ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ–ಬಳ್ಳಾರಿ: ಸಾರಿಗೆ ಸಚಿವರೇ ವಿದ್ಯಾರ್ಥಿಗಳ ಗೋಳು ಕೇಳಿ

ವಿಜಯನಗರ–ಬಳ್ಳಾರಿ ಜಿಲ್ಲೆಯಲ್ಲಿ ಬಸ್‌ಗಾಗಿ ವಿದ್ಯಾರ್ಥಿಗಳ ಪಡಿಪಾಟಲು; ಆಟೊ, ಟ್ರ್ಯಾಕ್ಟರ್‌ನಲ್ಲಿ ಸಂಚಾರ
Last Updated 27 ಜೂನ್ 2022, 19:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಅವಿಭಜಿತ ಬಳ್ಳಾರಿ ಜಿಲ್ಲೆಯ ವಿದ್ಯಾರ್ಥಿಗಳು ಶಾಲಾ–ಕಾಲೇಜಿಗೆ ಹೋಗಿ ಮನೆಗೆ ಹಿಂತಿರುಗಬೇಕೆಂದರೆ ದೊಡ್ಡ ಸಾಹಸ ಮಾಡಬೇಕಾದ ಪರಿಸ್ಥಿತಿ ಇದೆ.

ಇದು ಯಾವುದೋ ವಿಶೇಷ ಸಂದರ್ಭಗಳಲ್ಲಿ ಸೃಷ್ಟಿಯಾಗುವ ಸಮಸ್ಯೆ ಅಲ್ಲ. ನಿತ್ಯವೂ ವಿದ್ಯಾರ್ಥಿಗಳು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೆ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಾರಿಗೆ ಸಚಿವ ಬಿ. ಶ್ರೀರಾಮುಲು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಸಿಲ್ಲ ಎನ್ನುವುದು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಆರೋಪ.

ಕೇಂದ್ರೀಯ ಪಠ್ಯಕ್ರಮದ ಶಾಲೆಗಳು, ಡಿಪ್ಲೊಮಾ, ಐಟಿಐ, ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಲು ಗ್ರಾಮೀಣ ಪ್ರದೇಶಗಳಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ನಗರ ಪ್ರದೇಶಕ್ಕೆ ಬಂದು ಹೋಗುವುದು ಅನಿವಾರ್ಯ. ಆದರೆ, ಅನೇಕ ಕಡೆ ಈಗಲೂ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲ.

ಪ್ರತಿ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಆದರೆ, ಬಹುತೇಕ ಮಾರ್ಗಗಳಲ್ಲಿ ಬಸ್‌ಗಳ ಸಂಖ್ಯೆ ಹೆಚ್ಚಾಗಿಲ್ಲ. ವಿದ್ಯಾರ್ಥಿಗಳು ಅನಿವಾರ್ಯವಾಗಿ ಸಾರ್ವಜನಿಕರೊಂದಿಗೆ ಜಟಾಪಟಿ ಮಾಡುತ್ತ ತುಂಬಿದ ಬಸ್‌ಗಳಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಇದೆ. ಇನ್ನು, ಅಂತರರಾಜ್ಯ, ದೂರದ ಊರುಗಳ ನಡುವೆ ಸಂಚರಿಸುವ ಬಸ್‌ಗಳು ಸಣ್ಣ ಹಳ್ಳಿಗಳಲ್ಲಿ ನಿಲ್ಲುವುದಿಲ್ಲ. ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಟ್ರ್ಯಾಕ್ಟರ್‌, ಲಾರಿ, ಆಟೊ, ಚಕ್ಕಡಿ ಏರಿಕೊಂಡು ಶಾಲಾ–ಕಾಲೇಜಿಗೆ ಹೋಗುತ್ತಾರೆ.

ಜಿಲ್ಲಾ, ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿ ಸಾರಿಗೆ ಸಂಸ್ಥೆಯ ಬಸ್‌ ಬಂತೆಂದರೆ ಜೇನ್ನೋಣಗಳಂತೆ ವಿದ್ಯಾರ್ಥಿಗಳು ಮುತ್ತಿಕೊಳ್ಳುತ್ತಾರೆ. ಎಷ್ಟೋ ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಹೋಗಲು ಸಾಧ್ಯವಾಗದೆ ತರಗತಿಗಳಿಂದ ವಂಚಿತರಾಗುತ್ತಿದ್ದಾರೆ. ಇನ್ನು, ಅಂತರರಾಜ್ಯ, ದೂರದ ಊರುಗಳ ಬಸ್‌ಗಳಲ್ಲಿ ಪಾಸ್‌ ಹೊಂದಿದ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುತ್ತಿಲ್ಲ. ಇದರ ವಿರುದ್ಧ ವಿದ್ಯಾರ್ಥಿಗಳು ಅನೇಕ ಸಲ ಧರಣಿ, ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ಸಾರಿಗೆ ಸಚಿವರೂ ಇತ್ತ ಗಮನ ಹರಿಸಿಲ್ಲ. ಬಳ್ಳಾರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಕೊಟ್ಟಿರುವ ಮನವಿಗಳ ಲೆಕ್ಕವಿಲ್ಲ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೆಲವು ಗ್ರಾಮಗಳ ಮಕ್ಕಳು ಐದು ಕಿ.ಮೀಗಿಂತ ದೂರ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗುತ್ತಾರೆ. ಹಣ ತೆತ್ತು ಬಸ್‌ ಪಾಸ್‌ ಪಡೆದರೂ ವಿದ್ಯಾರ್ಥಿಗಳಿಗೆ ಸಮಸ್ಯೆ ತಪ್ಪಿಲ್ಲ. ‘ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಹೊಸ ಬಸ್‌ಗಳನ್ನು ಓಡಿಸಲಾಗುವುದು ಎಂದು ಸಾರಿಗೆ ಸಚಿವರು ಹೇಳುತ್ತಲೇ ಇದ್ದಾರೆ. ಅದಂತೂ ಈಡೇರಿಲ್ಲ. ಕನಿಷ್ಠ ಬಸ್‌ ಪಾಸ್‌ ಹೊಂದಿದ ವಿದ್ಯಾರ್ಥಿಗಳಿಗೆ ಸಮರ್ಪಕ ವ್ಯವಸ್ಥೆ ಮಾಡಿದರೆ ಸಾಕು’ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು.

‘ಈ ವರ್ಷ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಮಕ್ಕಳು ಪಾಸಾಗಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಹಳೆ ಬಸ್‌ ಪಾಸ್‌ ಹೊಂದಿದವರಿಗೆ ಜೂ. 30ರವರೆಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಜುಲೈ ಒಂದರಿಂದ ಹೊಸ ಪಾಸ್‌ ವಿತರಿಸಲಾಗುವುದು. ಅಂತರರಾಜ್ಯ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಸಂಚರಿಸಲು ಅವಕಾಶ ಕೊಡಲಾಗಿದೆ’ ಎಂದು ಹೊಸಪೇಟೆ ವಿಭಾಗೀಯ ಸಂಚಾರ ಅಧಿಕಾರಿ ಬಸವರಾಜ ತಿಳಿಸಿದರು.

ಐದು ಕಿ.ಮೀ ಕಾಲ್ನಡಿಗೆ:

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಚಿಮ್ಮನಹಳ್ಳಿ ಮತ್ತು ಹಳೆ ಚಿಮ್ಮನಹಳ್ಳಿ ಗ್ರಾಮಗಳಿಗೆ ಬಸ್ ಸಂಪರ್ಕ ಇಲ್ಲದರಿಂದ ವಿದ್ಯಾರ್ಥಿಗಳು ನಿತ್ಯ 5 ಕಿ.ಮೀ. ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗಿ ಬರುತ್ತಾರೆ.
ಎರಡೂ ಗ್ರಾಮಗಳಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳಿಲ್ಲ. ಪ್ರಾಥಮಿಕ ಶಾಲೆಗೆ ಕನ್ನಿಹಳ್ಳಿಗೆ ಮತ್ತು ಪ್ರೌಢಶಾಲೆಗೆ ಇಟ್ಟಿಗಿಗೆ ತೆರಳಬೇಕಿದೆ. ಇಟ್ಟಿಗಿಗೆ ತೆರಳಲು ಹಂಚಿನಾಳ ಕ್ರಾಸ್‍ಗೆ ತೆರಳಿ ಅಲ್ಲಿಂದ ಇಟ್ಟಿಗಿ ಮತ್ತು ಹಗರಿಬೊಮ್ಮನಹಳ್ಳಿಗೆ ಹೋಗಬೇಕಿದೆ. ನಿತ್ಯ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೇ ಶಾಲೆಗೆ ತೆರಳುತ್ತಾರೆ.
ಕಳೆದ 50ವರ್ಷಗಳಿಂದಲೂ ಎರಡೂ ಗ್ರಾಮಗಳಿಗೆ ಬಸ್ ಸೌಕರ್ಯ. ಪ್ರತಿದಿನ ಕೊಟ್ಟೂರಿನಿಂದ ಅಂಬಳಿ ಮೂಲಕ ಇಟ್ಟಿಗೆ ಗ್ರಾಮಕ್ಕೆ ಎರಡು ಬಸ್ ಸಂಪರ್ಕ ಕಲ್ಪಿಸಬೇಕು ಎಂದು ಗ್ರಾಮದ ಮುಖಂಡ ಪೂಜಾರ ಸಿದ್ದಪ್ಪ ಒತ್ತಾಯಿಸಿದ್ದಾರೆ.

ತರಗತಿಗಳಿಗೆ ವಿಳಂಬ:

ಕೊಟ್ಟೂರು: ಶೈಕ್ಷಣಿಕ ಕೇಂದ್ರವೆಂದು ಹೆಸರಾಗಿರುವ ಕೊಟ್ಟೂರಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಆದರೆ ಬಸ್ಸುಗಳ ಸಂಖ್ಯೆ ಹೆಚ್ಚಳವಾಗಿಲ್ಲ. ಅನೇಕ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ.

ನೂರಾರು ವಿದ್ಯಾರ್ಥಿಗಳು ಸಂಚರಿಸುವ ಮಾರ್ಗದಲ್ಲಿ ಒಂದೆರೆಡು ಬಸ್ಸುಗಳ ಸೌಲಭ್ಯವಿದ್ದರೆ ಪ್ರಯಾಣಿಸಲು ಹೇಗೆ ಸಾಧ್ಯ? ನಿಗದಿತ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿ.ಲ್ಲ ಸಂಜೆ ಮನೆಗೆ ತೆರಳುವಾಗ ಕೆಲವೊಮ್ಮೆ ರಾತ್ರಿಯಾಗುತ್ತದೆ ಎಂದು ಸುಂಕದಕಲ್ಲು ಗ್ರಾಮದ ಮಮತಾ ಬೇಸರ ವ್ಯಕ್ತಪಡಿಸುತ್ತಾರೆ.

ಬಸ್ ಕೊರತೆ:

ಹರಪನಹಳ್ಳಿ : ತಾಲ್ಲೂಕಿನ ಹೆಚ್ಚಿನ ಗ್ರಾಮಗಳಿಗೆ ಸಾರಿಗೆ ಬಸ್ ಸೌಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗುತ್ತಿಲ್ಲ.

ಸಾವಿರಾರು ವಿದ್ಯಾರ್ಥಿಗಳು ಹಳ್ಳಿಗಳಿಂದ ಪಟ್ಟಣಕ್ಕೆ ವ್ಯಾಸಂಗಕ್ಕೆ ಬರುತ್ತಾರೆ. ಕೆಲವೇ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿ ಪ್ರವೇಶ ಸಿಕ್ಕಿರುತ್ತದೆ. ಹೆಚ್ಚಿನವರು ನಿತ್ಯ ಗ್ರಾಮಗಳಿಂದ ಬಂದು ಹೋಗಬೇಕು. ಸಾರಿಗೆ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಆದರೆ, ಸೂಕ್ತ ಸೌಕರ್ಯವಿರದ ಕಾರಣ ವ್ಯಾಸಂಗಕ್ಕೆ ತೊಂದರೆ ಆಗುತ್ತಿದೆ.ತಾಲ್ಲೂಕಿನ ಹಲವು ಗ್ರಾಮಗಳಿಗೆ ನಿಗದಿತ ಸಮಯಕ್ಕೆ ಸಾರಿಗೆ ಬಸ್ ಗಳಿಲ್ಲ. ವಿದ್ಯಾರ್ಥಿಗಳಿಗೆ ಮೊದಲ ತರಗತಿ ತಪ್ಪುತ್ತಿದೆ. ಇದು ಅವರ ಓದಿನ ಮೇಲೆ ಪರಿಣಾಮ ಬೀರುತ್ತಿದೆ.

ಆಟೊ ಅವಲಂಬನೆ:

ಕೂಡ್ಲಿಗಿ: ಪಟ್ಟಣದ ಸುತ್ತಮುತ್ತ ಗ್ರಾಮಗಳಿಗೆ ಸರಿಯಾದ ಬಸ್ ಸೌಕರ್ಯವಿಲ್ಲದ ಕಾರಣ ಅನೇಕ ವಿದ್ಯಾರ್ಥಿಗಳು ಆಟೊ ಅವಲಂಬಿಸಿದ್ದಾರೆ.

ಈಚಲಬೊನ್ನಹಳ್ಳಿ, ಕುಪ್ಪಿನಕೆರೆ, ಕೆಂಗಲಹಟ್ಟಿ, ಗೋವಿಂದಗಿರಿ, ಎಡಿ ಗುಡ್ಡ, ಬಂಡೇಬಸಾಪುರ ತಾಂಡಾ ಸೇರಿದಂತೆ ತಾಲ್ಲೂಕು ಕೇಂದ್ರದಿಂದ ಮೂರ್ನಾಲ್ಕು ಕಿ.ಮೀಗಿಂತ ಕಡಿಮೆ ದೂರುವಿರುವ ಗ್ರಾಮಗಳಿಗೆ ಬಸ್ ಸೌಲಭ್ಯವಿಲ್ಲ. ಕೂಡ್ಲಿಗಿಯಿಂದ ವಿವಿಧ ಮಾರ್ಗಳಲ್ಲಿ ಅನೇಕ ಬಸ್ಸುಗಳು ಹೋಗುತ್ತವೆ. ಆದರೆ, ಅವು ಸಂಚಾರ ಮಾಡುವ ಮಾರ್ಗದಲ್ಲಿನ ಸಣ್ಣ ಪುಟ್ಟ ಹಳ್ಳಿಗಳಲ್ಲಿ ನಿಲುಗಡೆ ಮಾಡುವುದಿಲ್ಲ.

ನೂರಾರು ವಿದ್ಯಾರ್ಥಿಗಳು ಸಂಚರಿಸುವ ಮಾರ್ಗದಲ್ಲಿ ಒಂದೇ ಬಸ್ಸು ಹೋಗಿ ಬರುತ್ತದೆ. ಬಸ್ಸಿನಲ್ಲಿ ವಿದ್ಯಾರ್ಥಿಗಳನ್ನು ಕುರಿಯಂತೆ ತುಂಬಿಕೊಂಡು ಹೋಗಲಾಗುತ್ತದೆ. ಬಸ್ ಪಾಸ್ ನೀಡುತ್ತಾರೆ. ಆದರೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಸ್ ಬಿಡುತ್ತಿಲ್ಲ ಎನ್ನುವುದು ವಿದ್ಯಾರ್ಥಿಗಳ ಅಳಲು.

ಪ್ರಜಾವಾಣಿ ತಂಡ: ಶಶಿಕಾಂತ ಎಸ್‌. ಶೆಂಬೆಳ್ಳಿ, ಎ. ಎಂ.ಸೋಮಶೇಖರ್‌, ಸಿ. ಶಿವಾನಂದ, ವಿಶ್ವನಾಥ ಡಿ., ಎಸ್‌.ಎಂ. ಗುರುಪ್ರಸಾದ್, ವಾಗೀಶ್ ಎ. ಕುರುಗೋಡು, ಪಂಡಿತಾರಾಧ್ಯ ಎಚ್‌.ಎಂ. ಮೆಟ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT