ಕುಂಚದಲ್ಲಿ ಮೇಳೈಸಿದ ವಿಜಯನಗರ ವೈಭವ

ಭಾನುವಾರ, ಮಾರ್ಚ್ 24, 2019
27 °C
ನಾನಾ ಭಾಗದ 20 ಕಲಾವಿದರಿಂದ ಹಂಪಿ ಗತ ವೈಭವದ ಮೇಲೆ ಬೆಳಕು

ಕುಂಚದಲ್ಲಿ ಮೇಳೈಸಿದ ವಿಜಯನಗರ ವೈಭವ

Published:
Updated:
Prajavani

ಹಂಪಿ: ರಸ್ತೆಬದಿ ಸೇರಿನಲ್ಲಿ ಮುತ್ತು ಹುವಳ ವ್ಯಾಪಾರ, ರಾಜನ ತುಲಾಭಾರ, ಸಂಗೀತ ಮತ್ತು ನೃತ್ಯದ ಕಛೇರಿ, ಮಹಾರಾಜನಿಂದ ಶಿವಲಿಂಗಕ್ಕೆ ಪುಷ್ಪಗೆರೆದು ಶ್ರದ್ಧಾ, ಭಕ್ತಿಯಿಂದ ಪೂಜೆ...

ಹಂಪಿ ಉತ್ಸವದ ಪ್ರಯುಕ್ತ ಇಲ್ಲಿನ ಎದುರು ಬಸವಣ್ಣ ಮಂಟಪದ ಬಳಿ ಆಯೋಜಿಸಿರುವ ಚಿತ್ರ ಕಲಾಕೃತಿಗಳಲ್ಲಿ ವಿಜಯನಗರ ಸಾಮ್ರಾಜ್ಯದ ವೈಭವ ಕಂಡಿದ್ದು ಹೀಗೆ.

ಉತ್ಸವದ ಪ್ರಯುಕ್ತ ಫೆ. 27,28ರಂದು ಚಿತ್ರಕಲಾ ಶಿಬಿರ ಆಯೋಜಿಸಲಾಗಿತ್ತು. ರಾಜ್ಯದ ನಾನಾ ಭಾಗದ 20 ಕಲಾವಿದರು ಹಂಪಿಯ ವೈಭವವನ್ನು ಕುಂಚದ ಮೂಲಕ ಜಗತ್ತಿಗೆ ಪರಿಚಯಿಸಿದ್ದಾರೆ. ಆ ಕಲಾಕೃತಿಗಳನ್ನು ಉತ್ಸವದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದ್ದು, ಚರಿತ್ರೆ ಓದಿ ವಿಜಯನಗರ ಸಾಮ್ರಾಜ್ಯದ ಬಗ್ಗೆ ತಿಳಿದುಕೊಂಡಿದ್ದ ಜನರಿಗೆ ಚಿತ್ರಗಳ ಮೂಲಕ ಮನದಟ್ಟು ಮಾಡಿಕೊಡುವ ಕೆಲಸ ಮಾಡಲಾಗಿದೆ.

‘ಅಲ್ಲಿ ನೋಡು ಸೇರಿನಲ್ಲಿ ಮುತ್ತು, ಹವಳ ಅಳೆಯುತ್ತಿದ್ದಾರೆ. ಕೃಷ್ಣದೇವರಾಯ ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಿದ್ದಾನೆ’ ಎಂದು ಜನ ಉದ್ಗಾರ ತೆಗೆಯುತ್ತಿದ್ದಾರೆ. ಕಲಾಕೃತಿಗಳ ಬಳಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.

ಜನರ ಸಂಭ್ರಮಕ್ಕೆ ಕಾರಣವೂ ಇದೆ. ಈ ಹಿಂದಿನ ಉತ್ಸವಗಳಲ್ಲಿ ಕಲಾಕೃತಿಗಳು ಹಂಪಿಯ ಪರಿಸರ, ಗೋಪುರ, ಸ್ಮಾರಕಗಳಿಗೆ ಸೀಮಿತವಾಗಿದ್ದವು. ಆದರೆ, ಈ ಸಲದ ಉತ್ಸವದಲ್ಲಿ ಹಂಪಿ ವೈಭವದ ಮೇಲೆ ಬೆಳಕು ಚೆಲ್ಲಬೇಕು ಎಂಬ ನಿಯಮ ಕಡ್ಡಾಯಗೊಳಿಸಲಾಗಿತ್ತು. ಹೀಗಾಗಿ ಚರಿತ್ರೆಯ ವೈಭವ ಕ್ಯಾನ್ವಾಸ್‌ ಮೇಲೆ ಮೂಡಿಬಂದಿದೆ.

ಕಲಾವಿದ ಗಂಗಾಧರ ಹುಣಸಿಕಟ್ಟೆ ಅವರು, ರಸ್ತೆ ಬದಿಯಲ್ಲಿ ಮಹಿಳೆಯೊಬ್ಬರು ವಜ್ರ ವೈಢೂರ್ಯಗಳನ್ನು ಯಾವುದೇ ಅಳಕಿಲ್ಲದೇ ಮಾರಾಟ ಮಾಡುತ್ತಿರುವ ಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ. ಅದೇ ರೀತಿ ಜಯವಂತ ಅವರ ಕಡಲೆಕಾಳು ಗಣಪ, ಮೂಲ ಸ್ಮಾರಕಕ್ಕಿಂತ ಭಿನ್ನವಾಗಿದೆ. ಅವರ ಸೃಜನಶೀಲತೆಗೆ ಸಾಕ್ಷಿಯಾಗಿದೆ.

ಜಿ.ಎಂ. ರಾಜಶೇಖರ್‌ ಅವರ ವೀರಗಾಸೆ ಕಲಾಕೃತಿ ಜಾನಪದ ಪರಂಪರೆ ಮೇಲೆ ಬೆಳಕು ಚೆಲ್ಲುತ್ತದೆ. ಅರಸನಿಗೆ ತುಲಾಭಾರ ಮಾಡುತ್ತಿರುವುದು, ರಾತ್ರಿ ವೇಳೆ ಬೆಂಕಿಯ ಬೆಳಕಿನಲ್ಲಿ ಮೆರವಣಿಗೆ ಮಾಡುತ್ತಿರುವ ಸಂದರ್ಭವನ್ನು ಮಲ್ಲನಗೌಡ ಕಿತ್ತೂರು ತಮ್ಮ ಕಲಾಕೃತಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ.

ಕೋಲೆ ಬಸವ, ಪ್ರೇಯಸಿ ಹಾಗೂ ಪ್ರೀಯತಮ ಪ್ರೇಮದಲ್ಲಿ ತಲ್ಲೀನರಾಗಿರುವ ಪ್ರಸಂಗವನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ ಯೂನುಸ್‌ ಕೊತ್ವಾಲ್‌. ಕಲಾವಿದ ಸಿದ್ಧಲಿಂಗಪ್ಪ ಅವರು ಹಂಪಿ ಉತ್ಸವ ಹಂಪಿ ಮಾರುಕಟ್ಟೆಯಲ್ಲಿ ಮುತ್ತು, ರತ್ನಗಳನ್ನು ಮಾರಾಟ ಮಾಡುತ್ತಿರುವ ಸನ್ನಿವೇಶಕ್ಕೆ ಜೀವ ತುಂಬಿದ್ದಾರೆ. ನಾಗೇಶ್ವರರಾವ ಅವರು, ಕೃಷ್ಣದೇವರಾಯನು ಶಿವಲಿಂಗಕ್ಕೆ ಪುಷ್ಪ ಸಮರ್ಪಿಸುತ್ತಿರುವುದು, ವ್ಯಾಪಾರಿಗಳು ಅರಸನಿಗೆ ಮುತ್ತು ರತ್ನ ಕೊಡಲು ಬಂದಾಗ, ಅದನ್ನು ನಿರಾಕರಿಸುತ್ತಿರುವ ಪ್ರಸಂಗ ಎಲ್ಲರಿಗೂ ಬಹುವಾಗಿ ಇಷ್ಟವಾಗುತ್ತಿದೆ.

ಬಿ.ಕೆ. ಬಡಿಗೇರ್‌ ಅವರು, ಹಂಪಿಯ ಪರಿಸರವನ್ನು ಚಿತ್ರಿಸಿದ್ದಾರೆ. ಗುಡ್ಡಗಾಡು, ನೀರಿನ ಜಲಪಾತಗಳು ಅವರ ಕಲಾಕೃತಿಯ ವಿಶೇಷ. ಎಸ್‌.ವಿ. ಗುಂಜಾಲ್‌ ಅವರು, ವಿಜಯನಗರ ಸಾಮ್ರಾಜ್ಯದಲ್ಲಿ ಚಿತ್ರಕಲೆಗೆ ಪ್ರೋತ್ಸಾಹವಿತ್ತು ಎಂಬುದರ ಮೇಲೆ ಬೆಳಕು ಚೆಲ್ಲಿದ್ದಾರೆ. ಮಲ್ಲಿಕಾರ್ಜುನ ಅವರು, ವಿಜಯನಗರ ಕಾಲದ ಸೈನಿಕರ ಶಿಸ್ತು, ಸುದರ್ಶನ್‌ ಅವರ ಕುಸ್ತಿ ದೃಶ್ಯ, ಸೃಷ್ಟಿ ಮಕಾಲೆ ಅವರ ಗ್ರಾಮೀಣ ಮಹಿಳೆ, ವೆಂಕಟೇಶ್‌ ಅವರು ಕಹಳೆ ಊದುವುದರ ಮೇಲೆ ಬೆಳಕು ಚೆಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !