ಬುಧವಾರ, ಆಗಸ್ಟ್ 21, 2019
22 °C
ಹೂವು, ಹಣ್ಣಿನ ಮಾರುಕಟ್ಟೆಯಲ್ಲಿ ಹಬ್ಬದ ಸಂಭ್ರಮ

ವರಮಹಾಲಕ್ಷ್ಮಿ ವ್ರತಕ್ಕೆ ಬೆಲೆಏರಿಕೆಯ ಬಿಸಿ

Published:
Updated:
Prajavani

ಬಳ್ಳಾರಿ: ನಗರದ ಬೆಂಗಳೂರು ರಸ್ತೆ, ಹೂವಿನ ಮಾರುಕಟ್ಟೆ, ಹಣ್ಣಿನ ಮಾರುಕಟ್ಟೆಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.

ಶ್ರಾವಣ ಮಾಸದ ನಾಗರಪಂಚಮಿ ಹಬ್ಬದ ಸಂಭ್ರಮದ ನೆನಪಿನಲ್ಲಿರುವಾಗಲೇ ಬಂದಿರುವ ವರಮಹಾಲಕ್ಷ್ಮೀ ವ್ರತಾಚಣೆ ಸಲುವಾಗಿ ಭಕ್ತರು ಜಾತ್ರೆಯ ರೀತಿಯಲ್ಲಿ ಮಾರುಕಟ್ಟೆಗೆ ಬರುತ್ತಿದ್ದಾರೆ. ಈ ಸಂಭ್ರಮದ ಜೊತೆಗೆ ಹಬ್ಬವು ಭಕ್ತರಿಗೆ ಬೆಲೆ ಏರಿಕೆಯ ಬಿಸಿಯನ್ನೂ ಮುಟ್ಟಿಸಿದೆ.

ಹೂವು, ಹಣ್ಣು, ತರಕಾರಿ ಮಾರಾಟಗಾರರು ಹೇಳಿದ್ದೇ ದರ. ಚೌಕಾಶಿಗೆ ಅವಕಾಶವಿಲ್ಲ. ಹೀಗಾಗಿ ಮರುಮಾತನಾಡದೆ ಖರೀದಿಸಲೇಬೇಕಾದ ಅನಿವಾರ್ಯತೆ. ಇಂಥ ಪರಿಸ್ಥಿತಿಯಲ್ಲೂ, ಹಬ್ಬದ ಮುನ್ನಾ ದಿನವಾದ ಗುರುವಾರ, ಮಾರುಕಟ್ಟೆ ಪ್ರದೇಶದಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ಬೆಂಗಳೂರು ರಸ್ತೆಯಂತೂ ಬೆಳಿಗ್ಗೆಯಿಂದಲೇ ಗಿಜಿಗುಡುತ್ತಿತ್ತು. ಕಿರಿದಾದ ರಸ್ತೆಗಳಲ್ಲಿರುವ ಹಣ್ಣಿನ ಮಾರುಕಟ್ಟೆ ಮತ್ತು ಹೂವಿನ ಮಾರುಕಟ್ಟೆಗಳಲ್ಲಿ ಹೆಜ್ಜೆ ಇಡಲೂ ಆಗದಷ್ಟು ಇಕ್ಕಟ್ಟು.

ಕಾಲು ಕೆಜಿ: ಹೂವು ಮತ್ತು ಹಣ್ಣಿನ ದರವನ್ನು ಕೆಜಿ ಲೆಕ್ಕದಲ್ಲಿ ಹೇಳಿದರೆ ಖರೀದಿಸುವವರು ಗಾಭರಿ ಬೀಳಬಹುದು ಎಂಬ ಕಾರಣಕ್ಕೆ ವರ್ತಕರು 250 ಗ್ರಾಂ ದರವನ್ನಷ್ಟೇ ಹೇಳುತ್ತಿದ್ದರು.

ಹೆಚ್ಚು ಆವಕವಿಲ್ಲದ ಆದರೆ ಬಹುಜನರ ಬೇಡಿಕೆಯಾದ ಸೇವಂತಿಗೆ ಹೂವು 250 ಗ್ರಾಂಗೆ ₨ 80 ದರವಿತ್ತು. ಅಂದರೆ ಕೆಜಿ ಹೂವಿನ ದರ ₨ 320. ತೂಗುವಾಗ ಒಂದು ಹೂವನ್ನೂ ಹೆಚ್ಚಿಗೆ ಹಾಕದ ಜಿಪುಣತನ. ‘ಬೇಕೆಂದರೆ ತಗೊಳ್ಳಿ, ಬೇಡವಾದರೆ ಬಿಡಿ’ ಎಂಬ ನಿಷ್ಠುರ ಮಾತು. ಅಂಥ ಸನ್ನಿವೇಶದಲ್ಲೇ ಖರೀದಿ ಭರಾಟೆ

ಬಟನ್ಸ್‌ ಹೂವು 250 ಗ್ರಾಂಗೆ ₹ 70. ಹಲವು ಬಣ್ಣಗಳ ಹೂವಿನ ಮಿಶ್ರಣಕ್ಕೆ ಹೆಚ್ಚು ಬೇಡಿಕೆ ಇತ್ತು.  ಹಳದಿ ಚೆಂಡು ಹೂವಿನ ಬೆಲೆಯೂ ಕೆಜಿಗೆ ₹ 100 ಇತ್ತು. ಮಲ್ಲಿಗೆ ಹೂವು ಒಂದು ಮೊಳಕ್ಕೆ ₹ 30. ಐದು ಮೊಳದ ಒಂದು ಕುಚ್ಚಿಗೆ ₹ 150.

ಹಣ್ಣೂ ದುಬಾರಿ: ಲಕ್ಷ್ಮಿ ದೇವಿಯ ಮುಂದೆ ಪೂಜೆಯ ಸಂದರ್ಭದಲ್ಲಿ ಇಡುವ ಹಣ್ಣುಗಳ ದರವೂ ದುಬಾರಿಯಾಗಿತ್ತು. ಅನಾನಸ್‌ ಹಣ್ಣು ತಲಾ ₹50. ಸೇಬು ₹180, ದಾಳಿಂಬೆ ₹100, ಮೂಸಂಬಿ ₹80, ಪೇರಲಹಣ್ಣು ₹80, ಸಪೋಟ₹ 60, ದ್ರಾಕ್ಷಿ ₹160.

ಹೀಗಾಗಿ ಕನಿಷ್ಠ ಬೇಕಾದ ಐದಾರು ಬಗೆಯ ಹಣ್ಣುಗಳನ್ನು ತಲಾ ಒಂದು ಕೆಜಿಯನ್ನಷ್ಟಾದರೂ ಖರೀದಿಸಬೇಕು ಎಂದು ಮಾರಕಟ್ಟೆಗೆ ಬಂದವರು, ಅರ್ಧ ಕೆಜಿಯನ್ನಷ್ಟೇ ಖರೀದಿಸಿ ಹೊರಟರು. ದೊಡ್ಡ ಗಾತ್ರದ ತೆಂಗಿನಕಾಯಿ ದರ ₹ 25. ಚಿಕ್ಕದಾದರೆ ₹20. ಹೀಗಾಗಿ ಚಿಕ್ಕ ತೆಂಗಿನಕಾಯಿಗಳನ್ನೇ ಹೆಚ್ಚು ಮಂದಿ ಖರೀದಿಸುತ್ತಿದ್ದರು.

ಏಲಕ್ಕಿ ಬಾಳೆಹಣ್ಣು ಕೂಡ ಹಬ್ಬದ ಕಾರಣಕ್ಕೆ ದುಬಾರಿಯಾಗಿತ್ತು. ಪ್ರತಿ ಕೆಜಿ ದರ ₹60ರಿಂದ 70 ಇದ್ದುದು, ಗುರುವಾರ ₹ 90ರವರೆಗೂ ಮುಟ್ಟಿತ್ತು. 

‘ಕೆಲವೇ ನೂರು ರುಪಾಯಿಗಳನ್ನಿಟ್ಟುಕೊಂಡು ಮಾರುಕಟ್ಟೆಗೆ ಬಂದರೆ ನಿರಾಶೆ ಖಚಿತ. ಹಾಗೆಂದು ಹೆಚ್ಚು ಹಣವಿಟ್ಟುಕೊಂಡು ಬಂದು ಖರೀದಿಸಿದರೂ ತೃಪ್ತಿ ಸಿಗುವುದಿಲ್ಲ. ಆದರೂ ಹಬ್ಬವನ್ನು ಆಚರಿಸದೇ ಬಿಡಲಾಗುತ್ತದೆಯೇ’ ಎಂದು ಗಾಂಧಿನಗರ ನಿವಾಸಿ ಸತೀಶ್‌ ಕೇಳಿದರು.

ತರಕಾರಿ ಸಮಾಧಾನಕರ: ಹೂವು, ಹಣ್ಣುಗಳ ದರಕ್ಕೆ ಹೋಲಿಸಿದರೆ ತರಕಾರಿಗಳ ದರ ಸಮಾಧಾನಕರವಾಗಿದ್ದುದು ವಿಶೇಷ. ಟೊಮೆಟೊ ಕೆ.ಜಿಗೆ ₹ 30, ಈರುಳ್ಳಿ ಮೂರು ಕೆಜಿಗೆ ₹ 80, ಬೀನ್ಸ್‌ ₹40, ಬದನೆ ₹20, ಕೊತ್ತಂಬರಿ ಕಂತೆಗೆ ₹1 ಹೀಗೆ ದರ ಹೆಚ್ಚಿರಲಿಲ್ಲ.

Post Comments (+)