ಕ್ಷೇತ್ರ ಬದು, ದನದ ಕೊಟ್ಟಿಗೆ, ಎರೆಹುಳುತೊಟ್ಟಿ, ವೈಯಕ್ತಿಕ ಕೊಳವೆಬಾವಿ ಮರುಪೂರಣ ಘಟಕ, ಕುರಿ ಹಾಗೂ ಮೇಕೆ ಸಾಕಣಿಕೆ ಶೆಡ್, ಹಂದಿ,ಮೀನು ಮತ್ತು ಕೋಳಿ ಸಾಕಾಣಿಕೆ ಶೆಡ್, ಕೃಷಿ ಹೊಂಡ, ಜಮೀನಿನಲ್ಲಿ ಕಂದಕ ನಿರ್ಮಾಣ ಸೇರಿದಂತೆ ಅನೇಕ ವೈಯಕ್ತಿಕ ಕಾಮಗಾರಿಗಳನ್ನು ನಡೆಸಬಹುದು. ಅದರಿಂದ ಜೀವನೋಪಾಯವೂ ನಡೆಯುತ್ತದೆ. ಕೆಲಸವೂ ದೊರಕಿದಂತಾಗುತ್ತದೆ. ಒಬ್ಬ ಸಂತ್ರಸ್ತ ₨ 1.50 ಲಕ್ಷದವರೆಗಿನ ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆ ಅಡಿ ಅವಕಾಶವಿದೆ’ ಎಂದು ಹೇಳಿದರು.

‘ಬರಗಾಲದಿಂದ ಬೆಳೆ ನಷ್ಟ ಹೊಂದಿದ ರೈತರು ಮತ್ತು ಕೃಷಿ ಕೂಲಿಕಾರ ಕುಟುಂಬಗಳು ಗುಳೆ ಹೋಗದಂತೆ ತಡೆಯುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಬದುಕು ಖಾತ್ರಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

‘ಆಸ್ತಿ ಸೃಜನೆಯಂಥ ಬೃಹತ್‌ ಕಾಮಗಾರಿ ನಡೆಸುವ ಪರಿಸ್ಥಿತಿ ಹಲವು ಪಂಚಾಯ್ತಿಗಳಲ್ಲಿ ಇಲ್ಲ. ಇಂಥ ಸನ್ನಿವೇಶದಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ನಡೆಸುವ ಮೂಲಕ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬಹುದು. ಆ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹೆಚ್ಚು ಮಾಹಿತಿ ಪಡೆದು ಜನರಿಗೆ ತಲುಪಿಸಬೇಕು’ ಎಂದರು.

ಅಭಿಯಾನಕ್ಕೆ ಜಿ.ಪಂ ಅಧ್ಯಕ್ಷೆ ಸಿ.ಭಾರತಿ ಚಾಲನೆ ನೀಡಿದರು. ಸದಸ್ಯ ಅಲ್ಲಂ ಪ್ರಶಾಂತ್‌ ಮಾತನಾಡಿರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅನ್ನಪೂರ್ಣಮ್ಮ ಮಾತನಾಡಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರಮೀಜಾ ಬಿ, ಉಪಾಧ್ಯಕ್ಷೆ ಪುಷ್ಪಾವತಿ, ಕಾರ್ಯನಿರ್ವಹಣಾಧಿಕಾರಿ ಜಾನಕಿರಾಂ, ತಹಸೀಲ್ದಾರ್ ನಾಗರಾಜ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಶುಭಾ, ನರೇಗಾ ಸಹಾಯಕ ನಿರ್ದೇಶಕ ಬಸವರಾಜ ಇದ್ದರು. 490 ಮಂದಿಗೆ ವೈಯಕ್ತಿಕ ಕಾಮಗಾರಿ ಆದೇಶ ಪತ್ರಗಳನ್ನು ಅಧಿಕಾರಿಗಳು ವಿತರಿಸಿದರು.

₹ 19 ಕೋಟಿ ಬಾಕಿ...

‘ಉದ್ಯೋಗಖಾತ್ರಿ ಅಡಿ ನಡೆಸಿರುವ ಕಾಮಗಾರಿಗಳಿಗೆ ಸಂಬಂಧಿಸಿ ಜಿಲ್ಲೆಗೆ ₹ 19 ಕೋಟಿ ಅನುದಾನ ಬರಬೇಕಾಗಿದೆ’ ಎಂದು ಡಾ.ಕೆ.ವಿ.ರಾಜೇಂದ್ರ ಹೇಳಿದರು.

‘ಕಾಮಗಾರಿ ನಡೆಸಿದ ಹಣ ಮೂರು ತಿಂಗಳಾದರೂ ಬಂದಿಲ್ಲ. ಹದಿನೈದು ದಿನಕ್ಕೇ ಬರುತ್ತದೆ ಎಂದು ಅಧಿಕಾರಿಗಳು ಹೇಳಿದ್ದರು’ ಎಂದು ಗ್ರಾಮಸ್ಥರು ಕಾರ್ಯಕ್ರಮದ ನಡುವೆಯೇ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ‘ಸರ್ಕಾರದ ಹಣ ಬಂದೇ ಬರುತ್ತದೆ. ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಆಗುತ್ತದೆ. ಹಣ ಬರಲಿಲ್ಲ ಎಂದು ಕಾಮಗಾರಿ ನಿಲ್ಲಿಸಿದರೆ ಫಲಾನುಭವಿಗಳಿಗೇ ನಷ್ಟ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT