ಬಿರು ಬಿಸಿಲಿನಲ್ಲಿ ಬೇಕಾಬಿಟ್ಟಿ ವಿದ್ಯುತ್‌ ಕಡಿತ; ಅನಧಿಕೃತ ಲೋಡ್‌ ಶೆಡ್ಡಿಂಗ್‌

ಶುಕ್ರವಾರ, ಏಪ್ರಿಲ್ 26, 2019
33 °C
ಜನರ ನೆಮ್ಮದಿ ಹಾಳು

ಬಿರು ಬಿಸಿಲಿನಲ್ಲಿ ಬೇಕಾಬಿಟ್ಟಿ ವಿದ್ಯುತ್‌ ಕಡಿತ; ಅನಧಿಕೃತ ಲೋಡ್‌ ಶೆಡ್ಡಿಂಗ್‌

Published:
Updated:

ಹೊಸಪೇಟೆ: ನಗರದಲ್ಲಿ ಅನಧಿಕೃತವಾಗಿ ಲೋಡ್‌ ಶೆಡ್ಡಿಂಗ್‌ ಜಾರಿಯಲ್ಲಿ ಇರುವುದರಿಂದ ಬೇಸಿಗೆಯಲ್ಲಿ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಬೇಕಾಬಿಟ್ಟಿ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ. ಹಗಲು–ರಾತ್ರಿಯೆನ್ನದೆ ಮನಬಂದಂತೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ರಣ ಬಿಸಿಲಿನಿಂದ ಕಂಗಾಲಾಗಿರುವ ಜನತೆಗೆ ಇದು ಮರ್ಮಾಘಾತ ನೀಡಿದೆ.

ಕೆಂಡದಂತಹ ಬಿಸಿಲಿನಲ್ಲಿ ಹೊರಗೆ ಹೋಗದಂತಹ ಸ್ಥಿತಿ ಇದೆ. ಇನ್ನು ಮನೆಯಲ್ಲಿ ಸದಾ ಫ್ಯಾನು, ಏರ್‌ ಕೂಲರ್‌, ಏರ್‌ ಕಂಡಿಷನ್‌ ಹಾಕಿಕೊಂಡು ಇರಬೇಕಾಗಿದೆ. ಪ್ರಖರ ಬಿಸಿಲಿನಿಂದ ಎಲ್ಲೆಡೆ ಬಿಸಿಲ ಝಳ ಇದೆ. ಬಿಸಿ ಗಾಳಿ ಬೀಸುತ್ತಿದೆ. ಪರಿಸ್ಥಿತಿ ಹೀಗಿರುವಾಗ ಪದೇ ಪದೇ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ. ಇದರಿಂದ ಜನ ಮನೆಯಲ್ಲಿ ಬೆವರಿಳಿಯುತ್ತಿದ್ದಾರೆ. 

ಅದರಲ್ಲೂ ವಯಸ್ಸಾದವರು, ಮಕ್ಕಳು, ಗರ್ಭೀಣಿಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಅಷ್ಟೇ ಅಲ್ಲ, ಮಳಿಗೆಗಳಲ್ಲಿ ದೈನಂದಿನ ಕೆಲಸಗಳಿಗೂ ಅಡ್ಡಿಯಾಗುತ್ತಿದೆ. ಬೇಸಿಗೆಯಲ್ಲಿ ವಿದ್ಯುತ್‌ ಕಡಿತಗೊಳಿಸುವುದು ಸಾಮಾನ್ಯ. ಆದರೆ, ಅಧಿಕೃತವಾಗಿ ವಿದ್ಯುತ್‌ ಕಡಿತಗೊಳಿಸಬೇಕು. ಯಾವ ಸಮಯದಲ್ಲಿ ವಿದ್ಯುತ್‌ ಕಡಿತಗೊಳಿಸಲಾಗುತ್ತದೆ ಎಂಬುದನ್ನು ಮಾಧ್ಯಮಗಳ ಮೂಲಕ ತಿಳಿಸಿದರೆ ಜನರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.

‘ಜನರಿಗೆ ಹಿಂಸೆ ಕೊಡುವುದು ಜೆಸ್ಕಾಂನವರಿಗೆ ಏನೋ ಖುಷಿ ಕೊಡುತ್ತದೆ ಅನಿಸುತ್ತದೆ. ಹೀಗಾಗಿಯೇ ಅವರು ಜನರಿಗೆ ಕಿರಿಕಿರಿ ಉಂಟು ಮಾಡುತ್ತಾರೆ. ಅದರಲ್ಲೂ ಬೇಸಿಗೆ ಬಂದರೆ ಅದು ಮತ್ತಷ್ಟು ಹೆಚ್ಚಾಗುತ್ತದೆ. ಬೆಂಕಿಯಂತಹ ಬಿಸಿಲಿನಿಂದ ಹೊರಗೂ–ಮನೆಯೊಳಗೂ ಕೂರದಂತಹ ಸ್ಥಿತಿಯಿದೆ. ಕ್ಷಣಕಾಲ ಫ್ಯಾನಿನ ಅಡಿ ಕೂರದಿದ್ದರೆ ಮೈಯೆಲ್ಲ ಬೆವತು ಹೋಗುತ್ತದೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಿದ್ದರೂ ಪದೇ ಪದೇ ವಿದ್ಯುತ್‌ ಕಡಿತಗೊಳಿಸುತ್ತಿರುವುದು ಏಕೆ ಎಂಬುದು ಗೊತ್ತಾಗುತ್ತಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಪ್ರದೀಪ್‌ ಮಾಲ್ಗುಡಿ.

‘ಗಟ್ಟಿಮುಟ್ಟಿಯಿರುವ ಯುವಕರು ಹೇಗೋ ಹೊಂದಿಕೊಂಡು ಇರಬಹುದು. ಆದರೆ, ಮಕ್ಕಳು, ವಯಸ್ಸಾದವರು, ಗರ್ಭೀಣಿಯರ ಸ್ಥಿತಿ ಏನಾಗಬಾರದು. ಒಂದು ಸಲ ಅವರ ಬಗ್ಗೆ ಯೋಚಿಸಬೇಕು. ವಿದ್ಯುತ್‌ ಕಡಿತಗೊಳಿಸುತ್ತಿರುವುದರ ಬಗ್ಗೆ ಅಭ್ಯಂತರವಿಲ್ಲ. ಅದಕ್ಕೆ ನಿರ್ದಿಷ್ಟ ಸಮಯ ಗೊತ್ತು ಮಾಡಿ ತೆಗೆಯಬೇಕು’ ಎಂದು ಸಲಹೆ ಮಾಡಿದರು.

‘ಹೋದ ಬೇಸಿಗೆಯಲ್ಲೂ ಇದೇ ತರಹ ಬೇಕಾಬಿಟ್ಟಿ ವಿದ್ಯುತ್‌ ಕಡಿತಗೊಳಿಸಿ ಜನರಿಗೆ ತೊಂದರೆ ಕೊಟ್ಟಿದ್ದರು. ಈಗ ಮತ್ತದೇ ಕೆಲಸ ಮಾಡುತ್ತಿದ್ದಾರೆ. ವಾಸ್ತವವಾಗಿ ಲೋಡ್‌ ಶೆಡ್ಡಿಂಗ್‌ ಜಾರಿಯಲ್ಲಿದೆ. ಆದರೆ, ಚುನಾವಣೆ ಇರುವುದರಿಂದ ಸರ್ಕಾರದ ಒತ್ತಡಕ್ಕೆ ಒಳಗಾಗಿ ಜೆಸ್ಕಾಂ ಅಧಿಕಾರಿಗಳು ಅದನ್ನು ಘೋಷಿಸದೆಯೇ ಅನಧಿಕೃತವಾಗಿ ವಿದ್ಯುತ್‌ ಕಡಿತಗೊಳಿಸುತ್ತಿದ್ದಾರೆ. ಈ ವಿಷಯದಲ್ಲಿ ಅಧಿಕಾರಿಗಳು ಕೂಡ ಅಸಹಾಯಕರಾಗಿರುವಂತೆ ಕಂಡು ಬರುತ್ತಿದೆ’ ಎಂದು ಇನ್ನೊಬ್ಬ ನಿವಾಸಿ ಹುಲುಗಪ್ಪ ಆರೋಪಿಸಿದರು.

‘ಜನ ಎಲ್ಲ ಸಹಿಸಿಕೊಳ್ಳುತ್ತಾರೆ ಎಂದು ಮನಬಂದಂತೆ ವರ್ತಿಸುವುದು ಸರಿಯಲ್ಲ. ನಿರ್ದಿಷ್ಟ ಸಮಯ ಗೊತ್ತುಪಡಿಸಿ ವಿದ್ಯುತ್‌ ಕಡಿತಗೊಳಿಸಬೇಕು. ಬೇಸಿಗೆಯಲ್ಲಿ ಜನರ ನೆಮ್ಮದಿ ಹಾಳು ಮಾಡುವುದು ತರವಲ್ಲ. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಈ ಕುರಿತು ಜೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಮೇಟಿ ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !