ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರ ಹಿತಕ್ಕಾಗಿ ಆನಂದ್‌ ಸಿಂಗ್‌ ರಾಜೀನಾಮೆ: ಜಕ್ಕಪ್ಪನವರ ಪ್ರಶ್ನೆ

ಕೆಪಿಸಿಸಿ ಎಸ್ಸಿ ವಿಭಾಗದ ಅಧ್ಯಕ್ಷ ಜಕ್ಕಪ್ಪನವರ ಪ್ರಶ್ನೆ
Last Updated 20 ನವೆಂಬರ್ 2019, 16:00 IST
ಅಕ್ಷರ ಗಾತ್ರ

ಹೊಸಪೇಟೆ: ‘ಆನಂದ್‌ ಸಿಂಗ್‌ ಅವರು ಯಾರ ಹಿತಕ್ಕಾಗಿ ರಾಜೀನಾಮೆ ನೀಡಿದ್ದಾರೆ. ಚುನಾವಣೆಯಲ್ಲಿ ಗೆದ್ದು ಒಂದೂವರೆ ವರ್ಷದಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಲು ಏನು ಕಾರಣ ಎಂಬುದನ್ನು ಜನರಿಗೆ ತಿಳಿಸಬೇಕು’ ಎಂದು ಕೆ.ಪಿ.ಸಿ.ಸಿ. ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಎಫ್‌.ಎಚ್‌. ಜಕ್ಕಪ್ಪನವರ ಪ್ರಶ್ನಿಸಿದರು.

ಬುಧವಾರ ಸಂಜೆ ಇಲ್ಲಿನ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಎಸ್ಸಿ ಘಟಕದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಆನಂದ್‌ ಸಿಂಗ್‌ ಅವರು ವೈಯಕ್ತಿಕ ಸ್ವಾರ್ಥ, ಹಿತಕ್ಕಾಗಿ ರಾಜೀನಾಮೆ ಕೊಟ್ಟಿದ್ದಾರೆ. ಅದರಲ್ಲಿ ಜನರ ಹಿತ ಅಡಗಿಲ್ಲ’ ಎಂದು ಟೀಕಿಸಿದರು.

‘ಹಣ ಬಲದಿಂದ ಏನು ಬೇಕಾದರೂ ಮಾಡಬಹುದು ಎಂದು ಸಿಂಗ್‌ ತಿಳಿದುಕೊಂಡಿದ್ದಾರೆ. ಇದು ಅವರ ಅಹಂಕಾರ ಎತ್ತಿ ತೋರಿಸುತ್ತದೆ. ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿದ ಶಾಸಕರ ಅನರ್ಹತೆಯನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದೆ. ಸಿಂಗ್‌ ಸೇರಿದಂತೆ ಇತರೆ 14 ಜನರು ಯಾವ ಮುಖವಿಟ್ಟು ಜನರ ಬಳಿ ಮತ ಕೇಳುತ್ತಾರೆ’ ಎಂದರು.

‘ಬಿಜೆಪಿ ಮುಖಂಡರು ಪದೇ ಪದೇ ಬಳ್ಳಾರಿ ಜಿಲ್ಲೆಯಲ್ಲಿ ಉಪಚುನಾವಣೆಗಳನ್ನು ಜನರ ಮೇಲೆ ಹೇರುತ್ತಿದ್ದಾರೆ. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಶ್ರೀರಾಮುಲು, ಆನಂದ್‌ ಸಿಂಗ್ ಅದನ್ನೇ ಚಾಳಿ ಮಾಡಿಕೊಂಡಿದ್ದಾರೆ. ಜನ ಐದು ವರ್ಷಕ್ಕಾಗಿ ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ, ಅದನ್ನು ಧಿಕ್ಕರಿಸಿ ರಾಜೀನಾಮೆ ನೀಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಚಾರ’ ಎಂದು ಹೇಳಿದರು.

‘ಶ್ರೀರಾಮುಲು ಅವರನ್ನು ಬಳ್ಳಾರಿ ಜಿಲ್ಲೆಯ ಜನ ಸಾಕಷ್ಟು ಸಲ ಚುನಾವಣೆಯಲ್ಲಿ ಗೆಲ್ಲಿಸಿ ಅವರನ್ನು ಬೆಳೆಸಿದ್ದಾರೆ. ಆದರೆ, ಅವರು ಯಾವುದೇ ಕಾರಣವಿಲ್ಲದೇ ಚಿತ್ರದುರ್ಗಕ್ಕೆ ವಲಸೆ ಹೋಗಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಎಸ್ಟಿ ಸಮುದಾಯದ ಮೀಸಲು ಪ್ರಮಾಣವನ್ನು ಶೇ 7.5ಕ್ಕೆ ಹೆಚ್ಚಿಸುತ್ತೇನೆಂದು ಭರವಸೆ ಕೊಟ್ಟಿದ್ದರು. ಅದು ಈಡೇರಿಸಿಲ್ಲ. ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡುತ್ತೇನೆ ಎಂದಿದ್ದ ಬಿಜೆಪಿ ಅವರನ್ನು ಕೇವಲ ಮಂತ್ರಿಗೆ ಸೀಮಿತ ಮಾಡಿದೆ’ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ ಮಾತನಾಡಿ, ‘ಆನಂದ್‌ ಸಿಂಗ್‌ ರಾಜೀನಾಮೆ ಕೊಟ್ಟು ಮತದಾರರಿಗೆ ಅಪಮಾನ ಮಾಡಿದ್ದಾರೆ. ಅಂತಹ ವ್ಯಕ್ತಿಗೆ ಜನ ಚುನಾವಣೆಯಲ್ಲಿ ಪಾಠ ಕಲಿಸಬೇಕು’ ಎಂದು ಹೇಳಿದರು.

ಮುಖಂಡರಾದ ಫಹೀಮ್‌ ಬಾಷ, ಎಸ್‌. ಪ್ರಸನ್ನಕುಮಾರ, ಸೋಮಪ್ಪ, ಬಾನು, ಗುಜ್ಜಲ್‌ ರಘು, ಗುಜ್ಜಲ್‌ ನಾಗರಾಜ, ಬಿ. ಮಾರೆಣ್ಣ, ಭಾಗ್ಯಲಕ್ಷ್ಮಿ ಭರಾಡೆ, ವೀರಸ್ವಾಮಿ, ವಿಜಯಕುಮಾರ, ಹುಲುಗಪ್ಪ, ಸತ್ಯನಾರಾಯಣ, ರಾಮನ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT