ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಂಗ ಮಾರ್ಗದಲ್ಲಿ ನೀರು ಸೋರಿಕೆ

ರಾಷ್ಟ್ರೀಯ ಹೆದ್ದಾರಿ 50ರ ಸುರಂಗ ಮಾರ್ಗ: ವಿಜಯಪುರದಿಂದ–ಚಿತ್ರದುರ್ಗಕ್ಕೆ ಸಂಪರ್ಕ
Last Updated 17 ಅಕ್ಟೋಬರ್ 2020, 6:08 IST
ಅಕ್ಷರ ಗಾತ್ರ

ಹೊಸಪೇಟೆ: ಇತ್ತೀಚೆಗೆ ಸುರಿದ ಸತತ ಮಳೆಯಿಂದಾಗಿ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರ ಸುರಂಗ ಮಾರ್ಗದಲ್ಲಿ ನೀರು ಸೋರಲಾರಂಭಿಸಿದೆ.

ಸುರಂಗ ನಿರ್ಮಾಣಕ್ಕೆ ಬಳಸಿದ ಉಂಗುರ ಆಕಾರದ ಸಿಮೆಂಟ್‌ ರಚನೆಗಳಿಂದ ನೀರು ಸೋರುತ್ತಿದ್ದು, ಹೆದ್ದಾರಿ ಮೇಲೆ ನೀರು ಸಂಗ್ರಹವಾಗುತ್ತಿದೆ. ಮಾರ್ಗದ ಒಂದು ಬದಿಯಲ್ಲಿ ನೀರು ಹರಿಯುತ್ತಿರುವುದರಿಂದ ವಾಹನ ಸವಾರರು ಓಡಾಡಲು ತೊಂದರೆ ಆಗುತ್ತಿದೆ. ಸತತವಾಗಿ ನೀರು ಸೋರುತ್ತಿರುವುದರಿಂದ ಸಿಮೆಂಟ್‌ ರಚನೆ ಬೀಳುವ ಆತಂಕವೂ ಎದುರಾಗಿದೆ.

ಈ ಹೆದ್ದಾರಿಯು ವಿಜಯಪುರದಿಂದ–ಚಿತ್ರದುರ್ಗಕ್ಕೆ ಸಂಪರ್ಕ ಕಲ್ಪಿಸುತ್ತದೆ. ನಗರ ಹೊರವಲಯದ ಗುಂಡಾ ಸಸ್ಯ ಉದ್ಯಾನ ಬಳಿಯಿರುವ ಕಡಿದಾದ ಕಣಿವೆ ಮೂಲಕ ಈ ಮಾರ್ಗ ಹಾದು ಹೋಗುತ್ತದೆ. ಇಲ್ಲಿಂದಲೇ ರೈಲು ಮಾರ್ಗ ಕೂಡ ಹಾದು ಹೋಗಿದೆ. ಈ ಹಿಂದೆ ರೈಲು ಹಾದು ಹೋದಾಗಲೆಲ್ಲ ಸಂಚಾರ ಅಸ್ತವ್ಯಸ್ತವಾಗುತ್ತಿತ್ತು. 2014ರಲ್ಲಿ ಹೆದ್ದಾರಿ ಮೇಲ್ದರ್ಜೆಗೇರಿಸಿದಾಗ ನವದೆಹಲಿಯ ‘ಒರಿಯಂಟಲ್‌ ಸ್ಟೇಚರ್‌ ಎಂಜಿನಿಯರ್ಸ್‌’ (ಒಎಸ್‌ಎ) ಸಂಸ್ಥೆಯು ₹65 ಕೋಟಿಯಲ್ಲಿ ಈ ಸುರಂಗ ನಿರ್ಮಿಸಿತ್ತು.

ಸುರಂಗ ಮಾರ್ಗದಿಂದ ಹೋಗಿ ಬರಲು ಪ್ರತ್ಯೇಕ ಪಥಗಳಿವೆ. ಮೇಲ್ಭಾಗದಿಂದ ರೈಲು ಸಂಚರಿಸುತ್ತದೆ. ಸುರಂಗ ನಿರ್ಮಿಸಿದ ನಂತರ ವಾಹನ ಸಂಚಾರ ಸುಗಮಗೊಂಡಿದೆ. ಆದರೆ, ನಿರ್ವಹಣೆ ಕೊರತೆ ಎದ್ದು ಕಾಣಿಸುತ್ತಿದೆ. ವರ್ಷದ ಹಿಂದೆ ಸುರಂಗದಲ್ಲಿನ ವಿದ್ಯುದ್ದೀಪಗಳು ಕೆಟ್ಟು ಹೋಗಿದ್ದವು. ಈ ಕುರಿತು ‘ಪ್ರಜಾವಾಣಿ’ ವರದಿ ಪ್ರಕಟಿಸಿದಾಗ ವಿದ್ಯುದ್ದೀಪಗಳನ್ನು ಸರಿಪಡಿಸಲಾಗಿತ್ತು. ಪುನಃ ಅವುಗಳು ಹಾಳಾಗಿವೆ.

‘ನಾನು ನಿತ್ಯ ಇದೇ ಮಾರ್ಗವಾಗಿ ಬೈಕ್‌ನಲ್ಲಿ ಗದ್ದೆಗೆ ಹೋಗಿ ಬರುತ್ತೇನೆ. ಸುರಂಗ ಮಾರ್ಗದಲ್ಲಿ ನೀರು ನಿಲ್ಲುತ್ತಿರುವುದರಿಂದ ಸಂಚರಿಸಲು ಭಯವಾಗುತ್ತಿದೆ. ಮೊದಲೇ ಒಳಭಾಗದಲ್ಲಿ ಸಿಮೆಂಟ್‌ ರಸ್ತೆ ಇದೆ. ಜಾರಿ ಬೀಳುವ ಆತಂಕವಿದೆ’ ಎಂದು ವ್ಯಾಸನಕೆರೆಯ ರೈತ ವೀರೇಂದ್ರ ಹೇಳಿದ್ದಾರೆ.

ಒಎಸ್ಎ ಸಂಸ್ಥೆಯ ಗುತ್ತಿಗೆದಾರರ ಮಧುಸೂದನ್ ಅವರನ್ನು ಸಂಪರ್ಕಿಸಿದಾಗ, ‘15 ವರ್ಷ ಸುರಂಗ ಮಾರ್ಗದ ನಿರ್ವಹಣೆಯ ಜವಾಬ್ದಾರಿ ನಮ್ಮ ಮೇಲಿದೆ. ಮೇಲ್ಭಾಗದಿಂದ ರೈಲು ಸಂಚರಿಸುತ್ತಿರುವ ಕಾರಣ ಅದರ ಅಡಿಪಾಯ ಅಲುಗಾಡುತ್ತಿದೆ.

ಭಾರಿ ಮಳೆ ಬಿದ್ದಾಗಲೂ ನೀರು ಸೋರುತ್ತದೆ. ರೈಲ್ವೆ ಇಲಾಖೆಯ ಸಹಭಾಗಿತ್ವದೊಂದಿಗೆ ಅದನ್ನು ಸರಿಪಡಿಸಲಾಗುವುದು’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT