ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ತಾಯಿ, ವಿಜಯನಗರ ಮಗು!

ವಿಭಜನೆ ವಿರುದ್ಧ ಬಂದ್‌ ಇಂದು: ಜಿಲ್ಲೆಯಲ್ಲಿ ಪರ–ವಿರುದ್ಧ ಒಲವು–ನಿಲುವು
Last Updated 25 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಬಳ್ಳಾರಿ: ‘ಬಳ್ಳಾರಿ ತಾಯಿಯಾದರೆ, ವಿಜಯನಗರ ಈಗ ಹುಟ್ಟಿದ ಮಗು. ಇದಕ್ಕೆ ಸಂತಸಪಡಿ. ಸಂಕಟ ಬೇಡ. ಇಷ್ಟು ಮೀರಿ ನೀವು ಅಖಂಡ ಬಂದ್‌ ಮಾಡಿದರೆ ನಾವು ವಿಜಯದ ಹಬ್ಬ ಆಚರಿಸುತ್ತೇವೆ..’

– ಜಿಲ್ಲೆಯ ವಿಭಜನೆಯನ್ನು ವಿರೋಧಿಸಿ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯು ಗುರುವಾರದ ಬಂದ್‌ಗೆ ಬುಧವಾರ ಸಿದ್ಧತೆ ನಡೆಸಿರುವಾಗಲೇ, ಜಿಲ್ಲೆಯ ಪಶ್ಚಿಮ ತಾಲ್ಲೂಕಿನ ಜನರೂ ಆ ಬಗ್ಗೆ ಅಸಮಾಧಾನವನ್ನು ಹೀಗೆ ಹೊರಹಾಕಿದ್ದರು.

ಕೊಟ್ಟೂರು ಕೆರೆ ಉಳಿಸಿ ಆಂದೋಲನದ ಮುಖಂಡ ಕೆರೆ ಕೊಟ್ರೇಶ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಮೇಲಿನಂತೆ ಬರೆದುಕೊಂಡು ಗಮನ ಸೆಳೆದರು.

‘ವಿಕೇಂದ್ರೀಕರಣ ಅಭಿವೃದ್ಧಿಗೆ ದಾರಿ ಮಾಡುತ್ತದೆ. ವಿಭಜನೆ ಯಾವಾಗಲೂ ತಾಯಿ–ಮಗುವಿನ ಸಂಬಂಧವಿದ್ದಂತೆ. ಹುಟ್ಟಿದ ಮಗು ನೋಡಿ ಯಾರೂ ಕ್ರೋಧಿಸುವುದಿಲ್ಲ. ಖುಷಿಪಡುತ್ತಾರೆ. ಬೇರೆ ಊರಿನವರನ್ನು ಕರೆಸಿ ಬೊಬ್ಬೆಯಿಡಿಸುವುದಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

‘ಜನರನ್ನು ಕಡೆಗೆಣಿಸಿದ್ದರ ಪರಿಣಾಮವೇ ಈ ಹೊಸ ಜಿಲ್ಲೆ. ಹಣ ಬಲ, ತೋಳ್ಬಲವನ್ನು ನಂಬಿ ಜನಬಲವನ್ನು ಧಿಕ್ಕರಿಸಿದ್ದರ ಪರಿಣಾಮವೇ ಹೊಸ ಜಿಲ್ಲೆ. ಗಡಿ, ಗುಡ್ಡ ಮಾಯಮಾಡುವ ತಾಕತ್ತುಳ್ಳವರು ನಾಳೆ ಹಂಪಿಯ ಕಲ್ಲಿನ ತೇರು, ಹೊಸಪೇಟೆ ಡ್ಯಾಂ ಮಾಯ ಮಾಡುವುದಿಲ್ಲವೆಂದು ಏನು ಗ್ಯಾರಂಟಿ?’ ಎಂದು ಪ್ರಶ್ನಿಸಿದ್ದರು.

ಅಖಂಡತೆಯೇ ಇರಲಿಲ್ಲ: ಇದೇ ವೇಳೆ, ಅಖಂಡ ಬಳ್ಳಾರಿಯ ಪ್ರತಿಪಾದನೆಯನ್ನೂ ಕೆಲವರು ವಿರೋಧಿಸುತ್ತಿದ್ದಾರೆ. ಬಳ್ಳಾರಿಯಲ್ಲಿ ಅಖಂಡ ಭಾವವೆಂಬುದು ಇರಲೇ ಇಲ್ಲ ಎಂಬಸಿಟ್ಟನ್ನೂ ವ್ಯಕ್ತಪಡಿಸಿದ್ದಾರೆ.

ಹಡಗಲಿಯ ವಿ.ಬಿ. ಮಲ್ಲಪ್ಪ, ‘ಬಳ್ಳಾರಿಯ ಅಖಂಡತೆಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವಂಥಾದ್ದು ಏನೂ ಇರಲೇ ಇಲ್ಲ. ಪೂರ್ವ, ಪಶ್ಚಿಮ ಎಂದು ಮಾನಸಿಕವಾಗಿ ನಮ್ಮನ್ನು ಮೊದಲೇ ವಿಭಾಹ ಮಾಡಲಾಗಿತ್ತು’ ಎಂದು ವಿಷಾದವನ್ನು ವ್ಯಕ್ತಪಡಿಸಿದ್ದಾರೆ.

’ಬರೀ ಭಾವುಕತೆಗಳಿಂದ ಗೊಂದ ಸೃಷ್ಟಿಸುವ ಬದಲು ಬಳ್ಳಾರಿವಿಭಜನೆ ಯಾಕೆ ಆಗಬೇಕು? ಯಾಕೆ ಆಗಬಾರದು ಎಂಬುದು ಚರ್ಚೆಯಾದರೆ ಒಳ್ಳೆಯದು’ ಎಂದು ಅವರು ಪ್ರತಿಪಾದಿಸಿದ್ದಾರೆ.

ಚರ್ಚೆ ಇಲ್ಲ: ವಿಭಜನೆ ಬೇಕು ಮತ್ತು ಬೇಡ ಎಂಬುವವರ ನಡುವೆ ಇದುವರೆಗೆ ಆರೋಗ್ಯಕರ ಚರ್ಚೆಗಳು ನಡೆದಿಲ್ಲ. ವಿಜಯನಗರ ಜಿಲ್ಲೆಗೆ ಸೇರಬಹುದಾದ ತಾಲ್ಲೂಕುಗಳ ಹೆಚ್ಚಿನ ಜನರು ಕೂಡ ಮೌನವಾಗಿಯೇ ದಿನದೂಡುತ್ತಿದ್ದಾರೆ. ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರ ವಿಭಜನೆಯಾದರೆ ಮಾತ್ರ ಅಭಿವೃದ್ಧಿ ಎಂದರೂ, ಸೌಹಾರ್ದತೆಗೆ ಧಕ್ಕೆ ಬರುವುದಿಲ್ಲವೆಂದೂ ಪ್ರತಿಪಾದಿಸಿ ಗಮನ ಸೆಳೆಯುತ್ತಿದ್ದಾರೆ.

’ನಮ್ಮ ಬಳ್ಳಾರಿ ನಮ್ಮ ಹೆಮ್ಮೆ’

ಬಳ್ಳಾರಿ: ವಿಭಜನೆಯನ್ನು ವಿರೋಧಿಸುತ್ತಿರುವ ವಿವಿಧ ಕ್ಷೇತ್ರಗಳ ಮುಖಂಡರು, ಕಾರ್ಯಕರ್ತರು ಎಲ್ಲೆಡೆ ’ಅಖಂಡ ಬಳ್ಳಾರಿ ಜಿಲ್ಲೆಗೆ ನನ್ನ ಸಂಪೂರ್ಣ ಬೆಂಬಲ. ನಮ್ಮ ಬಳ್ಳಾರಿ, ನಮ್ಮ ಹೆಮ್ಮೆ’ ಎಂದು ಹೇಳುತ್ತಾ ಸಂಚರಿಸುತ್ತಿದ್ದಾರೆ. ಬಹುತೇಕರ ಫೇಸ್‌ಬುಕ್‌ ಖಾತೆಯಲ್ಲೂ ಈ ಬರೆಹ ಕಾಣಿಸಿಕೊಂಡಿದೆ.

ಬಂದ್‌ಗೆ ಬೆಂಬಲ: ಮನವಿ

‘ವಿಜಯನಗರ ಜಿಲ್ಲೆ ರಚನೆ ವಿರುದ್ಧ ಅಖಂಡ ಬಳ್ಳಾರಿ ಜಿಲ್ಲಾಹೋರಾಟ ಸಮಿತಿಯು ನ.26ರಂದು ಬಳ್ಳಾರಿ ಬಂದ್‌ಗೆ ಕರೆ ನೀಡಿದ್ದು, ಬೆಳಿಗ್ಗೆ 6ರಿಂದ ಸಂಜೆ 6ರವರೆಗೂ ಸಂಪೂರ್ಣ ಜಿಲ್ಲೆ ಬಂದ್‌ ಮಾಡಲಾಗುವುದು. ವಿವಿಧ ಸಂಘ–ಸಂಸ್ಥೆಗಳು, ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಬೆಂಬಲ ನೀಡಬೇಕು’ ಎಂದು ಸಮಿತಿಯ ಮುಖಂಡರಾದ ದರೂರು ಪುರುಷೋತ್ತಮಗೌಡ, ಚಾನಾಳ್‌ ಶೇಖರ್‌, ಸಿದ್ಮಲ್‌ ಮಂಜುನಾಥ್‌, ಮನವಿ ಮಾಡಿದ್ದಾರೆ.

‘ಪಶ್ಚಿಮ ತಾಲ್ಲೂಕುಗಳ ಜನ ವಿಭಜನೆಯನ್ನು ಒಪ್ಪಿಕೊಂಡಿರುವುದರಿಂದ, ಬಂದ್‌ಗೆ ಬೆಂಬಲ ನೀಡಿ ಎಂದು ಅವರನ್ನು ಕೇಳುವುದಿಲ್ಲ. ಬಳ್ಳಾರಿ, ಸಂಡೂರು, ಕುರುಗೋಡು, ಸಿರುಗುಪ್ಪದ ಜನತೆ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ’ ಎಂದು ಸಮಿತಿಯ ಮುಖಂಡರು ಕೆಲವು ದಿನಗಳ ಹಿಂದೆ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT