ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ವಿ.ವಿ.ಯಲ್ಲಿ ವಚನ ಅಧ್ಯಯನ ಪೀಠ

ಮಲಶೆಟ್ಟಿ ದತ್ತಿ ಉಪನ್ಯಾಸದಲ್ಲಿ ಕುಲಪತಿ ಪ್ರೊ. ಸ.ಚಿ. ರಮೇಶ ಭರವಸೆ
Last Updated 20 ಮಾರ್ಚ್ 2019, 9:17 IST
ಅಕ್ಷರ ಗಾತ್ರ

ಹೊಸಪೇಟೆ: ‘ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವಚನ ಅಧ್ಯಯನ ಪೀಠ ಸ್ಥಾಪನೆಗೆ ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಕುಲಪತಿ ಪ್ರೊ. ಸ.ಚಿ. ರಮೇಶ ಭರವಸೆ ನೀಡಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕವು ಬುಧವಾರ ಇಲ್ಲಿ ಆಯೋಜಿಸಿದ್ದ ಜಾನಪದ ವಿದ್ವಾಂಸ ಬಸವರಾಜ ಮಲಶೆಟ್ಟಿ ದತ್ತಿ ಉಪನ್ಯಾಸ ಹಾಗೂ ಅವರ ವಿರಚಿತ ‘ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡರ ನಾಟಕಗಳು; ವಿಶ್ಲೇಷಣೆ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಶರಣರು ಓಡಾಡಿ, ಸಾಮಾಜಿಕ ಕ್ರಾಂತಿ ಮಾಡಿದ ನೆಲೆಬೀಡು ಇದು. ಇಂತಹ ನೆಲದಲ್ಲಿರುವ ಹಂಪಿ ಕನ್ನಡ ವಿ.ವಿ.ಯಲ್ಲಿ ವಚನ ಅಧ್ಯಯನ ಪೀಠ ಸ್ಥಾಪಿಸುವುದು ಬಹಳ ಔಚಿತ್ಯಪೂರ್ಣವಾದುದು. ಪೀಠದ ಸ್ಥಾಪನೆಗೆ ಸಂಡೂರಿನ ಪ್ರಭು ಸ್ವಾಮೀಜಿಗಳ ಮಾರ್ಗದರ್ಶನ, ಸಹಕಾರ ಪಡೆಯಲಾಗುವುದು. ಒಂದು ವಿಶ್ವವಿದ್ಯಾಲಯ ಮಾಡಬೇಕಾದ ಕೆಲಸ ಸಂಡೂರು ಮಠ ಮಾಡುತ್ತಿದೆ. ಅನೇಕ ಮಹನೀಯರ ಪುಸ್ತಕಗಳನ್ನು ಮಠ ಹೊರತಂದಿರುವುದು ಶ್ಲಾಘನಾರ್ಹ’ ಎಂದು ಹೇಳಿದರು.

‘ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಅಂತರ್ಜಾತಿ ವಿವಾಹ ಮಾಡಿಸಿ ಸಮಾಜದಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡಿದ್ದರು. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜೀವಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಅದು ನಮಗೆ ಸಾಧ್ಯವಾಗುತ್ತಿಲ್ಲ. ಜಾತಿಯ ಪ್ರತಿಷ್ಠೆಯಿಂದಾಗಿ ಮರ್ಯಾದೆ ಹತ್ಯೆಗಳು ನಡೆಯುತ್ತಿರುವುದು ದುರದೃಷ್ಟಕರ. ದಾಸೋಹ, ಶಿಕ್ಷಣ, ಸಂಸ್ಕಾರ ಕೊಡುವ ಕೆಲಸ ನಿರಂತರವಾಗಿ ಮುಂದುವರಿಯಬೇಕಿದೆ’ ಎಂದರು.

ಸಂಡೂರು ಪ್ರಭುದೇವ ಸಂಸ್ಥಾನ ವಿರಕ್ತಮಠದ ಪ್ರಭು ಸ್ವಾಮೀಜಿ, ‘ಹಂಪಿ ಕನ್ನಡ ವಿ.ವಿ.ಯಲ್ಲಿ ವಚನ ಅಧ್ಯಯನ ಪೀಠ ಮಾಡಿದರೆ ತಳಸಮುದಾಯಗಳ ಅಧ್ಯಯನಕ್ಕೆ ಅನುಕೂಲವಾಗುತ್ತದೆ. ಬಸವೇಶ್ವರ, ಚನ್ನಬಸವಣ್ಣ ಅಥವಾ ಇತರೆ ಶರಣರ ಹೆಸರಿನಲ್ಲಿ ಪೀಠ ಆರಂಭಿಸಿದರೆ ಅದು ಅವರಿಗಷ್ಟೇ ಸೀಮಿತವಾಗುತ್ತದೆ. ವಚನ ಅಧ್ಯಯನ ಪೀಠ ತೆಗೆದರೆ ವಚನಕಾರರರಲ್ಲಿರುವ ತಳಸಮುದಾಯದವರ ಕೊಡುಗೆಗಳನ್ನು ಸಮಾಜಕ್ಕೆ ಪರಿಚಯಿಸಬಹುದು’ ಎಂದು ಹೇಳಿದರು.

‘ರಂಗಭೂಮಿ, ಬಯಲಾಟ ಕಲೆ ಉಳಿಸಿ, ಬೆಳೆಸಲು ಮಲಶೆಟ್ಟಿಯವರು ಸಾಕಷ್ಟು ಶ್ರಮಿಸಿದ್ದರು. ಅನೇಕ ಸ್ವಾಮೀಜಿಗಳ ಜತೆ ಅವರು ಉತ್ತಮ ಸಂಬಂಧ ಹೊಂದಿದ್ದರು. ಸ್ವಾಮೀಜಿಗಳು ಮಠಕ್ಕೆ ಸೀಮಿತರಾಗದೆ ಸದಾ ಚಲನಶೀಲರಾಗಿ ಓಡಾಡಬೇಕು. ಸಂಸ್ಕೃತದ ಬದಲು ಕನ್ನಡಕ್ಕೆ ಹೆಚ್ಚು ಒತ್ತು ಕೊಡಬೇಕೆಂದು ಹೇಳುತ್ತಿದ್ದರು. ಸಾಮಾನ್ಯವಾಗಿ ಎಲ್ಲರೂ ಸ್ವಾಮೀಜಿಗಳ ಮಾತು ಕೇಳಿಸಿಕೊಳ್ಳುತ್ತಾರೆ. ಆದರೆ, ಮಲಶೆಟ್ಟಿಯವರು ಸ್ವತಃ ಸ್ವಾಮೀಜಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು’ ಎಂದು ನೆನಕೆ ಮಾಡಿಕೊಂಡರು.

ಪುಸ್ತಕ ಸಂಪಾದನೆ ಮಾಡಿರುವ ಹಂಪಿ ಕನ್ನಡ ವಿ.ವಿ. ಹಸ್ತಪ್ರತಿ ವಿಭಾಗದ ಪ್ರಾಧ್ಯಾಪಕ ಕೆ. ರವೀಂದ್ರನಾಥ, ‘ರಂಗಭೂಮಿ, ಬಯಲಾಟದ ಮೇಲೆ ಮಲಶೆಟ್ಟಿಯವರು ಜೀವವೇ ಇಟ್ಟುಕೊಂಡಿದ್ದರು. ಜಾನಪದ, ನಾಟಕ, ಬಯಲಾಟ, ನವ್ಯ ಸಾಹಿತ್ಯ ಸೇರಿದಂತೆ ಎಲ್ಲದರ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಬಯಲಾಟ ಪ್ರದರ್ಶನಗಳು ವರ್ಷವಿಡೀ ನಡೆಯಬೇಕು. ಬಳ್ಳಾರಿ ಜಿಲ್ಲೆಗಷ್ಟೇ ಸೀಮಿತವಾಗಬಾರದು ಎಂದು ಹೇಳುತ್ತಿದ್ದರು. ಸ್ವತಃ ಅವರೇ ಅನೇಕ ಬಯಲಾಟ ಆಡಿಸಿದ್ದಾರೆ’ ಎಂದರು.

‘ಮಲಶೆಟ್ಟಿಯವರು ಧಾರವಾಡದಲ್ಲಿ ಓದುತ್ತಿದ್ದಾಗ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿಯವರ ಪ್ರವಚನದ ಪ್ರಭಾವಕ್ಕೆ ಒಳಗಾಗಿ, ಒಂದು ಹಂತದಲ್ಲಿ ವೈರಾಗ್ಯಕ್ಕೆ ಒಳಗಾಗಿದ್ದರು. ಅನೇಕ ಜನ ಸಾಹಿತಿಗಳ ಜತೆ ಒಡನಾಟ ಬೆಳೆಸಿಕೊಂಡಿದ್ದರು. ಸ್ವತಃ ಅವರ ತಂದೆ ಜಾನಪದ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಹೀಗಾಗಿ ಅವರು ವಿಶಿಷ್ಟ ವ್ಯಕ್ತಿತ್ವದ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಾಯಿತು’ ಎಂದು ತಿಳಿಸಿದರು.

ವಿಜಯನಗರ ಕಾಲೇಜಿನ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ ಉದ್ಘಾಟಿಸಿದರು. ಪ್ರಾಚಾರ್ಯ ವಿ.ಎಸ್‌. ಪ್ರಭಯ್ಯ, ಪ್ರಾಧ್ಯಾಪಕರಾದಮೃತ್ಯುಂಜಯ ರುಮಾಲೆ, ಲಕ್ಷ್ಮಣ ಕರಿಭೀಮಣ್ಣವರ್‌, ಬಸವ ಬಳಗದ ಬಸವರಾಜ ಮಾವಿನಹಳ್ಳಿ, ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಟಿ.ಎಚ್‌. ಬಸವರಾಜ, ಕಾರ್ಯದರ್ಶಿ ನಂದೀಶ್ವರ ದಂಡೆ, ಶಾರದಾ ಮಲಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT