ಮಂಗಳವಾರ, ಮೇ 18, 2021
23 °C
ಜನತಾ ದರ್ಶನ ನಡೆಸಲು ಸಿ.ಎಂಗೆ ಸ್ಥಳೀಯ ಸಚಿವರು, ಶಾಸಕರು ಸಲಹೆ ನೀಡಲಿ

ಬಳಕೆಯಾಗದ ಹೈ–ಕ ಅನುದಾನ: ಹೊರಟ್ಟಿ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬಳ್ಳಾರಿ: ‘ಹಲವು ವರ್ಷಗಳಿಂದ ಹೈದರಾಬಾದ್‌ ಕರ್ನಾಟಕ ಪ್ರದೇಶದ ಅಭಿವೃದ್ಧಿ ಅನುದಾನವನ್ನು ಸರಿಯಾಗಿ ಬಳಸಿಕೊಂಡಿಲ್ಲ’ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ವಿಷಾದಿಸಿದರು.

ತಾಲ್ಲೂಕಿನ ಚೇಳ್ಳಗುರ್ಕಿಯಲ್ಲಿ ಭಾನುವಾರ ಮಧುರ ಮಧುರ ವೀ ಮಂಜುಳಾ ಗಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ, ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಅಧಿಕಾರದಲ್ಲಿದ್ದಾಗ ಯಾವುದೇ ಹೊಸ ಯೋಜನೆ ಬಂದರೂ ಮೊದಲು ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಜಾರಿಯಾಗಬೇಕೆಂದು ಆಗ್ರಹಿಸುತ್ತಿದ್ದೆ, ನಂತರ ಮುಂಬಯಿ ಕರ್ನಾಟಕ, ಆನಂತರದ್ದು ಮೈಸೂರು ಕರ್ನಾಟಕ, ಕೊನೆಯಲ್ಲಿ ಬೆಂಗಳೂರು ಕರ್ನಾಟಕಕ್ಕೆ ಆದ್ಯತೆ ಎಂದೇ ಪ್ರತಿಪಾದಿಸುತ್ತಿದ್ದೆ’ ಎಂದರು.

‘ಹೈ–ಕ ಪ್ರದೇಶದ ಜಿಲ್ಲೆಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ಜನತಾ ದರ್ಶನ ನಡೆಸಬೇಕು ಎಂದು ಆಯಾ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮುಖ್ಯಮಂತ್ರಿಗೆ ಸಲಹೆ ನೀಡಬೇಕು. ಹೈ–ಕ ಪ್ರದೇಶ ಅಭಿವೃದ್ಧಿಗೆ ಸಚಿವರನ್ನು ನೇಮಿಸಿದರೆ ಹೆಚ್ಚು ಅನುಕೂಲವಾಗುತ್ತದೆ. ಅಂಥ ಪ್ರಯತ್ನಗಳಿಂದ ಮಾತ್ರ ಅಭಿವೃದ್ಧಿ ನಿರೀಕ್ಷೆಯಂತೆ ನಡೆಯಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಹಕ್ಕನ್ನು ಕೇಳಿ ಪಡೆಯಬೇಕು: ‘ನಾನು ಸಚಿವನಾಗಿದ್ದ 1100 ಕಾಲೇಜುಗಳನ್ನು ಸ್ಥಾಪಿಸಿದ ಸಂದರ್ಭದಲ್ಲಿ 665 ಕಾಲೇಜುಗಳನ್ನು ಮುಂಬಯಿ ಹಾಗೂ ಹೈ–ಕ ಭಾಗಕ್ಕೆ ಮೀಸಲಿರಿಸಲಾಗಿತ್ತು. ಅಂಥ ಪ್ರಯತ್ನಗಳು ಹೆಚ್ಚು ನಡೆಯಬೇಕು. ಹಾಗೆಯೇ, ಆಯಾ ಜಿಲ್ಲೆಗಳ ಶಾಸಕರು ಮತ್ತು ಸಚಿವರು ತಮ್ಮ ಕರ್ತವ್ಯವನ್ನು ಅರಿತು ಪ್ರಯತ್ನಗಳನ್ನು ನಡೆಸಬೇಕು. ಹಕ್ಕುಗಳನ್ನು ಕೇಳಿ ಅಥವಾ ಬಡಿದಾಡಿ ಪಡೆದದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅತಿಥಿ ಶಿಕ್ಷಕರ ನೇಮಕ: ‘ಜೂನ್‌ನಲ್ಲಿ ಶಾಲೆ–ಕಾಲೇಜುಗಳು ಆರಂಭವಾದರೆ, ಆಗಸ್ಟ್‌ನಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಈ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಶಿಕ್ಷಣ ಸಚಿವರ ಗಮನ ಸೆಳೆದಿರುವೆ. ಶಾಲೆ–ಕಾಲೇಜುಗಳು ಆರಂಭವಾದಾಗಲೇ ಕಡ್ಡಾಯವಾಗಿ ಶಿಕ್ಷಕರ ನೇಮಕವಾಗಬೇಕು. ಹಾಸ್ಟೆಲ್‌ಗಳು ಆರಂಭವಾಗಬೇಕು’ಎಂದು ಪ್ರತಿಪಾದಿಸಿದರು.

ಭರವಸೆ ಸಮಿತಿ ಸಭೆ: ‘ಗಡಿನಾಡು ಕನ್ನಡ ಶಾಲೆಗಳಿಗೆ ಪುಸ್ತಕ ವಿತರಣೆಗೆ ಸಂಬಂಧಿಸಿ ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್‌ ಸರ್ಕಾರಿ ಭರವಸೆ ಸಮಿತಿಯ ಅಧ್ಯಕ್ಷ ಕೆ.ಸಿ.ಕೊಂಡಯ್ಯ ಅವರಿಗೆ ಹೇಳಿರುವೆ’ ಎಂದರು.

‘ಸಚಿವ ಸ್ಥಾನ ನೀಡಲಿಲ್ಲ ಎಂದು ಬೇಸರಿಸಿಕೊಂಡಿದ್ದು ನಿಜ. ಆದರೆ ಈಗ ಹೊರಟ್ಟಿ ಸಚಿವರಾಗಬೇಕಿತ್ತು ಎಂದು ಜನ ಹೇಳಿದಾಗ ಸಾರ್ಥಕ ಭಾವ ಮೂಡುತ್ತದೆ’ ಎಂದರು.

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು