ಮೂರು ಸಲ ಬಳ್ಳಾರಿಗೆ ಬಂದಿದ್ದ ವಾಜಪೇಯಿ

7

ಮೂರು ಸಲ ಬಳ್ಳಾರಿಗೆ ಬಂದಿದ್ದ ವಾಜಪೇಯಿ

Published:
Updated:

ಹೊಸಪೇಟೆ: ಗುರುವಾರ ಸಂಜೆ ವಿಧಿವಶರಾದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಮೂರು ಸಲ ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಿದ್ದರು.

1969ರಲ್ಲಿ ಚಿತ್ರದುರ್ಗದಲ್ಲಿ ನಿಗದಿಯಾಗಿದ್ದ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರೈಲಿನಲ್ಲಿ ಬಳ್ಳಾರಿಗೆ ಬಂದಿದ್ದರು. ಕೆಲಹೊತ್ತು ಬಳ್ಳಾರಿಯಲ್ಲಿ ತಂಗಿದ್ದ ಅವರು ನಂತರ ಚಿತ್ರದುರ್ಗಕ್ಕೆ ತೆರಳಿದ್ದರು. ತುರ್ತು ಪರಿಸ್ಥಿತಿ ಬಳಿಕ 1977ರಲ್ಲಿ ನಡೆದ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಅವರು, ಬಳ್ಳಾರಿಯ ಮುನ್ಸಿಪಲ್‌ ಮೈದಾನದಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ್ದರು.

ಅದರ ನಂತರ 1999ರ ಲೋಕಸಭೆ ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್‌ ಅವರ ಪರ ಚುನಾವಣಾ ಪ್ರಚಾರಕ್ಕೆ ಬಂದಿದ್ದ ವಾಜಪೇಯಿ, ಮುನ್ಸಿಪಲ್‌ ಮೈದಾನದಲ್ಲೇ ಎರಡನೇ ಸಲ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು.

‘1999ರಲ್ಲಿ ವಾಜಪೇಯಿ ಅವರು ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಿದ್ದಾಗ ಇಡೀ ಮುನ್ಸಿಪಲ್‌ ಮೈದಾನ ಜನರಿಂದ ಭರ್ತಿಯಾಗಿತ್ತು. ಕೆಲವರು ಒಳಗೆ ಬರಲು ಸಾಧ್ಯವಾಗದ ಕಾರಣ ಮೈದಾನದ ಹೊರಗೆ ನಿಂತು ಅವರ ಭಾಷಣ ಆಲಿಸಿದ ನೆನಪು ಇದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರಾದ ಶಂಕರ್‌ಚಂದ್‌ ಭಾರ್ಗೇಚ್‌ ನೆನಪು ಮಾಡಿಕೊಳ್ಳುತ್ತಾರೆ.

‘ವಾಜಪೇಯಿ ಅವರು ಸರಳ, ಸೌಜನ್ಯದ ವ್ಯಕ್ತಿ. ಅಷ್ಟೊಂದು ಎತ್ತರಕ್ಕೆ ಬೆಳೆದಿದ್ದರು ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದರು. ಸಹಜವಾಗಿ ಇರುತ್ತಿದ್ದರು. ಅವರ ಮಾತುಗಳನ್ನು ಕೇಳುತ್ತ ಇದ್ದರೆ ಕೇಳುತ್ತಲೇ ಇರಬೇಕು ಅನಿಸುತ್ತಿತ್ತು. ಅವರೊಬ್ಬ ಕವಿ ಹೃದಯದ ವ್ಯಕ್ತಿ. ಅವರಂತಹ ಧೀಮಂತ ವ್ಯಕ್ತಿಯನ್ನು ಕಳೆದುಕೊಂಡ ದೇಶ ಬಡವಾಗಿದೆ’ ಎಂದು ಮೌನವಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !