ಭಾನುವಾರ, ಆಗಸ್ಟ್ 25, 2019
27 °C

ಎಚ್‌ಎಲ್‌ಸಿಗೆ ಹರಿದ ನೀರು

Published:
Updated:
Prajavani

ಹೊಸಪೇಟೆ: ಎರಡು ದಿನಗಳ ವಿಳಂಬದ ನಂತರ ಶುಕ್ರವಾರ ಇಲ್ಲಿನ ತುಂಗಭದ್ರಾ ಜಲಾಶಯದ ಬಲದಂಡೆ ಮೇಲ್ಮಟ್ಟದ ಕಾಲುವೆಗೆ (ಎಚ್‌.ಎಲ್‌.ಸಿ.) ನೀರು ಹರಿಸಲಾಯಿತು.

ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಕಾರ್ಯದರ್ಶಿ ಜಿ. ನಾಗಮೋಹನ್‌ ಅವರು ಪೂಜೆ ಸಲ್ಲಿಸಿ, ಗುಂಡಿ ಒತ್ತುವ ಮೂಲಕ ಕಾಲುವೆಗೆ ನೀರು ಹರಿಸಿದರು. ಆಂಧ್ರ ಪ್ರದೇಶ ಹಾಗೂ ರಾಜ್ಯಕ್ಕೆ ತಲಾ ಸಾವಿರ ಕ್ಯುಸೆಕ್‌ ನೀರು ಬಿಡಲಾಗುತ್ತಿದೆ.

ಆರಂಭದಲ್ಲಿ 200 ಕ್ಯುಸೆಕ್‌ ನೀರು ಹರಿಸಲಾಯಿತು. ದಿನಕಳೆದಂತೆ ನೀರಿನ ಪ್ರಮಾಣ ಹೆಚ್ಚಾಯಿತು. ಕೃಷಿ ಉದ್ದೇಶಕ್ಕಾಗಿ ನಿತ್ಯ ಎರಡು ಸಾವಿರ ಕ್ಯುಸೆಕ್‌ ನೀರು ಹರಿಸಲು ತೀರ್ಮಾನಿಸಲಾಗಿದೆ. ಆ. 7ರಂದೇ ನೀರು ಹರಿಸುವಂತೆ ಸರ್ಕಾರ ನಿರ್ದೇಶನ ನೀಡಿತ್ತು. ಆದರೆ, ಕೆಲವೆಡೆ ದುರಸ್ತಿ ಕೆಲಸ ಬಾಕಿ ಉಳಿದಿದ್ದರಿಂದ ಎರಡು ದಿನ ವಿಳಂಬವಾಗಿ ನೀರು ಬಿಡಲಾಗಿದೆ. ಬಳ್ಳಾರಿ ಹಾಗೂ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಗೆ ನೀರು ಹರಿದು ಹೋಗಲಿದೆ.

ಈಗಾಗಲೇ ಕಳೆದ ಎರಡು ದಿನಗಳಿಂದ ಬಲದಂಡೆ ಕೆಳಮಟ್ಟದ ಕಾಲುವೆಗೆ (ಎಲ್‌.ಎಲ್.ಸಿ.), ಎಡದಂಡೆ ಮುಖ್ಯ ಕಾಲುವೆ (ಎಲ್.ಬಿ.ಸಿ.), ವಿಜಯನಗರ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ.

ಒಟ್ಟು 133 ಟಿ.ಎಂ.ಸಿ. ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 33 ಟಿ.ಎಂ.ಸಿ. ಅಡಿ ಹೂಳು ಸಂಗ್ರಹವಾಗಿದ್ದು, 100 ಟಿ.ಎಂ.ಸಿ. ವರೆಗೆ ನೀರು ಶೇಖರಿಸಬಹುದು. ಸದ್ಯ 60.79 ಟಿ.ಎಂ.ಸಿ. ಅಡಿ ನೀರು ಸಂಗ್ರಹವಾಗಿದ್ದು, 1.42 ಲಕ್ಷ ಕ್ಯುಸೆಕ್‌ ನೀರು ಅಣೆಕಟ್ಟೆಗೆ ಹರಿದು ಬರುತ್ತಿದೆ. ಗುರುವಾರ 48 ಟಿ.ಎಂ.ಸಿ. ಅಡಿ ನೀರಿತ್ತು. ಒಳಹರಿವು ಹೆಚ್ಚಾಗಿದ್ದರಿಂದ ಒಂದೇ ದಿನದಲ್ಲಿ 12 ಟಿ.ಎಂ.ಸಿ. ಅಡಿಗೂ ಅಧಿಕ ನೀರು ಬಂದಿದೆ. ಒಳಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ನದಿಗೆ ನೀರು ಹರಿಸಲು ತುಂಗಭದ್ರಾ ಮಂಡಳಿ ಚಿಂತನೆ ನಡೆಸಿದೆ.

Post Comments (+)