ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ–ಲಿಂಗಾಯತರು ಹಿಂದೂಗಳು: ಸಂಗನಬಸವ ಸ್ವಾಮೀಜಿ

ಬಸವ ಜಯಂತಿ ಕಾರ್ಯಕ್ರಮ
Last Updated 7 ಮೇ 2019, 9:32 IST
ಅಕ್ಷರ ಗಾತ್ರ

ಹೊಸಪೇಟೆ: ‘ವೀರಶೈವ–ಲಿಂಗಾಯತ ಹಿಂದೂ ಧರ್ಮದ ಒಂದು ಶಾಖೆ. ವೀರಶೈವ–ಲಿಂಗಾಯತರೆಲ್ಲರೂ ಹಿಂದೂ ಧರ್ಮೀಯರು’ ಎಂದು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಪೀಠಾಧಿಪತಿ ಸಂಗನಬಸವ ಸ್ವಾಮೀಜಿ ಹೇಳಿದರು.

ಬಸವ ಜಯಂತಿ ಪ್ರಯುಕ್ತ ನಗರದ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ವೀರಶೈವ–ಲಿಂಗಾಯತ ಬೇರೆ ಬೇರೆಯಲ್ಲ. ಅವುಗಳೆರಡೂ ಒಂದೇ. ವೀರಶೈವ–ಲಿಂಗಾಯತವನ್ನು ಕೆಲವರು ಪಂಚಾಚಾರ್ಯರಿಂದ ಸ್ಥಾಪನೆಗೊಂಡರೆ, ಕೆಲವರು ಶಿವನಿಂದ, ಮತ್ತೆ ಕೆಲವರು ಬಸವಣ್ಣನವರಿಂದ ಸ್ಥಾಪನೆಯಾದ ಪಂಥ ಎನ್ನುತ್ತಾರೆ. ಯಾರು ಅದರ ನಿಜವಾದ ಸ್ಥಾಪಕರು ಎಂಬುದು ಯಾರಿಗೂ ಗೊತ್ತಿಲ್ಲ. ಹೀಗಾಗಿಯೇ ಗೊಂದಲ ಸೃಷ್ಟಿಯಾಗಿದೆ’ ಎಂದು ತಿಳಿಸಿದರು.

‘ನಾವು ರೆಡ್ಡಿಗಳು, ನಾವು ಪಂಚಮಸಾಲಿಗಳು, ಗಾಣಿಗರು ಎಂದು ಎಲ್ಲರೂ ಒಳಪಂಗಡಗಳ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. ಯಾರು ಕೂಡ ನಾವು ವೀರಶೈವ–ಲಿಂಗಾಯತರು ಎಂದು ಹೇಳಿಕೊಳ್ಳುತ್ತಿಲ್ಲ. ವೀರಶೈವ–ಲಿಂಗಾಯತ ಪ್ರತ್ಯೇಕ ಧರ್ಮದ ಸ್ಥಾನಮಾನ ಸಿಗಬೇಕಾದರೆ ಎಲ್ಲ ಒಳಪಂಗಡಗಳು ಒಂದಾಗಬೇಕು’ ಎಂದು ಸಲಹೆ ನೀಡಿದರು.

‘ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕಾಗಿ ಅಖಿಲ ಭಾರತ ವೀರಶೈವ ಮಹಾಸಭಾ 46 ವರ್ಷಗಳಿಂದ ಅವಿರತ ಹೋರಾಟ ನಡೆಸುತ್ತಿದೆ. ಆದರೆ, ಧರ್ಮದ ಮಾನ್ಯತೆ ಸಿಗುತ್ತಿಲ್ಲ. ಒಳಪಂಗಡಗಳು ಒಂದಾಗದಿದ್ದರೆ ಮುಂದೆಯೂ ಸಿಗುವುದಿಲ್ಲ’ ಎಂದರು.

‘ಜಗತ್ತಿನ ಅತಿ ದೊಡ್ಡ ಪ್ರಜಾತಂತ್ರ ದೇಶ ನಮ್ಮದು. ಎಲ್ಲ ಧರ್ಮದವರಿಗೂ ಇಲ್ಲಿ ಸಮಾನ ಅವಕಾಶಗಳಿವೆ. ಇತರೆ ದೇಶಗಳಲ್ಲಿ ಈ ವ್ಯವಸ್ಥೆ ಇಲ್ಲ. ಬಹುಸಂಖ್ಯಾತರೇ ಪ್ರಮುಖ ಸ್ಥಾನಗಳನ್ನು ಬೇರೆ ರಾಷ್ಟ್ರಗಳಲ್ಲಿ ಅಲಂಕರಿಸಿದ್ದಾರೆ. ಭಾರತದಲ್ಲಿ ಯಾರು ಬೇಕಾದರೂ ರಾಷ್ಟ್ರಪತಿ, ಪ್ರಧಾನಿ ಆಗಬಹುದು. ಬಸವಣ್ಣನವರ ಸಮಾನತೆಯ ತತ್ವಗಳ ಆಧಾರದ ಮೇಲೆ ಸಂವಿಧಾನ ರಚನೆ ಮಾಡಿರುವುದೇ ಅದಕ್ಕೆ ಕಾರಣ’ ಎಂದು ವಿವರಿಸಿದರು.

‘ವೀರಶೈವ–ಲಿಂಗಾಯತರು ತಾತ್ವಿಕವಾಗಿ ಶ್ರೇಷ್ಠರಾಗಿರಬಹುದು. ಆದರೆ, ಇತರೆ ಧರ್ಮದ ವಿಚಾರಗಳನ್ನು ಗೌರವಿಸಬೇಕು. ಸಾಮರಸ್ಯ, ಸದ್ಭಾವನೆ ಇಂದಿನ ದಿನಗಳಲ್ಲಿ ಬಹಳ ಅತ್ಯಗತ್ಯ. ಶ್ರೇಷ್ಠ–ಕನಿಷ್ಠ ಎಂಬ ಭಾವನೆ ಯಾರಲ್ಲೂ ಇರಬಾರದು’ ಎಂದರು.

ಕರೇಗುಡ್ಡ ಮಹಾಂತೇಶ್ವರ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ‘ಧರ್ಮ ಎಲ್ಲರನ್ನೂ ಬೆಸೆಯಬೇಕು. ಅದು ವಿಭಜಿಸಬಾರದು. ಅಂತಹ ತತ್ವ ವೀರಶೈವ–ಲಿಂಗಾಯತ ಧರ್ಮದಲ್ಲಿದೆ’ ಎಂದು ಹೇಳಿದರು.

ದರೂರು ಸಂಗನಬಸವೇಶ್ವರ ವಿರಕ್ತಮಠದ ಕೊಟ್ಟೂರು ದೇಶಿಕರು, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ಉದ್ಯಮಿ ಗೊಗ್ಗ ಚನ್ನಬಸವರಾಜ, ವೀರಶೈವ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್‌.ವಿ. ಶರಣು ಸ್ವಾಮಿ, ಕಾರ್ಯದರ್ಶಿ ಕೆ. ರವಿಶಂಕರ, ಮುಖಂಡರಾದ ಕೆ. ಕೊಟ್ರೇಶ, ಕೋರಿಶೆಟ್ಟಿ ಲಿಂಗಪ್ಪ, ಜಿ. ಮಲ್ಲಿನಾಥ, ಅಶ್ವಿನ್‌ ಕೋತಂಬ್ರಿ, ಗುಜ್ಜಲ ಶಿವರಾಮಪ್ಪ, ಜೀರೆ ವೀರೇಶಪ್ಪ, ಅಕ್ಕನ ಬಳಗದ ಅರುಣಾ ಶಿವಾನಂದ, ನಂದ್ರೇಗೌಡ್ರ ಜಂಬಣ್ಣ, ಈಶ್ವರಗೌಡ, ಜ್ಯೋತಿ ಕೊಟ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT