ಗುರುವಾರ , ಸೆಪ್ಟೆಂಬರ್ 19, 2019
24 °C
ತುಂಗಭದ್ರಾ ನದಿಯಲ್ಲಿ ತಗ್ಗಿದ ನೀರಿನ ಪ್ರವಾಹ; ಹಂಪಿ ಸಹಜ ಸ್ಥಿತಿಗೆ

ಪ್ರವಾಹ : ವೃಂದಾವನ ಎದುರಿನ ಮಂಟಪಕ್ಕೆ ಹಾನಿ

Published:
Updated:
Prajavani

ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸುವುದು ಕಡಿಮೆಗೊಳಿಸಿರುವುದರಿಂದ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಆದರೆ, ಇತ್ತೀಚೆಗೆ ಭಾರಿ ಪ್ರಮಾಣದಲ್ಲಿ ನೀರು ಹರಿದಿರುವ ಕಾರಣ ಹಂಪಿಯ ರಘುನಂದನ ತೀರ್ಥರ ಮೂಲ ವೃಂದಾವನ ಎದುರಿನ ಮಂಟಪಕ್ಕೆ ಸ್ವಲ್ಪ ಹಾನಿಯಾಗಿದೆ.

ಹೋದ ವಾರ ನದಿಯಲ್ಲಿ ನೀರು ಉಕ್ಕಿ ಹರಿದಿತ್ತು. ನದಿಗೆ ಹೊಂದಿಕೊಂಡಂತೆ ಮಂಟಪವಿದ್ದು, ನೀರಿನ ರಭಸಕ್ಕೆ ಕೆಲವೆಡೆ ಅದರ ಗೋಡೆ ಬಿದ್ದು ಹೋಗಿದೆ. ಇತ್ತೀಚಿಗೆ ಅಳವಡಿಸಿದ್ದ ತಗಡಿನ ಶೀಟುಗಳು ಮುರಿದು ಬಿದ್ದಿವೆ.

ನದಿ ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿದ್ದ ತಾಲ್ಲೂಕಿನ ಹಂಪಿ ಸ್ಮಾರಕಗಳು ಇದೀಗ ಸಾರ್ವಜನಿಕರು ನೋಡುವಂತಾಗಿದೆ. ವಿಜಯನಗರ ಕಾಲದ ಕಾಲು ಸೇತುವೆ, ಪುರಂದರ ಮಂಟಪ, ಚಕ್ರತೀರ್ಥದ ಕೆಲ ಭಾಗ ಗೋಚರಿಸುತ್ತಿದೆ. ಚಕ್ರತೀರ್ಥದಲ್ಲಂತೂ ಸಾರ್ವಜನಿಕರು ಮುಕ್ತವಾಗಿ ಓಡಾಡುತ್ತಿದ್ದಾರೆ.

ವಾರದ ಹಿಂದೆ ಮೈದುಂಬಿಕೊಂಡು ಹರಿದು, ಎದುರು ಬಸವಣ್ಣ ಮಂಟಪದ ವರೆಗೆ ನೀರು ನುಗ್ಗಿತ್ತು. ವಿಜಯ ವಿಠಲ ದೇವಸ್ಥಾನಕ್ಕೆ ಹೋಗುವ ತಳವಾರಘಟ್ಟ ರಸ್ತೆ ಸಂಪೂರ್ಣ ಜಲಾವೃತಗೊಂಡಿತ್ತು. ಜನ ತೆಪ್ಪಗಳಲ್ಲಿ ಓಡಾಡುವಂತಾಗಿತ್ತು. ಆದರೆ, ಈಗ ಎಲ್ಲವೂ ಮೊದಲಿನ ಸಹಜ ಸ್ಥಿತಿಗೆ ಬಂದಿದೆ. ಪ್ರವಾಸಿಗರು ಯಾವುದೇ ಆತಂಕವಿಲ್ಲದೆ ಓಡಾಡುತ್ತಿದ್ದಾರೆ. ನಿಧಾನವಾಗಿ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.

ವಿರೂಪಾಪುರ ನಡುಗಡ್ಡೆಯಲ್ಲಿ 600ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿಕೊಂಡಿದ್ದರಿಂದ ವಾಯುಸೇನೆಯ ವಿಶೇಷ ಹೆಲಿಕ್ಯಾಪ್ಟರ್‌ನಿಂದ ರಕ್ಷಿಸಲಾಗಿತ್ತು. ಆ ವಿಷಯ ದೊಡ್ಡ ಸುದ್ದಿಯಾಗುತ್ತಿದ್ದಂತೆ ಅನೇಕ ಪ್ರವಾಸಿಗರು ಹಂಪಿ ಪ್ರವಾಸ ಮೊಟಕುಗೊಳಿಸಿದ್ದರು. ಆನ್‌ಲೈನ್‌ನಲ್ಲಿ ಕಾಯ್ದಿರಿಸಿದ ಹೋಟೆಲ್‌ ರೂಂಗಳನ್ನು ರದ್ದುಗೊಳಿಸಿದ್ದರಿಂದ ನಷ್ಟ ಉಂಟಾಗಿತ್ತು. ಈಗ ಮತ್ತೆ ಹೋಟೆಲ್‌ ಉದ್ಯಮ ಚೇತರಿಸಿಕೊಳ್ಳುತ್ತಿದೆ.

Post Comments (+)