ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾನದಿಂದಲೇ ರಕ್ತ ಸಂಬಂಧಿಯಾದವರು

Last Updated 13 ಜೂನ್ 2018, 19:30 IST
ಅಕ್ಷರ ಗಾತ್ರ

ವಿಕ್ಟೋರಿಯಾ, ವಾಣಿವಿಲಾಸ್‌, ಬೌರಿಂಗ್‌, ಕೆ.ಸಿ. ಜನರಲ್‌ ಸೇರಿದಂತೆ ನಗರದ ಬಹುತೇಕ ಸರ್ಕಾರಿ ಆಸ್ಪತ್ರೆಗಳು ಮತ್ತು ಹಲವು ಖಾಸಗಿ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ತುರ್ತಾಗಿ ರಕ್ತಬೇಕು ಎನಿಸಿದರೆ ಅಲ್ಲಿನ ಸಿಬ್ಬಂದಿಗೆ ಥಟ್ಟನೆ ನೆನಪಾಗುವುದು ಲತಾ ಅಂಶಿ. 64ರ ಈ ಚಿರ ಯೌವ್ವನೆ ಚಕಚಕನೆ ರಕ್ತ ಪೂರೈಸಲು ಕಾರ್ಯನಿರತರಾಗುತ್ತಾರೆ.

ರೋಟರಿ ಬೆಂಗಳೂರು ಡಿಸ್ಟ್ರಿಕ್ಟ್‌ 3190ರ ಅಂಗವಾದ ‘ರೋಟರಿ ಇಂದಿರಾನಗರ’ದ ರಕ್ತದಾನ ಘಟಕದ ಅಧ್ಯಕ್ಷರಾಗಿರುವ ಲತಾ ಅಂಶಿ ಅವರನ್ನು ಜೀವನಭೀಮಾ ನಗರ ಸುತ್ತಮುತ್ತಲಿನ ಜನ ಪ್ರೀತಿಯಿಂದ ‘ಬ್ಲಡ್‌ ಅಮ್ಮ’ ಎಂದೇ ಕರೆಯುತ್ತಾರೆ. ಈ ಭಾಗದಲ್ಲಿ ಅವರು ನಡೆಸಿದ ರಕ್ತದಾನ ಶಿಬಿರಗಳು ಮತ್ತು ಅಗತ್ಯವಿದ್ದವರಿಗೆ ಸಮಯಕ್ಕೆ ಸರಿಯಾಗಿ ರಕ್ತ ಪೂರೈಸಿದ್ದೇ ಇದಕ್ಕೆ ಕಾರಣ.

ರೋಟರಿ ಬ್ಲಡ್‌ ಹೆಲ್ಪ್‌ಲೈನ್‌ ತಂಡದ ಪ್ರಮುಖರೂ ಆಗಿರುವ ಅವರು, ‘ರೋಟರಿ ಇಂದಿರಾನಗರ’ ವೇದಿಕೆಯ ಮೂಲಕ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ತುಮಕೂರು, ಕೋಲಾರ, ಚಿತ್ತೂರು ಸೇರಿದಂತೆ ಹಲವೆಡೆ ರಕ್ತದಾನ ಶಿಬಿರಗಳನ್ನು ಆಯೋಜಿಸಿ ಲಕ್ಷಾಂತರ ಯುನಿಟ್‌ ರಕ್ತ ಸಂಗ್ರಹಿಸಿದ್ದಾರೆ. ಅದರ ಜತೆಗೆ ತುರ್ತಾಗಿ ರಕ್ತ ಬೇಕಿರುವ ರೋಗಿಗಳಿಗೆ ರಕ್ತ ಪೂರೈಸಿ ಅವರ ಅಮೂಲ್ಯ ಜೀವಗಳನ್ನು ಉಳಿಸಲು ನೆರವಾಗಿದ್ದಾರೆ.

ಗಿನ್ನೆಸ್‌ ರೆಕಾರ್ಡ್‌: ರೋಟರಿ ಬೆಂಗಳೂರು ಡಿಸ್ಟ್ರಿಕ್ಟ್‌ 3190ರ ವ್ಯಾಪ್ತಿಯ 215 ಕೇಂದ್ರಗಳಲ್ಲಿ ಇವರ ನೇತೃತ್ವದಲ್ಲಿ 2016ರ ಆಗಸ್ಟ್‌ 4ರಂದು ನಡೆದ ಸತತ ಎಂಟು ಗಂಟೆಗಳ ರಕ್ತದಾನ ಶಿಬಿರಗಳಲ್ಲಿ 3034 ಯುನಿಟ್‌ ರಕ್ತ ಸಂಗ್ರಹಿಸಿ ಗಿನ್ನೆಸ್‌ ರೆಕಾರ್ಡ್‌ ಮಾಡಿತು. ಇದಕ್ಕೂ ಹಿಂದೆ ದಕ್ಷಿಣ ಈಜಿಪ್ಟ್‌ನಲ್ಲಿ ಸುಮಾರು 2000 ಯುನಿಟ್‌ ರಕ್ತ ಸಂಗ್ರಹಿಸಿ ದಾಖಲೆ ನಿರ್ಮಿಸಲಾಗಿತ್ತು.

10 ವರ್ಷದಿಂದ ‘ರೋಟರಿ ಇಂದಿರಾನಗರ’ದ ರೊಟೇರಿಯನ್‌ ಆಗಿರುವ ಅವರು, ಈ ಅವಧಿಯಲ್ಲಿ ವಿವಿಧೆಡೆ ಸುಮಾರು 3,000 ರಕ್ತದಾನ ಶಿಬಿರಗಳನ್ನು ಆಯೋಜಿಸಿ, ಅಂದಾಜು ಎರಡು ಲಕ್ಷ ಯುನಿಟ್‌ ರಕ್ತ (ಒಂದು ಯುನಿಟ್‌ಗೆ 450 ಎಂ.ಎಲ್‌) ಸಂಗ್ರಹಿಸಿದ್ದಾರೆ.

‘ದೆಹಲಿ, ಮುಂಬೈ, ಕೋಲ್ಕತ್ತದಲ್ಲಿ ರಕ್ತದ ಅಗತ್ಯವಿರುವ ರೋಗಿಗಳಿಗೆ ರೋಟರಿ ನೆಟ್‌ವರ್ಕ್‌ ಸಹಾಯ ಪಡೆದು ರಕ್ತ ಪೂರೈಸಲು ನೆರವು ನೀಡಿದ್ದೇನೆ’ ಎಂದು ಅವರು ಹೇಳುತ್ತಾರೆ.

ಸ್ಮರಣೀಯ ಘಟನೆ: ‘ಒಮ್ಮೆ ಆಸ್ಪತ್ರೆಯೊಂದರ ಐಸಿಯುನಲ್ಲಿ ದಾಖಲಾಗಿದ್ದ 10 ವರ್ಷದ ಡೆಂಗಿ ಪೀಡಿತ ಬಾಲಕನಿಗೆ ರಕ್ತ ಬೇಕಿತ್ತು. ನಾನು  ಒದಗಿಸಿದೆ. ಮರುದಿನ ಆತನ ಹುಟ್ಟುಹಬ್ಬ ಇತ್ತು. ‘ಕೇಕ್‌ ತಿನ್ನಬೇಕು ಎನಿಸಿದೆ’ ಎಂದು ಹೇಳಿದ. ಐಸಿಯುನಲ್ಲಿ ಅದಕ್ಕೆಲ್ಲ ಅವಕಾಶ ಇರಲಿಲ್ಲ. ಆದರೆ ಆಸ್ಪತ್ರೆಯವರ ಅನುಮತಿ ಪಡೆದು, ಇತರ ರೋಗಿಗಳಿಗೆ ತೊಂದರೆ ಆಗದಂತೆ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದೆವು. ಅದೇ ಕೊನೆಯ ಬರ್ತ್‌ಡೇ ಆಯ್ತು. ಆ ಬಾಲಕನ ತಾಯಿ ನನಗೆ ಕರೆ ಮಾಡಿ, ಮಗನಿಗೆ ರಕ್ತ ನೀಡಿರುವ ಕಾರಣ ನೀವು ನಮ್ಮ ಕುಟುಂಬದವರೇ ಆಗಿದ್ದೀರ. ಹಾಗಾಗಿ ಅಂತ್ಯಕ್ರಿಯೆಗೆ ಬನ್ನಿ ಎಂದು ಕರೆದರು. ಆಗ ನನಗಾದ ದುಃಖ ಅಷ್ಟಿಷ್ಟಲ್ಲ’ ಎಂದು ಅವರು ಸ್ಮರಿಸಿದರು.

ಸವಾಲುಗಳೇನು?: ರಕ್ತದ ಬೇಡಿಕೆ ಮತ್ತು ಪೂರೈಕೆ ನಡುವೆ ಸಾಕಷ್ಟು ಅಂತರ ಇದೆ. ದೇಶದಲ್ಲಿ ಪ್ರತಿ ಎರಡು ಸೆಕೆಂಡಿಗೆ ಒಬ್ಬರಿಗೆ ರಕ್ತದ ಬೇಡಿಕೆ ಇದೆ. ಆದರೆ ಪೂರೈಕೆ ಕಡಿಮೆ ಇದೆ. ಅದರಲ್ಲಿ ‘ಎ’, ‘ಬಿ’, ‘ಸಿ’, ‘ಒ’ ಮತ್ತು ‘ಎಬಿ’ ನೆಗಿಟಿವ್‌ ಗುಂಪಿನ ರಕ್ತ ಸಿಗುವುದು ಬಹಳ ಕಡಿಮೆ. ಶಿಬಿರಗಳಲ್ಲಿ 200 ಯುನಿಟ್‌ ರಕ್ತ ಸಂಗ್ರಹಿಸಿದ್ದರೆ, ನೆಗೆಟಿವ್‌ ಗುಂಪಿನ ರಕ್ತ ಸಿಗುವುದು ಕೇವಲ 8ರಿಂದ 10 ಯುನಿಟ್‌ ಮಾತ್ರ. ರಕ್ತದಾನ ಕುರಿತು ಜಾಗೃತಿ ಕೊರತೆಯಿದೆ.

ಮಳೆಗಾಲದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗುತ್ತವೆ. ಡೆಂಗಿ ಕಾಯಿಲೆ ಬಂದವರಿಗೆ ಪ್ಲೆಟ್‌ಲೆಟ್‌ ಸೆಲ್‌ಗಳು ಕಡಿಮೆಯಾಗುತ್ತಾ ಹೋಗುತ್ತದೆ.  ಅವರಿಗೆ ಹೆಚ್ಚು ರಕ್ತ ನೀಡಬೇಕಾಗುತ್ತದೆ. ಕೆಲವೊಮ್ಮೆ ಒಬ್ಬೊಬ್ಬರಿಗೆ 8ರಿಂದ 10 ಬಾಟಲಿ ರಕ್ತ ಬೇಕಾಗುತ್ತದೆ. ಅದನ್ನು ಪೂರೈಸುವುದು ಸವಾಲಿನ ಕೆಲಸ. ಅದರಲ್ಲಿ ‘ನೆಗೆಟಿವ್‌’ ಗುಂಪಿನ ರಕ್ತವಾದರಂತೂ ಹರಸಾಹಸವೇ ಮಾಡಬೇಕು ಎನ್ನುತ್ತಾರೆ ಅವರು.

ಈ ವರ್ಷದ ಯೋಜನೆಗಳು: ‘ರೋಟರಿ ಇಂದಿರಾನಗರ’ದ ಮೂಲಕ ಈ ವರ್ಷ ಇನ್ನಷ್ಟು ಹೆಚ್ಚು ರಕ್ತದಾನ ಶಿಬಿರ ಆಯೋಜಿಸುತ್ತೇವೆ. ಮತ್ತು ವಿದ್ಯಾರ್ಥಿಗಳಲ್ಲಿ ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಯೋಜನೆ ಹಮ್ಮಿಕೊಂಡಿದ್ದೇವೆ.

ಲತಾ ಪರಿಚಯ

ಲತಾ ಅವರ ತಂದೆ ವಿಜಾಪುರದ ಸಂಗಪ್ಪ ದೇಸಾಯಿ. ವಿಶ್ವಸಂಸ್ಥೆ ಯುಎನ್‌ಡಿಪಿಯಲ್ಲಿ ವಿಯೆಟ್ನಾಂ, ಬಾಂಗ್ಲಾದೇಶಗಳಲ್ಲಿ ಕೆಲಸ ಮಾಡಿದವರು.

ಲತಾ ಅವರು ಜನಿಸಿದ್ದು ವಿಜಾಪುರದಲ್ಲಿ. ಬಿ.ಕಾಂ ಮತ್ತು ಎಂಬಿಎ ಪದವೀಧರೆಯಾದ ಅವರಿಗೆ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಕೆಲಸ ಸಿಕ್ಕಿತು. 1995ರಲ್ಲಿ ಬ್ಯಾಂಕಿನ ಕೆಲಸಕ್ಕೆ ರಾಜೀನಾಮೆ ನೀಡಿದ ಅವರು, ದಯಾನಂದ ಸಾಗರ್‌, ಅಲ್‌ ಅಮಿನ್‌ ಕಾಲೇಜುಗಳಲ್ಲಿ ಬೋಧಕರಾಗಿ ಕಾರ್ಯ ನಿರ್ವಹಿಸಿದರು. 2003ರಿಂದ ಪೂರ್ಣ ಪ್ರಮಾಣದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡರು. ಇವರ ಪತಿ ಪ್ರಭಾತ್‌ ಅಂಶಿ. ಚಾರ್ಟೆಡ್‌ ಅಕೌಂಟೆಂಟ್‌. ಲತಾ ಅವರ ಸಾಮಾಜಿಕ ಕಳಕಳಿಗೆ ಅಪ್ಪನೇ ಸ್ಫೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT