ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಉಸ್ತುವಾರಿ ಸಚಿವರ ಬದಲಾವಣೆ ಪ್ರಹಸನ

ಬೆಳಿಗ್ಗೆ ಉಸ್ತುವಾರಿ ಸಚಿವರ ಬದಲಾವಣೆ, ಸಂಜೆ ವೇಳೆ ಆದೇಶ ರದ್ದು
Last Updated 31 ಜುಲೈ 2022, 19:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಜಯನಗರ ಮತ್ತು ನೆರೆಯ ಕೊಪ್ಪಳ ಜಿಲ್ಲೆಗಳು ಶನಿವಾರ ಉಸ್ತುವಾರಿ ಸಚಿವರ ಬದಲಾವಣೆ, ಆದೇಶ ಹಿಂಪಡೆದ ಪ್ರಹಸನಕ್ಕೆ ಸಾಕ್ಷಿಯಾದವು.

ಮುಜರಾಯಿ ಖಾತೆ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಅವರನ್ನು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ತೆಗೆದು ಆನಂದ್‌ ಸಿಂಗ್‌ ಅವರಿಗೆ ಅದರ ಹೊಣೆ ವಹಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆನಂದ್‌ ಸಿಂಗ್‌ ಅವರ ಜಾಗಕ್ಕೆ ಶಶಿಕಲಾ ಅವರನ್ನು ನೇಮಿಸಿ ಶುಕ್ರವಾರವೇ (ಜು.29) ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಮಾಧ್ಯಮಗಳಿಗೆ ಅಧಿಕೃತ ಆದೇಶ ಪತ್ರ ತಲುಪಿದ್ದು ಶನಿವಾರ (ಜು.30) ಬೆಳಿಗ್ಗೆ.

ಆದರೆ, ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಸರ್ಕಾರವು ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆಗೊಳಿಸಿ ಹೊರಡಿಸಿದ್ದ ಆದೇಶ ರದ್ದುಪಡಿಸಿ, ಹಿಂಪಡೆದುಕೊಂಡಿತು. ತಕ್ಷಣದಿಂದಲೇ ಜಾರಿಗೆ ಬರುವಂತೆ ಜು. 29ರಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿ ಹಿಂಪಡೆಯಲಾಗಿದೆ ಎಂದು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಾಲತಿ ಸಿ. ಆದೇಶ ಹೊರಡಿಸಿದ್ದರು. ಹೀಗೆ ಕೆಲವೇ ಗಂಟೆಗಳಲ್ಲಿ ಸರ್ಕಾರ ತಾನೇ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದ್ದರಿಂದ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿತ್ತು.

ಗೊಂದಲಕ್ಕೆ ಕಾರಣವೇನು?:

ನೂತನ ವಿಜಯನಗರ ಜಿಲ್ಲೆಯನ್ನು ತ್ವರಿತ ಗತಿಯಲ್ಲಿ ಕಟ್ಟಬೇಕಾಗಿರುವುದರಿಂದ ಆ ಜಿಲ್ಲೆಯ ಉಸ್ತುವಾರಿ ತನಗೆ ವಹಿಸಬೇಕೆಂದು ಮೊದಲ ದಿನದಿಂದಲೂ ಸಚಿವ ಆನಂದ್‌ ಸಿಂಗ್‌ ಅವರು ಸಿ.ಎಂ. ಮೇಲೆ ಒತ್ತಡ ಹೇರುತ್ತಿದ್ದರು. ಆದರೆ, ಸಿ.ಎಂ. ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ 2022ರ ಜನವರಿ 24ರಂದು ಆನಂದ್‌ ಸಿಂಗ್‌ ಅವರಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಾಡಿ, ಶಶಿಕಲಾ ಜೊಲ್ಲೆ ಅವರಿಗೆ ವಿಜಯನಗರದ ಉಸ್ತುವಾರಿ ಮಾಡಿದ್ದರು. ಈ ಕುರಿತು ಆನಂದ್‌ ಸಿಂಗ್‌ ಪರೋಕ್ಷವಾಗಿ ಅಸಮಾಧಾನ ಕೂಡ ತೋಡಿಕೊಂಡಿದ್ದರು.

ಆದರೆ, ಮೇಲಿಂದ ಮೇಲೆ ಅವಕಾಶ ಸಿಕ್ಕಾಗಲೆಲ್ಲಾ ಮುಖ್ಯಮಂತ್ರಿ ಬಳಿ ಉಸ್ತುವಾರಿ ಬದಲಾವಣೆಗೆ ಹಕ್ಕೊತ್ತಾಯ ಮಾಡುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರ‌ಪ್ಪ ಹಾಗೂ ಕೆಲ ಹಿರಿಯ ಮುಖಂಡರ ಮೂಲಕವೂ ಸಿ.ಎಂ ಮೇಲೆ ಒತ್ತಡ ಹೇರಿದ್ದಾರೆ. ಅದಕ್ಕೆ ಮಣಿದು ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಲಾಗಿತ್ತು. ಇದರಿಂದ ಆನಂದ್ ಸಿಂಗ್‌ ಹಾಗೂ ಅವರ ಬೆಂಬಲಿಗರು ಸಂತಸಗೊಂಡಿದ್ದರು. ಆದರೆ, ನಿರ್ದಿಷ್ಟವಾಗಿ ಎರಡೇ ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿದರೆ ಉಳಿದ ಜಿಲ್ಲೆಗಳಲ್ಲೂ ಈ ಕೂಗು ಕೇಳಿ ಬರಬಹುದು. ಸರ್ಕಾರದ ಬಗ್ಗೆ ತಪ್ಪು ಅಭಿಪ್ರಾಯ ಮೂಡಬಹುದು ಎಂದು ಪಕ್ಷದ ಹಿರಿಯ ಮುಖಂಡರು ಮನವರಿಕೆ ಮಾಡಿಕೊಟ್ಟಿದ್ದರಿಂದ ಸರ್ಕಾರ ತನ್ನ ಆದೇಶ ಹಿಂಪಡೆದಿದೆ ಎನ್ನಲಾಗಿದೆ. ಸರ್ಕಾರ ಆದೇಶ ರದ್ದುಪಡಿಸಿದ್ದರಿಂದ ಬೆಳಿಗ್ಗೆಯಿದ್ದ ಸಂಭ್ರಮ ಸಂಜೆ ಮರೆಯಾಯಿತು.

ಇನ್ನೊಂದೆಡೆ ತಮ್ಮ ಬದಲಾವಣೆಗೆ ತೆರೆಮರೆಯಲ್ಲಿ ಕಸರತ್ತು ನಡೆದಿದ್ದರೂ ಅದರ ಬಗ್ಗೆ ಶಶಿಕಲಾ ಅವರಿಗೆ ಸುಳಿವೇ ಇರಲಿಲ್ಲ. ಶನಿವಾರ ಸರ್ಕಾರದ ಆದೇಶ ಹೊರಬಿದ್ದ ನಂತರವಷ್ಟೇ ಅವರಿಗೆ ವಿಷಯ ಗೊತ್ತಾಗಿದ್ದು, ಅವರ ಆಪ್ತರ ಬಳಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ.

ಈ ಬಗ್ಗೆ ಸಚಿವೆ ಶಶಿಕಲಾ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ. ಇನ್ನು, ಸಚಿವ ಆನಂದ್‌ ಸಿಂಗ್‌ ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು.

ಬೆಳಿಗ್ಗೆ ಸಂಭ್ರಮ, ಸಂಜೆ ನಿರಾಸೆ

ಆನಂದ್‌ ಸಿಂಗ್‌ ಅವರಿಗೆ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಿಸಿದ್ದಕ್ಕೆ ಅವರ ಬೆಂಬಲಿಗರಲ್ಲಿ ಹರ್ಷ ಮನೆ ಮಾಡಿತ್ತು. ನಗರದ ಕೆಲವೆಡೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಆದೇಶ ಪ್ರತಿಗಳನ್ನು ಹಂಚಿಕೊಂಡಿದ್ದರು. ಆದರೆ, ಸಂಜೆ ಸರ್ಕಾರ ಆದೇಶ ರದ್ದುಪಡಿಸಿದ್ದರಿಂದ ಅವರಲ್ಲಿ ನಿರಾಸೆ ಮೂಡಿತ್ತು. ಸರ್ಕಾರ ಹೀಗೇಕೇ ಮಾಡಿತ್ತು ಎಂದು ಪರಸ್ಪರ ಚರ್ಚಿಸುತ್ತಿದ್ದರು.

ದಾಖಲೆಯ ಅವಕಾಶ ಕೈತಪ್ಪಿತೇ?

ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ₹6 ಕೋಟಿಯಲ್ಲಿ 405 ಅಡಿ ಎತ್ತರದ ಧ್ವಜ ಸ್ತಂಭ ನಿರ್ಮಿಸುವ ಕಾಮಗಾರಿ ಭರದಿಂದ ನಡೆದಿದೆ. ದೇಶದಲ್ಲೇ ಅತಿ ಎತ್ತರದ ಧ್ವಜ ಸ್ತಂಭವೆಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದ್ದು, ಆ. 15ರಂದು ಧ್ವಜಾರೋಹಣ ನೆರವೇರಿಸಿ ದಾಖಲೆ ನಿರ್ಮಿಸಿ, ಇತಿಹಾಸದ ಪುಟಗಳಲ್ಲಿ ಹೆಸರು ಸೇರಬೇಕೆಂಬ ಇರ್‍ಯಾದೆ ಸಚಿವ ಆನಂದ್‌ ಸಿಂಗ್‌ ಅವರದ್ದಾಗಿದೆ. ಅದಕ್ಕಾಗಿಯೇ ಸತತವಾಗಿ ಉಸ್ತುವಾರಿ ಬದಲಾವಣೆಗೆ ಆಗ್ರಹಿಸುತ್ತ ಬಂದಿದ್ದರು. ಆದರೆ, ಅದು ಈಡೇರಿಲ್ಲ. ಟೆಂಡರ್‌ ಇಲ್ಲದೇ ₹6 ಕೋಟಿಯಲ್ಲಿ ಧ್ವಜ ಸ್ತಂಭ ನಿರ್ಮಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT