ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಕೆರೆ, ಕಟ್ಟೆ ತುಂಬಿಸುವಂತೆ ರೈತ ಸಂಘ ಹಕ್ಕೊತ್ತಾಯ

18ರಂದು ರೈತರಿಂದ ಪ್ರತಿಭಟನಾ ರ್‍ಯಾಲಿ
Last Updated 12 ಮಾರ್ಚ್ 2020, 9:24 IST
ಅಕ್ಷರ ಗಾತ್ರ

ಹೊಸಪೇಟೆ: ‘ಜಿಲ್ಲೆಯ ಎಲ್ಲಾ ಕೆರೆ ಕಟ್ಟೆಗಳನ್ನು ತುಂಬಿಸುವುದು, ಕಮಲಾಪುರ ಕೆರೆ ಒತ್ತುವರಿ ತೆರವುಗೊಳಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾ. 18ರಂದು ನಗರದಲ್ಲಿ ರೈತರಿಂದ ಬೃಹತ್‌ ಪ್ರತಿಭಟನಾ ರ್‍ಯಾಲಿ ನಡೆಸಲು ನಿರ್ಧರಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ನಂಜುಂಡಸ್ವಾಮಿ ಬಣ) ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌ ತಿಳಿಸಿದರು.

‘ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಲವು ಸಲ ಸಂಬಂಧಿಸಿದವರಿಗೆ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಈ ಸಲ ಚಳವಳಿ ಮೊರೆ ಹೋಗಲಾಗಿದೆ. ಅಂದು ಬೆಳಿಗ್ಗೆ ನಗರದ ವಡಕರಾಯ ದೇವಸ್ಥಾನದಲ್ಲಿ ತಹಶೀಲ್ದಾರ್‌ ಕಚೇರಿ ವರೆಗೆ ನಡೆಯುವ ರ್‍ಯಾಲಿಯಲ್ಲಿ ನೂರಾರು ರೈತರು ಪಾಲ್ಗೊಳ್ಳುವರು. ಅರಣ್ಯ ಸಚಿವ ಆನಂದ್‌ ಸಿಂಗ್‌ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು, ಮನವಿ ಸಲ್ಲಿಸಲಾಗುವುದು. ಖಚಿತ ಭರವಸೆ ಸಿಗುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ’ ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

‘ಬಳ್ಳಾರಿ ಜಿಲ್ಲೆಯ ನಾಲ್ಕೂ ಸಕ್ಕರೆ ಕಾರ್ಖಾನೆಗಳು ಮುಚ್ಚಿವೆ. ಕಂಪ್ಲಿಯಲ್ಲಿ ಸರ್ಕಾರಕ್ಕೆ ಸೇರಿದ ಜಾಗವಿದೆ. ಅಲ್ಲಿ ಸರ್ಕಾರ ಹೊಸ ಸಕ್ಕರೆ ಕಾರ್ಖಾನೆ ಆರಂಭಿಸಲು ಕ್ರಮ ಕೈಗೊಳ್ಳಬೇಕು. ತುಂಗಭದ್ರಾ ಜಲಾಶಯದಿಂದ ಪ್ರತಿವರ್ಷ ಅಪಾರ ನೀರು ನದಿಗೆ ಹರಿಸಲಾಗುತ್ತದೆ. ಆ ನೀರು ಕೆರೆ, ಕಟ್ಟೆಗಳಿಗೆ ಹರಿಸಬೇಕು. ವಿಜಯನಗರ ಕಾಲದ ಕಮಲಾಪುರ ಕೆರೆ ಒತ್ತುವರಿಯಾಗಿದೆ. ಕೂಡಲೇ ಅದನ್ನು ತೆರವುಗೊಳಿಸಿ, ಸಂರಕ್ಷಿಸಬೇಕು’ ಎಂದು ಆಗ್ರಹಿಸಿದರು.

‘ತುಂಗಭದ್ರಾ ನೀರಾವರಿ ನಿಗಮವು ವಿಜಯನಗರ ಕಾಲುವೆಗಳ ನವೀಕರಣ ಕೆಲಸ ಕೈಗೆತ್ತಿಕೊಂಡಿದೆ. ಆದರೆ, ಕಾಲುವೆ ಅಕ್ಕಪಕ್ಕದ ಮನೆ, ಮಳಿಗೆಗಳಿಂದ ಹರಿದು ಬರುವ ಹೊಲಸು ನೀರು ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ. ನೂರಾರು ಕೋಟಿ ಖರ್ಚು ಮಾಡಿ ಕಾಲುವೆಗಳನ್ನು ಸರಿಪಡಿಸುವಾಗ ಚರಂಡಿ ನೀರು ಹರಿದು ಬರದಂತೆ ತಡೆಯಲು ಯೋಜನೆ ರೂಪಿಸಬೇಕಿತ್ತು. ಇನ್ನಷ್ಟೇ ಕಾಮಗಾರಿ ಆರಂಭವಾಗಿದೆ. ಈಗಲಾದರೂ ಅದರ ಬಗ್ಗೆ ಯೋಜನೆ ರೂಪಿಸಿ, ಚರಂಡಿ ನೀರು ಕಾಲುವೆಗೆ ಸೇರದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಕಮಲಾಪುರದಿಂದ ಹಂಪಿಗೆ ನೇರವಾಗಿ ಹೋಗಲು ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ ರಸ್ತೆ ನಿರ್ಮಿಸಲು ಯೋಜನೆ ರೂಪಿಸುತ್ತಿರುವುದು ಸ್ವಾಗತಾರ್ಹ. ಅಕ್ಕತಂಗಿಯರ ಗುಡ್ಡದಿಂದ ವೀರಭದ್ರ ದೇವಸ್ಥಾನದ ಬಲಬದಿ ರಸ್ತೆ ನಿರ್ಮಿಸಬೇಕು. ಕಡ್ಡಿರಾಂಪುರದ ಬೆಲ್ಲದ ಗಾಣದಿಂದ ವೀರಭದ್ರ ದೇವಸ್ಥಾನದ ವರೆಗೆ ರಸ್ತೆ ಮಾಡಿದರೆ ಸಾರ್ವಜನಿಕರು, ಪ್ರವಾಸಿಗರಿಗೆ ಬಹಳ ಅನುಕೂಲವಾಗುತ್ತದೆ. ರೈತರು ಗದ್ದೆಗಳಿಂದ ಅವರ ಉತ್ಪನ್ನಗಳನ್ನು ಸುಗಮವಾಗಿ ಸಾಗಿಸಲು ನೆರವಾಗುತ್ತದೆ’ ಎಂದರು.

‘ತಾಲ್ಲೂಕಿನ ನಲ್ಲಾಪುರದ ಕೆರೆಕೆರೆ ಮೂಲೆ ಕೆರೆ ತುಂಬಿದ ಮೂರ್ನಾಲ್ಕು ದಿನಗಳಲ್ಲಿಯೇ ಖಾಲಿಯಾಗುತ್ತಿದೆ. ನೀರು ಎಲ್ಲಿ ಬಸಿದು ಹೋಗುತ್ತಿದೆ ಎನ್ನುವುದರ ಬಗ್ಗೆ ತಜ್ಞರಿಂದ ಅಧ್ಯಯನ ನಡೆಸಿ, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಹೀಗೆ ಮಾಡುವುದರಿಂದ ಸುತ್ತಮುತ್ತಲಿನ ನಾಲ್ಕೈದು ಹಳ್ಳಿಗಳಲ್ಲಿ ಕುಡಿಯುವ ನೀರು, ಕೃಷಿಗೆ ಬಹಳ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣರೆಡ್ಡಿ, ತಾಲ್ಲೂಕು ಘಟಕದ ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ನಗರ ಘಟಕದ ಅಧ್ಯಕ್ಷ ನಾಗರಾಜ, ಮುಖಂಡ ಚಿನ್ನದೊರೈ ಇದ್ದರು.

‘ಜನಪ್ರತಿನಿಧಿಗಳಿಗಿಲ್ಲ ಕಾಳಜಿ’

‘ತುಂಗಭದ್ರಾ ಜಲಾಶಯದಿಂದ ತುಮಕೂರಿನ ಪಾವಗಡಕ್ಕೆ ಪೈಪ್‌ಲೈನ್‌ ಮೂಲಕ ನೀರು ಪೂರೈಸಲು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಆದರೆ, ಬಳ್ಳಾರಿ, ಕೊಪ್ಪಳ, ರಾಯಚೂರು ಭಾಗದ ಜನಪ್ರತಿನಿಧಿಗಳು ಮೌನ ವಹಿಸಿರುವುದು ಶೋಭೆ ತರುವಂತಹದ್ದಲ್ಲ. ಮೂರು ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರೆ ಬಗ್ಗೆ ಅವರಿಗೆ ಎಳ್ಳಷ್ಟೂ ಕಾಳಜಿ ಇಲ್ಲ ಎನ್ನುವುದು ಇದರಿಂದ ಗೊತ್ತಾಗುತ್ತದೆ’ ಎಂದು ಜೆ. ಕಾರ್ತಿಕ್‌ ಹೇಳಿದರು.

‘ಪಾವಗಡದ ಹತ್ತಿರದಲ್ಲೇ ಹೇಮಾವತಿ ಜಲಾಶಯವಿದೆ. ಅಲ್ಲಿಂದ ನೀರು ಕೊಡಬಹುದಿತ್ತು. ಆದರೆ, 230 ಕಿ.ಮೀ. ದೂರದಲ್ಲಿರುವ ತುಂಗಭದ್ರಾ ಜಲಾಶಯದಿಂದಲೇ ನೀರು ಕೊಡುವ ಅಗತ್ಯವೇನಾದರೂ ಏನಿದೆ. ಈಗಾಗಲೇ ಅಣೆಕಟ್ಟೆಯ ನೀರಿನ ಸಂಗ್ರಹ ಸಾಮರ್ಥ್ಯ ಕುಸಿದಿದೆ. ಹೀಗಿರುವಾಗ ಎಲ್ಲರಿಗೂ ನೀರು ಕೊಡುತ್ತ ಹೋದರೆ ಸ್ಥಳೀಯರಿಗೆ ತೊಂದರೆಯಾಗುವುದಿಲ್ಲವೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT