ಹೊಸಪೇಟೆ: ಸುಡುವ ಬಿಸಿಲಿಗೆ ಬೆದರಿದ ಜನ, ಮಧ್ಯಾಹ್ನಕ್ಕೆ ರಸ್ತೆಗಳು ಖಾಲಿ.. ಖಾಲಿ..

7
ತಾಪಮಾನದಲ್ಲಿ ಏಕಾಏಕಿ ಭಾರಿ ಏರಿಕೆ

ಹೊಸಪೇಟೆ: ಸುಡುವ ಬಿಸಿಲಿಗೆ ಬೆದರಿದ ಜನ, ಮಧ್ಯಾಹ್ನಕ್ಕೆ ರಸ್ತೆಗಳು ಖಾಲಿ.. ಖಾಲಿ..

Published:
Updated:
Deccan Herald

ಹೊಸಪೇಟೆ: ಮಳೆಗಾಲ ಮುಗಿಯುತ್ತಿದ್ದಂತೆ ಜಿಲ್ಲೆಯಲ್ಲಿ ತಾಪಮಾನದಲ್ಲಿ ಭಾರಿ ಏರಿಕೆ ಉಂಟಾಗಿದ್ದು, ಸುಡುವ ಬಿಸಿಲಿಗೆ ಜನ ಕಂಗಾಲಾಗಿದ್ದಾರೆ.

ಬೆಳಿಗ್ಗೆ ಏಳು ಗಂಟೆಯಿಂದಲೇ ಮೈ ಸುಡುವಷ್ಟು ಬಿಸಿಲು ಬೀಳುತ್ತಿದೆ. 10–11 ಗಂಟೆ ಮೀರುತ್ತಿದ್ದಂತೆ ಸೂರ್ಯ ಕೆಂಡ ಕಾರುತ್ತಿದ್ದಾನೆ. ಮಧ್ಯಾಹ್ನವಾಗುತ್ತಿದ್ದಂತೆ ಜನರ ಓಡಾಟ ಕಡಿಮೆಯಾಗುತ್ತಿದೆ. ಜನ ಸಂಚಾರವಿಲ್ಲದ ಕಾರಣ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿವೆ. ಏಕಾಏಕಿ ಬಿಸಿಲು ಹೆಚ್ಚಾಗಿರುವುದರಿಂದ ಜನ ವಿಚಲಿತರಾಗಿದ್ದಾರೆ. ಅದಕ್ಕೆ ಬೆದರಿ ಮನೆಗಳಿಂದ ಹೊರಬರಲು ಹಿಂಜರಿಯುತ್ತಿದ್ದಾರೆ.

ಮಾರುಕಟ್ಟೆಯಲ್ಲಿಯೂ ಜನ ಕಾಣಿಸಿಕೊಳ್ಳುತ್ತಿಲ್ಲ. ಇದರಿಂದ ವ್ಯಾಪಾರಕ್ಕೆ ಹಿನ್ನಡೆಯಾಗಿದೆ. ಹೋಟೆಲ್‌ಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆಯ ಬಳಿಕವಷ್ಟೇ ಜನ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಹಣ್ಣಿನ ರಸ, ಐಸ್‌ಕ್ರೀಂ ಪಾರ್ಲರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಸಂಜೆಯಾಗುತ್ತಿದ್ದಂತೆ ಜನ ಕುಟುಂಬ ಸಮೇತ ಹೋಗಿ, ಐಸ್‌ಕ್ರೀಂ ಸವಿಯುತ್ತಿದ್ದಾರೆ. ಮಳೆಗಾಲದಲ್ಲಿ ವ್ಯಾಪಾರವಿಲ್ಲದೆ ಕಂಗಾಲಾಗಿದ್ದ ಹಣ್ಣಿನ ರಸ, ಐಸ್‌ಕ್ರೀಂ ಪಾರ್ಲರ್‌ ಮಳಿಗೆ ಮಾಲೀಕರ ಮುಖದಲ್ಲಿ ಸಂತಸ ಮೂಡಿದೆ. ಅದೇ ರೀತಿ ಎಳ ನೀರು ವ್ಯಾಪಾರವೂ ಜೋರಾಗಿ ನಡೆಯುತ್ತಿದೆ.

‘ಇಷ್ಟು ದಿನ ಎಳ ನೀರು ಕೇಳುವವರೇ ಇರಲಿಲ್ಲ. ಈಗ ವ್ಯಾಪಾರ ಉತ್ತಮವಾಗಿ ನಡೆಯುತ್ತಿದೆ. ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಮೂರೂ ವೇಳೆಯಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಎಳ ನೀರು ಕುಡಿದು ಹೋಗುತ್ತಿದ್ದಾರೆ’ ಎಂದು ಹೊಸೂರಿನ ಬಸು ತಿಳಿಸಿದರು. ಬಸು ಅವರು ಹೊರವರ್ತುಲ ರಸ್ತೆಯಲ್ಲಿ ಎಳ ನೀರು ಮಾರಾಟ ಮಾಡುತ್ತಾರೆ.

ಮಳೆ ಕೊರತೆ:

ಈ ವರ್ಷ ಜಿಲ್ಲೆಯಲ್ಲಿ ಸಮರ್ಪಕ ಮಳೆ ಆಗದಿರುವುದು ಕೂಡ ತಾಪಮಾನ ಹೆಚ್ಚಾಗಲು ಕಾರಣ ಎನ್ನುತ್ತಾರೆ ಸ್ಥಳೀಯರು. ‘ಸತತ ಮೂರು ವರ್ಷಗಳ ಬರದಿಂದ ಜನ ಜರ್ಜರಿತರಾಗಿದ್ದಾರೆ. ಈ ಸಲ ಅದು ನೀಗಬಹುದು ಎಂದು ಜನ ಅಂದುಕೊಂಡಿದ್ದರು. ಆದರೆ, ಈ ವರ್ಷವೂ ಮರುಕಳಿಸಿದೆ. ಜಿಲ್ಲೆಯ ಬಹುತೇಕ ತಾಲ್ಲೂಕುಗಳನ್ನು ಈಗಾಗಲೇ ಬರಪೀಡಿತ ಎಂದು ಘೋಷಿಸಲಾಗಿದೆ. ಸರಿಯಾದ ರೀತಿಯಲ್ಲಿ ಮಳೆಯಾಗದ ಕಾರಣ ಸಹಜವಾಗಿಯೇ ಬಿಸಿಲು ಹೆಚ್ಚಾಗಿದೆ’ ಎನ್ನುತ್ತಾರೆ ಚಿತ್ತವಾಡ್ಗಿಯ ಹಿರಿಯ ನಾಗರಿಕ ಅಮರೇಶ.

‘ಮಳೆ ಬಂದರೆ ಸುತ್ತಮುತ್ತಲಿನ ಕೆರೆ–ಕಟ್ಟೆಗಳು ತುಂಬಿ ಭೂಮಿ ತಂಪಾಗುತ್ತದೆ. ಆದರೆ, ಈ ವರ್ಷ ಮಳೆಯಾಗಿಲ್ಲ. ಮಳೆಗಾಲದಲ್ಲೇ ಬಹುತೇಕ ಕೆರೆಗಳು ಬತ್ತು ಹೋಗಿವೆ. ಮಲೆನಾಡಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯ ಭರ್ತಿಯಾಗಿದೆ. ಇದರಿಂದ ಕಾಲುವೆ ಭಾಗದ ರೈತರು ಕೃಷಿ ಚಟುವಟಿಕೆ ಮಾಡಲು ಅನುಕೂಲವಾಗಿದೆ. ಕುಡಿಯುವ ನೀರಿನ ಸಮಸ್ಯೆ ನೀಗಿದೆ. ಇಲ್ಲದಿದ್ದರೆ ಹಾಹಾಕಾರ ಸೃಷ್ಟಿಯಾಗುತ್ತಿತ್ತು’ ಎಂದು ಹೇಳಿದರು.

‘ಈ ಸಲ ಬಿಸಿಲು ಎಷ್ಟು ಹೆಚ್ಚಾಗಿದೆ ಎಂದರೆ ಮನೆಯಲ್ಲಿ ಫ್ಯಾನು ಹಾಕಿಕೊಳ್ಳದೇ ಕೂರಲು ಆಗುತ್ತಿಲ್ಲ. ಹಗಲು–ರಾತ್ರಿ ಫ್ಯಾನಿನ ಗಾಳಿಯಲ್ಲಿ ಇರುವಂತಾಗಿದೆ. ಇಷ್ಟು ದಿನ ಬೆಳಿಗ್ಗೆ ಎಂಟರ ವರೆಗೆ ವಾಯುವಿಹಾರಕ್ಕೆ ಹೋಗಿ ಬರುತ್ತಿದ್ದೆ. ಈಗ ಏಳು ಗಂಟೆಗೆ ಹಿಂತಿರುಗುತ್ತಿದ್ದೇನೆ. ನನ್ನ ಬಹುತೇಕ ಮಿತ್ರರು ಹೀಗೆಯೇ ಮಾಡುತ್ತಿದ್ದಾರೆ’ ಎನ್ನುತ್ತಾರೆ ಚಪ್ಪರದಹಳ್ಳಿಯ ಕೃಷ್ಣಪ್ಪ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !