ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12ರಂದು ‘ವಿರುಪಾ’ ಚಿತ್ರ ತೆರೆಗೆ

ಹಂಪಿ ಪರಿಸರದಲ್ಲಿ ಚಿತ್ರೀಕರಣ; ಸ್ಥಳೀಯ ಮಕ್ಕಳು, ರಂಗಕರ್ಮಿಗಳೇ ಕಲಾವಿದರು
Last Updated 4 ಏಪ್ರಿಲ್ 2019, 15:39 IST
ಅಕ್ಷರ ಗಾತ್ರ

ಹೊಸಪೇಟೆ: ‘ಹಂಪಿ ಸುತ್ತಮುತ್ತಲಿನ ಪರಿಸರದಲ್ಲಿ ಚಿತ್ರೀಕರಣ ಮಾಡಿರುವ ‘ವಿರುಪಾ’ ಕನ್ನಡ ಚಿತ್ರ ಇದೇ 12ರಂದು ತೆರೆಗೆ ಬರಲಿದ್ದು, ರಾಜ್ಯದ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಪ್ರದರ್ಶನಗೊಳ್ಳಲಿದೆ’ ಎಂದು ಚಿತ್ರದ ನಿರ್ದೇಶಕ ಪುನೀಕ್‌ ಶೆಟ್ಟಿ ತಿಳಿಸಿದರು.

ಗುರುವಾರ ಇಲ್ಲಿ ಚಿತ್ರತಂಡದೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ‘ಹಂಪಿಯಲ್ಲಿ ಶೇ 99ರಷ್ಟು ಚಿತ್ರೀಕರಣ ಪೂರ್ಣಗೊಳಿಸಿದರೆ, ಕೆಲವು ಭಾಗ ನಗರ ಹಾಗೂ ತಾಲ್ಲೂಕಿನ ಕಡ್ಡಿರಾಂಪುರ, ಪ್ರಕಾಶ ನಗರದಲ್ಲಿ ಮುಗಿಸಲಾಗಿದೆ. ನಗರದ ರಂಗಭೂಮಿ ಬಾಲ ಕಲಾವಿದ ವಿಷ್ಣು, ಪಾಕ್ಷ ಎಂಬ ಪ್ರಮುಖ ಪಾತ್ರ ನಿರ್ವಹಿಸಿರುವುದು ವಿಶೇಷ’ ಎಂದು ಮಾಹಿತಿ ನೀಡಿದರು.

‘ಭಟ್ಕಳದ ಶಾಯಲ್‌, ವಿನ್ಸೆಂಟ್‌ ಆಗಿ, ಚಳ್ಳಕೆರೆಯ ಚರಣ್‌, ರುಸ್ತುಂ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಥಳೀಯ 50 ಮಕ್ಕಳು, 30 ವಿದೇಶಿ ಪ್ರವಾಸಿಗರು ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷ. ಸ್ಥಳೀಯ ರಂಗಭೂಮಿ ಕಲಾವಿದರಾದ ನಾಗರತ್ನಮ್ಮ, ಎಸ್‌.ಎಸ್‌. ಚಂದ್ರಶೇಖರ್‌, ಮಂಜುನಾಥ್‌, ರಾಜಕುಮಾರ ಕೂಡ ನಟಿಸಿದ್ದಾರೆ. 27 ದಿನಗಳಲ್ಲಿ ಚಿತ್ರೀಕರಣ ಮುಗಿಸಲಾಗಿದೆ. 1 ಗಂಟೆ 4 ನಿಮಿಷ ಚಿತ್ರದ ಅವಧಿ. ಚಿತ್ರ ಕಲಾತ್ಮಕವಾಗಿದ್ದು, ಕಮರ್ಷಿಯಲ್‌ ಸ್ಪರ್ಶ ನೀಡಲಾಗಿದೆ. ಚಿತ್ರೀಕರಣದ ವೇಳೆ ನಡೆದ ಸಂಭಾಷಣೆಯನ್ನೇ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಪ್ರತ್ಯೇಕವಾಗಿ ಡಬ್ಬಿಂಗ್‌ ಮಾಡಿಲ್ಲ. ಚಿತ್ರ ನಿರ್ಮಾಣಕ್ಕೆ ₹1 ಕೋಟಿ ಖರ್ಚು ಬಂದಿದೆ’ ಎಂದು ವಿವರಿಸಿದರು.

‘ಹತ್ತು ವರ್ಷಗಳ ಹಿಂದೆ ಹಂಪಿಗೆ ಛಾಯಾಗ್ರಹಣಕ್ಕಾಗಿ ಬಂದಿದ್ದೆ. ಸ್ಥಳೀಯ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಕಂಡು ಬೆರಗಾದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಮುಕ್ತ ವಾತಾವರಣ ಇರುತ್ತದೆ. ಅವರು ಸ್ವತಂತ್ರರಾಗಿ ಬೆಳೆಯುತ್ತಾರೆ. ಇದು ನಗರ ಪ್ರದೇಶದ ಮಕ್ಕಳಲ್ಲಿ ಕಾಣಸಿಗುವುದಿಲ್ಲ. ಗ್ರಾಮೀಣ ಪ್ರತಿಭೆಯನ್ನು ತೋರಿಸುವ ಕೆಲಸ ಚಿತ್ರದಲ್ಲಿ ಮಾಡಿದ್ದೇನೆ. ಸಿನಿಮಾ ಮಾಡಬೇಕೆಂಬ ಅನೇಕ ವರ್ಷಗಳ ಕನಸು ಈಗ ಈಡೇರಿದೆ’ ಎಂದು ತಿಳಿಸಿದರು.

ಹಿರಿಯ ರಂಗಭೂಮಿ ಕಲಾವಿದ ಪಿ. ಅಬ್ದುಲ್ಲಾ ಮಾತನಾಡಿ, ‘ಡುಬೈಸ್‌ ಪ್ರೊಡಕ್ಷನ್‌ ಅಡಿಯಲ್ಲಿ ತಯಾರಾಗಿರುವ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ವಿಷ್ಣು ನಗರದ ಕೊಳೆಗೇರಿ ನಿವಾಸಿ. ಕಡು ಬಡತನದಲ್ಲಿ ಬೆಳೆದಿರುವ ಆತನಲ್ಲಿ ವಿಶೇಷ ಪ್ರತಿಭೆ ಇದೆ. ನಾನು ನಿರ್ಮಿಸಿದ ಅನೇಕ ನಾಟಕಗಳಲ್ಲಿ ಅಭಿನಯಿಸಿ ಸೈ ಅನಿಸಿಕೊಂಡಿದ್ದಾನೆ’ ಎಂದರು.

‘ಚಿತ್ರದ ನಿರ್ದೇಶಕರು ವಿಷ್ಣು ಪ್ರತಿಭೆ ನೋಡಿ ಅವಕಾಶ ಕೊಟ್ಟಿದ್ದಾರೆ. ಇದಲ್ಲದೇ ಸಣ್ಣ ಪಾತ್ರಗಳಲ್ಲಿ ಸ್ಥಳೀಯ ಅನೇಕ ಮಕ್ಕಳು ಅಭಿನಯಿಸಿದ್ದಾರೆ. ನಿಜಕ್ಕೂ ಮಕ್ಕಳನ್ನು ಆಯಾ ಪಾತ್ರಗಳಿಗೆ ಒಗ್ಗಿಸಿ, ಅವರನ್ನು ಸಿದ್ಧಗೊಳಿಸಿರುವುದು ದೊಡ್ಡ ಸವಾಲಿನ ಕೆಲಸವಾಗಿತ್ತು. ಅದರಲ್ಲಿ ನಿರ್ದೇಶಕರು ಯಶ ಕಂಡಿದ್ದಾರೆ. ಹಂಪಿಯ ಪರಿಸರವನ್ನು ಚಿತ್ರದಲ್ಲಿ ಬಹಳ ಸುಂದರವಾಗಿ ಸೆರೆ ಹಿಡಿಯಲಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರದ ವ್ಯವಸ್ಥಾಪಕ ರಿಚರ್ಡ್‌ ಗೋಮ್ಸ್‌, ಗಾಲಿ ದುರುಗಪ್ಪ, ಮಂಜುಗೌಡ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT