ಭಾನುವಾರ, ಆಗಸ್ಟ್ 25, 2019
27 °C

ನಿಷೇಧಿತ ವಲಯದಲ್ಲಿ ಮ್ಯಾಕ್ಸಿಕ್ಯಾಬ್‌ ಸಂಚಾರ

Published:
Updated:
Prajavani

ಹೊಸಪೇಟೆ: ತಾಲ್ಲೂಕಿನ ಹಂಪಿ ವಿಜಯ ವಿಠಲ ದೇವಸ್ಥಾನಕ್ಕೆ ಹೋಗುವ ನಿಷೇಧಿತ ವಾಹನ ವಲಯದಲ್ಲಿ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರವೇ ಪ್ರವಾಸಿಗರಿಗೆ ಮ್ಯಾಕ್ಸಿಕ್ಯಾಬ್‌ ವ್ಯವಸ್ಥೆ ಕಲ್ಪಿಸಿ, ತಾನೇ ರೂಪಿಸಿದ ನಿಯಮ ಉಲ್ಲಂಘಿಸಿದೆ.

ದೇಗುಲಕ್ಕೆ ಪ್ರವಾಸಿಗರು ಹೋಗಿ ಬರಲು ಪ್ರಾಧಿಕಾರವು ಬ್ಯಾಟರಿಚಾಲಿತ ವಾಹನಗಳ ವ್ಯವಸ್ಥೆ ಮಾಡಿದೆ. ಆದರೆ, ಸದ್ಯ ಎರಡು ವಾಹನಗಳನ್ನು ಬಿಟ್ಟರೆ ಉಳಿದ ವಾಹನಗಳು ಹಾಳಾಗಿ ಮೂಲೆ ಸೇರಿವೆ. ಶನಿವಾರ ಹಾಗೂ ಭಾನುವಾರ ವಿವಿಧ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿಗೆ ಬರುತ್ತಾರೆ. ಎರಡು ಬ್ಯಾಟರಿ ವಾಹನಗಳು ಪ್ರವಾಸಿಗರಿಗೆ ಸಾಕಾಗುತ್ತಿಲ್ಲ. ಹೀಗಾಗಿ ಪ್ರಾಧಿಕಾರವೇ ಆ ಭಾಗದಲ್ಲಿ ಮ್ಯಾಕ್ಸಿ ಕ್ಯಾಬ್‌ ಓಡಿಸುತ್ತಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

‘ಬ್ಯಾಟರಿಚಾಲಿತ ವಾಹನಗಳು ಸಾಲುತ್ತಿಲ್ಲ ಎಂದು ಮ್ಯಾಕ್ಸಿಕ್ಯಾಬ್‌ ಓಡಿಸುವುದು ಸರಿಯೇ? ವಾಹನಗಳು ಉಗುಳುವ ಹೊಗೆಯಿಂದ ಸಂರಕ್ಷಿತ ಸ್ಮಾರಕ ಹಾಳಾಗಬಾರದು ಎಂಬ ಉದ್ದೇಶದಿಂದ ಎಲ್ಲ ರೀತಿಯ ವಾಹನಗಳ ಮೇಲೆ ನಿರ್ಬಂಧ ಹೇರಲಾಗಿದೆ. ಈಗ ಸ್ವತಃ ಪ್ರಾಧಿಕಾರವೇ ಆ ನಿಯಮ ಮುರಿದರೆ ಹೇಗೆ? ಕೂಡಲೇ ಹಾಳಾಗಿರುವ ವಾಹನಗಳನ್ನು ದುರಸ್ತಿಗೊಳಿಸಿ, ಓಡಿಸಬೇಕು’ ಎಂದು ಸ್ಥಳೀಯರಾದ ರಮೇಶ, ರೋಹಿತ್‌, ರಾಜು ಆಗ್ರಹಿಸಿದ್ದಾರೆ.

ಈ ಕುರಿತು ಆರು ತಿಂಗಳ ಹಿಂದೆ ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಆದರೆ, ಇದುವರೆಗೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಈ ಸಂಬಂಧ ಪ್ರಾಧಿಕಾರದ ಅಧಿಕಾರಿಯನ್ನು ಸಂಪರ್ಕಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

Post Comments (+)