ಭಾನುವಾರ, ಆಗಸ್ಟ್ 25, 2019
21 °C

ಭಕ್ತಿ–ಶ್ರದ್ಧೆಯ ವರಮಹಾಲಕ್ಷ್ಮಿ ಹಬ್ಬ

Published:
Updated:
Prajavani

ಬಳ್ಳಾರಿ: ಶ್ರಾವಣ ಮಾಸದ ಎರಡನೇ ಶುಕ್ರವಾರ ಜಿಲ್ಲೆಯಲ್ಲಿ ಎಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮೈದಾಳಿತ್ತು. ನಗರದೇವತೆ ಕನಕದುರ್ಗಮ್ಮ ಗುಡಿಯಲ್ಲಿ ಮೂರ್ತಿಯನ್ನು ಚಿನ್ನಾಭರಣಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ದುರ್ಗಮ್ಮ ಸೇರಿದಂತೆ ವಿವಿಧ ದೇವಿಯವರ ಗುಡಿಗಳಲ್ಲಿ ವಿಶೇಷ ಪೂಜೆ ನಡೆಯಿತು. ಸಾವಿರಾರು ಭಕ್ತರು ಬೆಳಗಿನ ಜಾವದಿಂದಲೇ ಭೇಟಿ ನೀಡಿದ್ದರು.

ಆರ್ಯವೈಶ್ಯರ ಮನೆಗಳಲ್ಲಿ ಹಬ್ಬದ ಸಂಭ್ರಮ ಹೆಚ್ಚು ಕಳೆಗಟ್ಟಿತ್ತು. ಹೊಸ ನೋಟು, ನಾಣ್ಯ ಹಾಗೂ, ಆಭರಣಗಳನ್ನು ಲಕ್ಷ್ಮಿ ವಿಗ್ರಹ ಮತ್ತು ಪಟದ ಮುಂದೆ ಕಳಸ ಸಮೇತ ಪೇರಿಸಿಟ್ಟು ವಿಶೇಷ ಪೂಜೆ ಮಾಡಿದರು. ಹೋಳಿಗೆ ಊಟ ಮಾಡಿ ಸಂಭ್ರಮಿಸಿದರು. ಸಂಜೆ ನೆರೆಹೊರೆಯ ಮಹಿಳೆಯರು, ಹೆಣ್ಣುಮಕ್ಕಳನ್ನು ಕರೆದು ಹರಿಶಿನ–ಕುಂಕುಮ, ರವಿಕೆ ಬಟ್ಟೆ, ವೀಳ್ಯೆದೆಲೆ–ಅಡಿಕೆ, ಬಳೆ ಹಾಗೂ ಹಣ್ಣುಗಳನ್ನು ನೀಡಿ ಸಂಭ್ರಮಿಸಿದರು. ಮನೆಗಳಿಗೆ ಭೇಟಿ ಕೊಟ್ಟವರು ಲಕ್ಷ್ಮಿದೇವಿಗೆ ಆರತಿ ಬೆಳಗಿ ತೆರಳಿದರು.

ಶುಕ್ರವಾರ ಬೆಳಿಗ್ಗೆಯೂ ಹೂವು, ಹಣ್ಣಿನ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂತು. ಖರೀದಿ ಭರಾಟೆ ಜೋರಾಗಿತ್ತು. ಹಬ್ಬಕ್ಕೆ ರಜೆ ಇಲ್ಲದ್ದರಿಂದ ಮಹಿಳಾ ನೌಕರರು ಬೆಳಿಗ್ಗೆಯೇ ಪೂಜೆ ಮುಗಿಸಿ, ಹೊಸ ಬಟ್ಟೆ ತೊಟ್ಟು ಕಚೇರಿಗಳಿಗೆ ಬಂದಿದ್ದರು. ಬಹುತೇಕ ಶಾಲೆ ಕಾಲೇಜುಗಳಿಗೆ ರಜೆ ನೀಡಿದ್ದರಿಂದ, ಹೆಣ್ಣು ಮಕ್ಕಳು ಮನೆಯಲ್ಲಿ ಪೂಜೆ ಬಳಿಕ, ಗುಡಿಗಳಿಗೆ ತೆರಳಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.

Post Comments (+)