ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ನೀರಿನ ಘಟಕಗಳಿಗೆ ಬೀಗ; ಶುದ್ಧ ನೀರಿಗಾಗಿ ಜನರ ಪರದಾಟ

ನಗರದಲ್ಲಿವೆ 70 ಕುಡಿಯುವ ನೀರಿನ ಘಟಕಗಳು
ಅಕ್ಷರ ಗಾತ್ರ

ಹೊಸಪೇಟೆ: ನಗರಸಭೆಯು ನೀರಿನ ಘಟಕಗಳನ್ನು ಹಠಾತ್‌ ಆಗಿ ಮುಚ್ಚಿಸಿರುವುದರಿಂದ ಶುದ್ಧ ಕುಡಿಯುವ ನೀರಿಗಾಗಿ ಸೋಮವಾರ ನಗರದಲ್ಲಿ ಹಾಹಾಕಾರ ಸೃಷ್ಟಿಯಾಯಿತು.

ನಗರದ ವಿವಿಧ ಬಡಾವಣೆಗಳಲ್ಲಿ ಒಟ್ಟು 70 ಶುದ್ಧ ಕುಡಿಯುವ ನೀರಿನ ಘಟಕಗಳು ಕೆಲಸ ನಿರ್ವಹಿಸುತ್ತಿವೆ. ಬಹುತೇಕ ಕಡೆಗಳಲ್ಲಿ ನಗರಸಭೆಯ ನಲ್ಲಿಗಳಿಗೆ ಬರುವ ನೀರು ಅಶುದ್ಧವಾಗಿರುವುದರಿಂದ ಜನ ಅದನ್ನು ಕುಡಿಯುವುದಿಲ್ಲ. ದೈನಂದಿನ ಕೆಲಸಗಳಿಗಷ್ಟೇ ಉಪಯೋಗಿಸುತ್ತಾರೆ. ಶುದ್ಧ ಕುಡಿಯುವ ನೀರಿನ ಘಟಕಗಳಿಂದ ನೀರು ಕೊಂಡೊಯ್ದು ಕುಡಿಯುತ್ತಾರೆ.

ಶುದ್ಧವಾದ ನೀರು ಸರಬರಾಜು ಮಾಡಬೇಕೆಂದು ಸಾರ್ವಜನಿಕರು, ಸಂಘ ಸಂಸ್ಥೆಗಳು ಅನೇಕ ಸಲ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಕೆಲ ತಿಂಗಳ ಹಿಂದೆ ನಗರಕ್ಕೆ ಭೇಟಿ ನೀಡಿದ ಆರೋಗ್ಯ ಸಚಿವ ಶಿವಾನಂದ ಪಾಟೀಲ ಕೂಡ ನಗರಸಭೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ‘ನಗರಸಭೆ ಸರಬರಾಜು ಮಾಡುವ ನೀರಿನಿಂದ ಸ್ನಾನ ಮಾಡಲು ಆಗುವುದಿಲ್ಲ. ಇನ್ನು ಕುಡಿಯುವ ಮಾತೆಲ್ಲಿ. ಯಾಕೆ ಇಷ್ಟೊಂದು ನಿರ್ಲಕ್ಷ್ಯ. ಶುದ್ಧವಾದ ನೀರು ಪೂರೈಸಬೇಕು’ ಎಂದು ನಗರಸಭೆಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಆದರೆ, ಪರಿಸ್ಥಿತಿ ಬದಲಾಗಿಲ್ಲ.

ಹೀಗಾಗಿಯೇ ಜನ ನೀರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಒಂಬತ್ತು ಗಂಟೆ ಸುಮಾರಿಗೆ ನಗರಸಭೆ ಸಿಬ್ಬಂದಿ ಬಂದು ಏಕಾಏಕಿ ಎಲ್ಲ ಘಟಕಗಳನ್ನು ಮುಚ್ಚಿಸಿದರು. ಅದನ್ನು ಪ್ರಶ್ನಿಸಿದ ಮಾಲೀಕರಿಗೆ, ‘ಜಿಲ್ಲಾಧಿಕಾರಿಗಳ ಸೂಚನೆ ಇದೆ. ಕೂಡಲೇ ಬಂದ್‌ ಮಾಡಬೇಕು. ಯಾರಿಗೂ ನೀರು ಮಾರಾಟ ಮಾಡುವಂತಿಲ್ಲ’ ಎಂದು ಸಿಬ್ಬಂದಿ ಹೇಳಿದರು.

ಅನೇಕ ಘಟಕಗಳ ಎದುರು ನೀರು ಕೊಂಡೊಯ್ಯಲು ಕ್ಯಾನ್‌ಗಳೊಂದಿಗೆ ಬಂದಿದ್ದ ಜನರಿಗೆ ನಿರಾಸೆಯಾಯಿತು. ಮಧ್ಯಾಹ್ನದ ವರೆಗೂ ಜನ ಘಟಕಗಳಿಗೆ ಬಂದು, ವಿಷಯ ತಿಳಿದು ನೀರಿಲ್ಲದೆ ಬರಿಗೈಲಿ ವಾಪಸಾದರು. ಕೆಲವರು ಅನಿವಾರ್ಯವಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಹಣ ತೆತ್ತು ನೀರು ಕೊಂಡೊಯ್ದರು.

ಈ ಕುರಿತು ನಗರಸಭೆಯ ಪರಿಸರ ಅಧಿಕಾರಿ ಆರತಿ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ನಗರದಲ್ಲಿನ ಯಾವ ಘಟಕ ಕೂಡ ಅನುಮತಿ ಪಡೆದುಕೊಂಡಿಲ್ಲ. ಅವುಗಳನ್ನು ಮುಚ್ಚಿಸುವಂತೆ ಜಿಲ್ಲಾಧಿಕಾರಿ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಬಂದ್‌ ಮಾಡಿಸಲಾಗಿದೆ’ ಎಂದು ಹೇಳಿದರು.

‘ಅನುಮತಿಗಾಗಿ ನಗರಸಭೆಗೆ ಅರ್ಜಿ ಸಲ್ಲಿಸಿದರೆ ಕೊಟ್ಟಿಲ್ಲ. ನೀವು ಬಿಸಿನೆಸ್‌ ನಡೆಸುತ್ತಿಲ್ಲ. ಸಮಾಜ ಸೇವೆ ಮಾಡುತ್ತಿದ್ದೀರಿ. ನಿಮಗೆ ಅನುಮತಿ ಪತ್ರ ಕೊಡಲು ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲ ಘಟಕದವರು ಕಾಲಕಾಲಕ್ಕೆ ನೀರಿನ ಪರೀಕ್ಷೆ ಮಾಡಿಸುತ್ತಾರೆ. ಸರ್ಕಾರಕ್ಕಿಂತ ಉತ್ತಮವಾದ ನೀರನ್ನು ಜನರಿಗೆ ಬಹಳ ಕಡಿಮೆ ಬೆಲೆಯಲ್ಲಿ ಕೊಡುತ್ತಿದ್ದೇವೆ. ಏಕಾಏಕಿ ಘಟಕಗಳನ್ನು ಮುಚ್ಚಿಸಿರುವ ಕ್ರಮ ಸರಿಯಲ್ಲ’ ಎಂದು ಸರ್ವಧರ್ಮ ಕ್ರಿಯಾಶೀಲ ಸಮಾಜ ಸೇವಕರುಗಳ ಶುದ್ಧ ಕುಡಿಯುವ ನೀರಿನ ಘಟಕಗಳ ಸಂಘದ ಅಧ್ಯಕ್ಷ ಮನ್ಸೂರ್‌ ಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾಲ್ಕೈದು ವರ್ಷಗಳ ಹಿಂದೆ ಕೆಲವೇ ಶ್ರೀಮಂತರು ಹೆಚ್ಚಿನ ಹಣ ಕೊಟ್ಟು ಕಂಪನಿ ಕ್ಯಾನ್‌ಗಳನ್ನು ತರಿಸಿಕೊಂಡು ನೀರು ಕುಡಿಯುತ್ತಿದ್ದರು. ಶುದ್ಧ ಘಟಕಗಳು ಆರಂಭಗೊಂಡ ನಂತರ ಪ್ರತಿಯೊಬ್ಬರೂ ಒಳ್ಳೆಯ ನೀರು ಕುಡಿಯಲು ಸಾಧ್ಯವಾಗಿದೆ. ಅಷ್ಟೇ ಅಲ್ಲ, ನಗರದಲ್ಲಿ ವಾಂತಿ, ಭೇದಿ ಪ್ರಕರಣಗಳಲ್ಲಿ ಸಾಕಷ್ಟು ಇಳಿಕೆಯಾಗಿದೆ. ಇಷ್ಟೆಲ್ಲ ಉತ್ತಮ ಕೆಲಸ ಮಾಡುತ್ತಿರುವ ಘಟಕಗಳನ್ನು ನಡೆಯಲು ಬಿಡಬೇಕು. ಶೀಘ್ರವೇ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಮಾಡಲಾಗುವುದು’ ಎಂದರು.

‘ಮಾರುಕಟ್ಟೆಯಲ್ಲಿ ಕಂಪನಿಯ 20 ಲೀಟರ್‌ ನೀರಿಗೆ ₹40ರಿಂದ ₹50 ಇದೆ. ಅದೇ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ₹5ಕ್ಕೆ 20 ಲೀಟರ್‌ ನೀರು ಕೊಡುತ್ತಾರೆ. ಯಾವುದೇ ರಸಾಯನಿಕ ಬಳಸದೇ ನೀರು ಶುದ್ಧೀಕರಿಸುತ್ತಾರೆ. ಕಡಿಮೆ ದರದಲ್ಲಿ ಒಳ್ಳೆಯ ನೀರು ಸಿಗುವುದರಿಂದ ಸಹಜವಾಗಿಯೇ ಜನ ಘಟಕಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲಿ ತಪ್ಪೇನಿದೆ? ಘಟಕಗಳನ್ನು ಮುಚ್ಚಿಸಿರುವುದು ಸರಿಯಲ್ಲ’ ಎಂದು ಇಲ್ಲಿನ ಪಟೇಲ್‌ ನಗರದ ನಿವಾಸಿ ಬಸವರಾಜ ಹೇಳಿದರು.

’ತುಂಗಭದ್ರಾ ಜಲಾಶಯ ತುಂಬಿರುವಾಗಲೇ ನಗರಸಭೆ ಶುದ್ಧವಾದ ನೀರು ಬಿಡುವುದಿಲ್ಲ. ಈಗಂತೂ ಅಣೆಕಟ್ಟೆ ಬರಿದಾಗಿದೆ. ಕೊಳಚೆಗಿಂತ ಕಡೆಯದಾಗಿ ನೀರು ಬರುತ್ತಿದೆ. ಅದನ್ನು ಕುಡಿಯಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT