ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಉಪರಾಷ್ಟ್ರಪತಿ ಆಗಮನ: ಖಾಕಿ ಕೋಟೆಯಾದ ಹೊಸಪೇಟೆ

ಬರಲಿವೆ ಮೂರು ವಾಯುಸೇನೆ ಹೆಲಿಕ್ಯಾಪ್ಟರ್‌
Last Updated 20 ಆಗಸ್ಟ್ 2021, 4:20 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಶುಕ್ರವಾರ ನಗರಕ್ಕೆ ಆಗಮಿಸಲಿದ್ದು, ಎಲ್ಲೆಡೆ ಖಾಕಿ ಸರ್ಪಗಾವಲು ಹಾಕಲಾಗಿದೆ.

ಉಪರಾಷ್ಟ್ರಪತಿ ಅವರು ವಾಯುಸೇನೆಯ ವಿಶೇಷ ಹೆಲಿಕ್ಯಾಪ್ಟರ್‌ನಲ್ಲಿ ನಗರದ ತಾಲ್ಲೂಕು ಕ್ರೀಡಾಂಗಣದ ಹೆಲಿಪ್ಯಾಡ್‌ಗೆ ಬಂದಿಳಿಯಲಿದ್ದಾರೆ. ಅವರೊಂದಿಗೆ ವಾಯುಸೇನೆಯ ಇನ್ನೆರಡು ವಿಶೇಷ ಹೆಲಿಕ್ಯಾಪ್ಟರ್‌ ಕೂಡ ಬರಲಿವೆ.

ಉಪರಾಷ್ಟ್ರಪತಿ ಅವರು ಸಂಚರಿಸುವ ಮಾರ್ಗಗಳಲ್ಲಿ ಕೆಲಕಾಲ ಎಲ್ಲ ರೀತಿಯ ವಾಹನಗಳ ಸಂಚಾರ ನಿರ್ಬಂಧಗೊಳಿಸಲಾಗುತ್ತದೆ. ಸಂಜೆ 5.20ಕ್ಕೆ ನಗರಕ್ಕೆ ಬಂದಿಳಿಯಲಿರುವ ಅವರು, ಅಲ್ಲಿಂದ ರಸ್ತೆ ಮಾರ್ಗವಾಗಿ ತುಂಗಭದ್ರಾ ಜಲಾಶಯಕ್ಕೆ ತೆರಳುವರು. ಸಂಜೆ 6ಕ್ಕೆ ಅಲ್ಲಿಂದ ತಾಲ್ಲೂಕಿನ ಕಮಲಾಪುರ ಸಮೀಪದ ಮಯೂರ ಭುವನೇಶ್ವರಿ ಹೋಟೆಲ್‌ಗೆ ತೆರಳಿ ವಾಸ್ತವ್ಯ ಮಾಡುವರು.

21ರಂದು ಬೆಳಿಗ್ಗೆ 10ಕ್ಕೆ ಹಂಪಿಗೆ ಭೇಟಿ ಕೊಟ್ಟು ಅಲ್ಲಿನ ಸ್ಮಾರಕಗಳನ್ನು ವೀಕ್ಷಿಸಿ, ಆ ದಿನ ರಾತ್ರಿ ಅಲ್ಲಿಯೇ ಉಳಿದುಕೊಳ್ಳುವರು. 22ರಂದು ಬೆಳಿಗ್ಗೆ 8.25ಕ್ಕೆ ಕಮಲಾಪುರದಿಂದ ರಸ್ತೆ ಮಾರ್ಗವಾಗಿ ನಗರದ ತಾಲ್ಲೂಕು ಕ್ರೀಡಾಂಗಣದ ಹೆಲಿಪ್ಯಾಡ್‌ಗೆ ಬರುವರು. ಅಲ್ಲಿಂದ ಪುನಃ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಪಯಣ ಬೆಳೆಸುವರು.

ಮೂರು ದಿನ ಅವರು ರಸ್ತೆ ಮಾರ್ಗವಾಗಿ ಎಲ್ಲೆಲ್ಲಿ ಓಡಾಡುತ್ತಾರೋ ಆ ಭಾಗಗಳಲ್ಲಿ ಕೆಲಕಾಲ ಎಲ್ಲ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗುತ್ತದೆ. ರಸ್ತೆಯ ಎರಡೂ ಬದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುತ್ತದೆ. ಉಪರಾಷ್ಟ್ರಪತಿಯವರು ರಸ್ತೆ ಮಾರ್ಗವಾಗಿ ಸಂಚರಿಸುವ ರಸ್ತೆಗಳಲ್ಲಿ ಗುರುವಾರ ಸಂಜೆ ಜಾಮರ್‌ ವಾಹನದೊಂದಿಗೆ ತಾಲೀಮು ನಡೆಸಲಾಯಿತು.

ಎಸ್ಪಿ ಭದ್ರತೆ ಪರಿಶೀಲನೆ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅಡಾವತ್‌ ಅವರು ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿರುವ ಹೆಲಿಪ್ಯಾಡ್‌ ಪರಿಶೀಲಿಸಿದರು. ಅಲ್ಲಿ ಕೈಗೊಂಡಿರುವ ಸಿದ್ಧತೆಯ ಮಾಹಿತಿ ಪಡೆದರು.

ಉಪರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ 8 ಡಿವೈಎಸ್‌ಪಿ, 24 ಇನ್‌ಸ್ಪೆಕ್ಟರ್‌, 600 ಕಾನ್‌ಸ್ಟೆಬಲ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಈಗಾಗಲೇ ಉಪರಾಷ್ಟ್ರಪತಿ ಕಚೇರಿಯ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಕೂಡ ನಗರಕ್ಕೆ ಬಂದು ಬೀಡು ಬಿಟ್ಟಿದ್ದಾರೆ. ವಾಯುಸೇನೆಯ ವಿಶೇಷ ವಿಮಾನದ ಲ್ಯಾಂಡಿಂಗ್‌ ಪೂರ್ವಾಭ್ಯಾಸ ಕೂಡ ಮುಗಿದಿದೆ. ಅವರ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಜನರ ಭೇಟಿ ನಿರ್ಬಂಧ

ಉಪರಾಷ್ಟ್ರಪತಿ ಅವರ ಹಂಪಿ ಭೇಟಿ ವೇಳೆ ಸಾರ್ವಜನಿಕರ ಪ್ರವೇಶದ ಮೇಲೆ ನಿರ್ಬಂಧ ಹೇರಲಾಗಿದೆ. ಅವರು ಹಂಪಿಗೆ ಭೇಟಿ ಕೊಟ್ಟು ಹಿಂತಿರುಗುವವರಗೆ ಯಾರಿಗೂ ಹಂಪಿಗೆ ಪ್ರವೇಶ ಇಲ್ಲ. ಅನಗತ್ಯವಾಗಿ ಜನರ ಓಡಾಟಕ್ಕೆ ಕಡಿವಾಣ ಹಾಕಲು ಕಮಲಾಪುರ ಕೋಟೆ ಗೋಡೆ, ಕಡ್ಡಿರಾಂಪುರ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ.
ಕೋವಿಡ್‌ ಹರಡುವುದನ್ನು ತಡೆಯಲು ಈಗಾಗಲೇ ತುಂಗಭದ್ರಾ ಜಲಾಶಯಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ ಉಪರಾಷ್ಟ್ರಪತಿಯವರ ಭೇಟಿಯಿಂದ ಯಾವುದೇ ವ್ಯತ್ಯಾಸ ಉಂಟಾಗುವುದಿಲ್ಲ.

ಸಿಬ್ಬಂದಿಗೆ ಕೋವಿಡ್‌ ಪರೀಕ್ಷೆ

ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಹಂಪಿಗೆ ಭೇಟಿ ಕೊಡಲಿರುವ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಎಲ್ಲ ನೌಕರರು, ಬ್ಯಾಟರಿಚಾಲಿತ ವಾಹನ ಚಾಲಕರು, ಭದ್ರತಾ ಸಿಬ್ಬಂದಿ ಹಾಗೂ ವಿರೂಪಾಕ್ಷೇಶ್ವರ ದೇವಸ್ಥಾನದ ಅರ್ಚಕರಿಗೆ ಗುರುವಾರ ಕೋವಿಡ್‌ ಪರೀಕ್ಷೆ ನಡೆಸಲಾಯಿತು.

–––

ಉಪರಾಷ್ಟ್ರಪತಿಯವರ ಭದ್ರತೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಯಾವುದೇ ಕುಂದು ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು

–ಸೈದುಲು ಅಡಾವತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT