ಸಿ.ವಿ.ಎಲ್‌. ಶಾಸ್ತ್ರಿ ರಾಜ್ಯ ಟೇಬಲ್‌ ಟೆನಿಸ್‌: ವರುಣ್, ನಿಹಾರಿಕಾಗೆ ಪ್ರಶಸ್ತಿ

7

ಸಿ.ವಿ.ಎಲ್‌. ಶಾಸ್ತ್ರಿ ರಾಜ್ಯ ಟೇಬಲ್‌ ಟೆನಿಸ್‌: ವರುಣ್, ನಿಹಾರಿಕಾಗೆ ಪ್ರಶಸ್ತಿ

Published:
Updated:
Deccan Herald

ಹೊಸಪೇಟೆ: ಬೆಂಗಳೂರಿನ ಎಸ್‌.ಬಿ.ಟಿ.ಟಿ.ಎ. ಕ್ಲಬ್‌ನ ವರುಣ್‌ ಬಿ. ಕಶ್ಯಪ್‌ ಹಾಗೂ ಎಂ.ಎಸ್‌.ಟಿ.ಟಿ.ಎ. ಕ್ಲಬ್‌ನ ಎ. ನಿಹಾರಿಕಾ ಅವರು ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ಸಿ.ವಿ.ಎಲ್‌. ಶಾಸ್ತ್ರಿ ಸ್ಮರಣಾರ್ಥ ರಾಜ್ಯ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಕೆಡೆಟ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು.

ಅಂತಿಮ ಪಂದ್ಯದಲ್ಲಿ ವರುಣ್‌ ಅವರು ಎಸ್‌.ಬಿ.ಟಿ.ಟಿ.ಎ. ಕ್ಲಬ್‌ನ ಅಭಿನವ್‌ ಕೆ. ಮೂರ್ತಿ ಅವರನ್ನು 11–06,11–05, 11–04 ನೇರ ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡರು. ಬಾಲಕಿಯರ ಕೆಡೆಟ್‌ ವಿಭಾಗದ ಅಂತಿಮ ಹಣಾಹಣಿಯಲ್ಲಿ ನಿಹಾರಿಕಾ ಅವರು ಬೆಂಗಳೂರಿನ ಎಂ.ಎಸ್‌.ಟಿ.ಟಿ.ಎ. ಕ್ಲಬ್‌ನ ನೀತಿ ಅಗರವಾಲ್‌ ಅವರನ್ನು 11–08, 11–09, 11–09 ಸೆಟ್‌ಗಳಿಂದ ಸೋಲಿಸಿದರು.

ಇದಕ್ಕೂ ಮುನ್ನ ನಡೆದ ಬಾಲಕರ ವಿಭಾಗದ ಮೊದಲ ಸೆಮಿಫೈನಲ್‌ನಲ್ಲಿ ಅಭಿನವ್‌ ಅವರು ಬೆಂಗಳೂರಿನ ಸಿ.ಎಂ. ಕ್ಲಬ್‌ನ ಸಿದ್ಧಾಂತ ವಸನ್‌ ಅವರನ್ನು 11–06, 11–04, 12–10ರಿಂದ ಮಣಿಸಿದರು. ಇನ್ನೊಂದು ಸೆಮಿಫೈನಲ್‌ನಲ್ಲಿ ವರುಣ್‌ ಅವರು ಬೆಂಗಳೂರಿನ ಜಿ.ಇ.ಎಂ.ಎಸ್‌. ಕ್ಲಬ್‌ನ ಹೃಷಿಕೇಶ್‌ ಶೆಟ್ಲರ್‌ ಅವರನ್ನು 11–04,12–10ರಿಂದ ಸೋಲಿಸಿದರು. ಹೃಷಿಕೇಶ್‌ ಅವರ ಕಾಲಿಗೆ ಗಾಯವಾಗಿದ್ದರಿಂದ ಮೂರನೇ ಸೆಟ್‌ನಲ್ಲಿ ಅವರು ಆಡಲಿಲ್ಲ.

ಬಾಲಕಿಯರ ವಿಭಾಗದ ಮೊದಲ ಸೆಮಿಫೈನಲ್‌ನಲ್ಲಿ ನೀತಿ ಅಗರವಾಲ್‌ ಅವರು ಬೆಂಗಳೂರಿನ ಬಿ.ಟಿ.ಟಿ.ಎ. ಕ್ಲಬ್‌ನ ಸಾನ್ವಿ ಮಾಂಡೇಕರ್‌ ಅವರನ್ನು 11–0, 14–12, 11–09 ಸೆಟ್‌ಗಳಿಂದ ಸೋಲಿಸಿ ಫೈನಲ್‌ ಪ್ರವೇಶಿಸಿದರು. ಮತ್ತೊಂದು ಸೆಮಿಫೈನಲ್‌ನಲ್ಲಿ ನಿಹಾರಿಕಾ ಅವರು ಬೆಂಗಳೂರಿನ ಬಿ.ಎನ್‌.ಎಂ. ಕ್ಲಬ್‌ನ ಸಾನ್ವಿ ಪಂಡಿತ್‌ ಅವರನ್ನು 11–07, 11–03, 11–08 ಸೆಟ್‌ಗಳಿಂದ ಸೋಲಿಸಿ, ಅಂತಿಮ ಘಟ್ಟ ಪ್ರವೇಶಿಸಿದರು.

ಇದಕ್ಕೂ ಮುನ್ನ ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಕಾರ್ಯದರ್ಶಿ ಜಿ. ನಾಗಮೋಹನ್‌ ಅವರು ಚಾಂಪಿಯನ್‌ಷಿಪ್‌ಗೆ ಚಾಲನೆ ನೀಡಿದರು. ಇದೇ 12ರಂದು ಸಬ್‌ ಜೂನಿಯರ್‌, ಜೂನಿಯರ್‌ ಹಾಗೂ ಯುತ್‌ ಬಾಲಕ, ಬಾಲಕಿಯರ ವಿಭಾಗದಲ್ಲಿ ಪಂದ್ಯಗಳು ನಡೆಯಲಿವೆ. 13ರಂದು ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಪಂದ್ಯಗಳು ಜರುಗಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !