ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರದಿಂದ ಭಾರತದ ಅಸ್ಮಿತೆ ರಕ್ಷಣೆ: ಸಾಹಿತಿ ಎಂ. ಚಿದಾನಂದಮೂರ್ತಿ

Last Updated 20 ಏಪ್ರಿಲ್ 2019, 15:09 IST
ಅಕ್ಷರ ಗಾತ್ರ

ಹೊಸಪೇಟೆ: ‘ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗದಿದ್ದರೆ ಭಾರತ ತನ್ನ ಅಸ್ಮಿತೆ ಕಳೆದುಕೊಳ್ಳುತ್ತಿತ್ತು. ಅಷ್ಟೇ ಅಲ್ಲ, ಹಿಂದೂ ಧರ್ಮಕ್ಕೂ ಈ ಸಾಮ್ರಾಜ್ಯದ ಕೊಡುಗೆ ಅಪಾರ’ ಎಂದು ಹಿರಿಯ ಸಾಹಿತಿ ಎಂ. ಚಿದಾನಂದಮೂರ್ತಿ ಹೇಳಿದರು.

ಪ್ರೌಢದೇವರಾಯಕಾಲೀನ 101 ವಿರಕ್ತರ ಹಾಗೂ ವೀರಶೈವ ಕವಿಗಳ ವೇದಿಕೆಯಿಂದ ಶುಕ್ರವಾರ ರಾತ್ರಿ ತಾಲ್ಲೂಕಿನ ಹಂಪಿ ಕೊಟ್ಟೂರು ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿದ್ದ ಸಂ.ಶಿ. ಭೂಸನೂರಮಠ ಅವರ ‘ವಿಜಯ ಕಲ್ಯಾಣ’, ಸಾಹಿತಿ ಮೃತ್ಯುಂಜಯ ರುಮಾಲೆ ಅವರ ‘ಹರಿಹರನ ಹನ್ನೆರಡು ಸಂಕೀರ್ಣ ರಗಳೆಗಳು’ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

‘ವಿಜಯನಗರ ಸಾಮ್ರಾಜ್ಯದಲ್ಲಿಹಿಂದೂ ಧರ್ಮ, ಸಂಸ್ಕೃತಿ ಬೆಳವಣಿಗೆಗೆ ಎಲ್ಲ ಅರಸರು ಪ್ರೋತ್ಸಾಹ ನೀಡಿದರು. ಭಾರತೀಯತೆಯನ್ನು ಉಳಿಸಲು ಶ್ರಮಿಸಿದರು.ಹಾಗಾಗಿ ಪ್ರತಿಯೊಬ್ಬ ಭಾರತೀಯನು ವಿಜಯನಗರ ಅರಸರಿಗೆ ಕೃತಜ್ಞನಾಗಿರಬೇಕು’ ಎಂದರು.

‘ದೇಶದಾದ್ಯಂತ ಅಧರ್ಮ ತಾಂಡವವಾಡುತ್ತಿತ್ತು. ಅನ್ಯಾಯ–ಅಕ್ರಮಗಳು ಮೇರೆ ಮೀರಿದ್ದವು. ಹಿಂದೂ ಧರ್ಮ, ಭಾರತವನ್ನು ನಾಶ ಮಾಡುವ ಹುನ್ನಾರ ನಡೆದಿತ್ತು. ಸಂಗಮ ವಂಶ ಹುಟ್ಟುವುದರೊಂದಿಗೆ ಧರ್ಮ ಸಂಸ್ಥಾಪನ ಕೆಲಸ ಆರಂಭವಾಯಿತು. ಇದು ನನ್ನ ಮಾತಲ್ಲ. ಲಿಖಿತ ಶಾಸನದಲ್ಲಿ ನೋಡಬಹುದು’ ಎಂದು ತಿಳಿಸಿದರು.

ಕೊಟ್ಟೂರು ಸಂಸ್ಥಾನ ಮಠದ ಪೀಠಾಧಿಪತಿ ಸಂಗನಬಸವ ಸ್ವಾಮೀಜಿ ಮಾತನಾಡಿ, ‘ಪ್ರೌಢದೇವರಾಯನ ಕಾಲದಲ್ಲಿ ನಡೆದ ಧಾರ್ಮಿಕ ಕೆಲಸಗಳು ಬೇರೆ ಯಾರ ಕಾಲದಲ್ಲಿಯೂ ನಡೆದಿಲ್ಲ. ಆದರೆ, ಆತನ ಸಾಧನೆ, ಕೊಡುಗೆಗಳನ್ನು ಮರೆಮಾಚಲಾಗಿದೆ’ ಎಂದರು.

ಮೃತ್ಯುಂಯ ರುಮಾಲೆ ಮಾತನಾಡಿ, ‘ಹಂಪಿಗೆ ಸಾಹಿತಿಕ ಮಹತ್ವವನ್ನು ತಂದುಕೊಟ್ಟ ಕವಿ ಹರಿಹರ. ಭಾರತೀಯ ಪ್ರಜ್ಞೆಯನ್ನು ಜಾಗೃತಗೊಳಿಸಿ ಹೊಸ ಪರಂಪರೆಗೆ ನಾಂದಿ ಹಾಡಿದ’ ಎಂದು ಹೇಳಿದರು.

ಬಾಲೆಹೂಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಮರಿಮಹಾಂತ ಸ್ವಾಮೀಜಿ, ಮುಪ್ಪಿನ ಬಸವಲಿಂಗದೇವರು, ಕೊಟ್ಟೂರು ದೇಶಿಕ ಸ್ವಾಮೀಜಿ, ಕಲಾವಿದೆ ನೀಲಲೋಚನ ಶೀಲವಂತರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT