ಹೊಸಪೇಟೆ: ಡ್ಯಾಂ ಇದ್ದರೂ ನೀರಿಗೆ ‘ಬರ’

ಬುಧವಾರ, ಏಪ್ರಿಲ್ 24, 2019
33 °C

ಹೊಸಪೇಟೆ: ಡ್ಯಾಂ ಇದ್ದರೂ ನೀರಿಗೆ ‘ಬರ’

Published:
Updated:
Prajavani

ಹೊಸಪೇಟೆ: ನಗರದಿಂದ ಸ್ವಲ್ಪವೇ ದೂರದಲ್ಲಿ ತುಂಗಭದ್ರಾ ಜಲಾಶಯವಿದ್ದರೂ ಕುಡಿಯುವ ನೀರಿಗೆ ಜನ ಪಡಬಾರದ ಕಷ್ಟ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಡೂರು ರಸ್ತೆಯ ವಿವೇಕಾನಂದ ನಗರ, ಕುರುಬರ ಓಣಿ, ಸಿದ್ದಲಿಂಗಪ್ಪ ಚೌಕಿ, ಅಮರಾವತಿಯ ಕೆಲವು ಕಡೆಗಳಲ್ಲಿ ಸಮರ್ಪಕವಾಗಿ ನಲ್ಲಿಗಳಿಗೆ ನೀರು ಪೂರೈಕೆ ಮಾಡುತ್ತಿಲ್ಲ. ಇದರಿಂದ ಸ್ಥಳೀಯರು ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ.

ಪೈಪ್‌ಲೈನ್‌ ದುರಸ್ತಿ ಕೆಲಸ ನನೆಗುದಿಗೆ ಬಿದ್ದಿರುವ ಕಾರಣ ವಿವೇಕಾನಂದ ನಗರದಲ್ಲಿ 20 ದಿನಗಳಿಂದ ನೀರು ಸರಬರಾಜು ಆಗಿಲ್ಲ. ಟ್ಯಾಂಕರ್‌ ಮೂಲಕ ನಗರಸಭೆ ನೀರು ಪೂರೈಸುತ್ತಿದೆ. ಆದರೆ, ಬಡಾವಣೆಯ ನಿವಾಸಿಗಳ ನಡುವೆ ಅದರಿಂದ ಸಮರ್ಪಕವಾಗಿ ಹಂಚಿಕೆ ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲ, ಟ್ಯಾಂಕರ್‌ ಬಡಾವಣೆಗೆ ಬರುವ ನಿಗದಿತ ಸಮಯವಿಲ್ಲ. ದೈನಂದಿನ ಕೆಲಸಕ್ಕೆ ಜನ ಹೋದಾಗ ಟ್ಯಾಂಕರ್‌ ಬಂದರೆ ಅಲ್ಲಿ ಇದ್ದವರಷ್ಟೇ ಅದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಇನ್ನು ಕುರುಬರ ಓಣಿ, ಚಪ್ಪರದಹಳ್ಳಿ, ಸಿದ್ದಲಿಂಗಪ್ಪ ಚೌಕಿ ಬಡಾವಣೆಯ ಕೊನೆಯ ಮನೆಗಳಿಗೆ ನೀರು ಸಮರ್ಪಕವಾಗಿ ಬರುವುದಿಲ್ಲ. ಬೇರೆಡೆ ಗಂಟೆಗೂ ಹೆಚ್ಚು ಕಾಲ ನೀರು ಸರಬರಾಜು ಮಾಡಲಾಗುತ್ತದೆ. ಆದರೆ, ಕೊನೆಯ ಭಾಗದ ಮನೆಗಳಿಗೆ ಹತ್ತರಿಂದ ಹದಿನೈದು ನಿಮಿಷ ನೀರು ಬರುತ್ತಿದೆ. ಹೀಗಾಗಿ ಈ ಬಡಾವಣೆಗಳಲ್ಲೂ ನೀರಿಗಾಗಿ ಸ್ಥಳೀಯರು ಬೇರೆ ಕಡೆ ಅಲೆದಾಟ ನಡೆಸುತ್ತಿದ್ದಾರೆ.

ಒಂದೆಡೆ ಪದೇ ಪದೇ ವಿದ್ಯುತ್‌ ಕಡಿತದಿಂದ ಸಮಸ್ಯೆ ಎದುರಿಸುತ್ತಿರುವ ಜನರಿಗೆ, ಸಮರ್ಪಕವಾಗಿ ಕುಡಿಯುವ ನೀರು ಪೂರೈಸದ ಕಾರಣ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ನೀರಿನ ಸಮಸ್ಯೆ ಕುರಿತು ಸ್ಥಳೀಯರು ಅಧಿಕಾರಿಗಳಿಗೆ ಕರೆ ಮಾಡಿದರೆ ಚುನಾವಣಾ ಕರ್ತವ್ಯದ ನೆಪ ಹೇಳಿ ಕರೆ ಕಡಿತಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.

‘ನಮ್ಮ ಊರಿನಲ್ಲೇ ಜಲಾಶಯ ಇದೆ. ಹೀಗಿದ್ದರೂ ನೀರಿಗಾಗಿ ಒದ್ದಾಡುವ ಪರಿಸ್ಥಿತಿ ಇದೆ. ಬಡಾವಣೆಯಲ್ಲಿ ಕೊನೆಯ ಮನೆಗಳಿಗೆ ಸರಿಯಾಗಿ ನೀರೇ ಬರುವುದಿಲ್ಲ. ಈ ಕುರಿತು ನಗರಸಭೆ ಸದಸ್ಯರಿಗೆ ತಿಳಿಸಿದರೆ, ‘ನೀವು ನನಗೆ ಮತ ಕೊಟ್ಟಿಲ್ಲ. ಹೀಗಾಗಿ ನನಗೇನೂ ಕೇಳಬೇಡಿ’ ಎಂದು ಉಡಾಫೆಯಾಗಿ ಮಾತನಾಡುತ್ತಾರೆ’ ಎಂದು ಸಿದ್ದಲಿಂಗಪ್ಪ ಚೌಕಿಯ ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಬಡಾವಣೆಯಲ್ಲಿ ಪೈಪ್‌ಲೈನ್‌ ದುರಸ್ತಿ ಕೆಲಸದ ಹೆಸರಿನಲ್ಲಿ 18–20 ದಿನಗಳಿಂದ ನೀರು ಬಿಟ್ಟಿಲ್ಲ. ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದ್ದಾರೆ. ಆದರೆ, ಅದು ಯಾವಾಗ ಬಂದು ಹೋಗುತ್ತದೆ ಗೊತ್ತಾಗುವುದಿಲ್ಲ. ದೈನಂದಿನ ಕಚೇರಿ ಕೆಲಸ ಬಿಟ್ಟು ಅದರ ಹಿಂದೆ ಅಲೆದಾಡಲು ಆಗುವುದಿಲ್ಲ. ಹೀಗಾಗಿ ಹಣ ಕೊಟ್ಟು ಖಾಸಗಿಯವರಿಂದ ನೀರು ತರಿಸಿಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ’ ಎಂದು ವಿವೇಕಾನಂದ ನಗರದ ನಿವಾಸಿ ಗೋಪಿ ಹೇಳಿದರು.

‘ತೋರಣಗಲ್‌ನ ಜಿಂದಾಲ್‌ ಕಾರ್ಖಾನೆಯವರು ವಿಜಯಪುರ ಜಿಲ್ಲೆಯ ಆಲಮಟ್ಟಿಯಿಂದ ಪೈಪ್‌ಲೈನ್‌ ಮಾಡಿಕೊಂಡು ನೀರು ತರುತ್ತಿದ್ದಾರೆ. ನಮ್ಮ ಸರ್ಕಾರಕ್ಕೆ ನಗರ ಹೊರವಲಯದ ತುಂಗಭದ್ರಾ ಜಲಾಶಯದಿಂದ ಸರಿಯಾಗಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಇದು ನಮ್ಮನ್ನಾಳುವವರು ಜನರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಎಷ್ಟು ಗಂಭೀರವಾಗಿದ್ದಾರೆ ಎನ್ನುವುದು ತೋರಿಸುತ್ತದೆ’ ಎಂದು ರಮೇಶ ಪ್ರತಿಕ್ರಿಯಿಸಿದರು.

ಈ ಕುರಿತು ನಗರಸಭೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !