ಬುಧವಾರ, ಮಾರ್ಚ್ 3, 2021
18 °C

'ಭಾರತದಲ್ಲಿ ಚೀನಾ ಹಳ್ಳಿ ನಿರ್ಮಿಸಿದರೂ ಪ್ರಧಾನಿ ಮೌನವೇಕೆ?'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: 'ಭಾರತಕ್ಕೆ ಸೇರಿದ ಅರುಣಾಚಲ ಪ್ರದೇಶದಲ್ಲಿ ಚೀನಾ ಹಳ್ಳಿಯೊಂದನ್ನೂ ನಿರ್ಮಿಸಿ ಈ ದೇಶದ ಭೂಪ್ರದೇಶ ಅತಿಕ್ರಮಿಸಿದೆ. ಹೀಗಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು ಮೌನ ವಹಿಸಿರುವುದೇಕೇ? ಇಂದು ಕೇಂದ್ರ ಸರ್ಕಾರದ ಬಹುದೊಡ್ಡ ವೈಫಲ್ಯ' ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಟೀಕಿಸಿದರು.

ದೇಶದ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡುವ ಪ್ರಧಾನಿಯವರಿಗೆ ಚೀನಾದ ಹುನ್ನಾರ ಗೊತ್ತಾಗಲಿಲ್ಲವೇ? ಗೊತ್ತಿದ್ದರೆ ನಮ್ಮ ಭೂಭಾಗ ಚೀನಾದವರು ಅತಿಕ್ರಮಿಸುತ್ತಿರಲಿಲ್ಲ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದೇಶದ ರೈತರು ಸಂಕಷ್ಟದಲ್ಲಿದ್ದಾರೆ. ಲಾಕ್ ಡೌನ್ ನಡುವೆ ತರಾತುರಿಯಲ್ಲಿ ಜಾರಿಗೆ ತಂದಿರುವ ಮೂರು ಕಾಯ್ದೆಗಳ ವಿರುದ್ಧ ರೈತರು ಎರಡು ತಿಂಗಳಿಂದ ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅನೇಕ ರೈತರು ಜೀವ ಕಳೆದುಕೊಂಡಿದ್ದಾರೆ. ನಿರುದ್ಯೋಗ ಸಮಸ್ಯೆ ಮಿತಿ ಮೀರಿದೆ. ಈ ಕುರಿತು ಒಂದು ಸಲವೂ ಪ್ರಧಾನಿ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿಲ್ಲ ಎಂದರು.

ಬ್ಯಾಂಕ್, ರೈಲ್ವೆ, ವಿಮಾನಯಾನ ಸೇರಿದಂತೆ ಎಲ್ಲ ಕ್ಷೇತ್ರಗಳನ್ನು ಖಾಸಗೀಕರಣ ಮಾಡುತ್ತಿರುವ ಕೇಂದ್ರ ಸರ್ಕಾರ ಈ ದೇಶವನ್ನು ಮಾರಾಟಕ್ಕಿಟ್ಟಿದೆ. ಹೀಗಿರುವಾಗ ರಾಮಮಂದಿರ ಕಟ್ಟಿದರೆ ಏನು ಪ್ರಯೋಜನ. ನಾನು ಕೂಡ ಒಬ್ಬ ರಾಮನ ಭಕ್ತ. ಆದರೆ, ಈಗಿನ ಸಂದರ್ಭದಲ್ಲಿ ಮಂದಿರ ನಿರ್ಮಾಣಕ್ಕಾಗಿ ಬಿಜೆಪಿಯವರು ಜೋಳಿಗೆ ಹಿಡಿದು ದೇಣಿಗೆ ಸಂಗ್ರಹಿಸುತ್ತಿರುವುದು ಸರಿಯಲ್ಲ. ಬಿಜೆಪಿಯವರಿಗೆ ರಾಮ, ಕೃಷ್ಣ, ಮುಸ್ಲಿಮರು, ಪಾಕಿಸ್ತಾನ ಬಿಟ್ಟರೆ ಬೇರೆ ವಿಷಯವೇ ಇಲ್ಲ. ಮೊದಲು ಈ ದೇಶದ ಜನರು ಎದುರಿಸುತ್ತಿರುವ ಸಮಸ್ಯೆ ಬಗೆಹರಿಸಲಿ. ನಂತರ ಬಿಡುವಿನ ವೇಳೆ ಮಂದಿರ ನಿರ್ಮಾಣದ ಚಟುವಟಿಕೆ ನಡೆಸಲಿ ಎಂದು ಹಕ್ಕೊತ್ತಾಯ ಮಾಡಿದರು.

ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಖಾಲಿಸ್ತಾನಿಗಳು, ನಗರ ನಕ್ಸಲರು ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಅನ್ನದಾತರನ್ನು ಈ ರೀತಿ ಅವಹೇಳನ ಮಾಡುತ್ತಿರುವ ಬಿಜೆಪಿಯವರು ಬರುವ ದಿನಗಳಲ್ಲಿ ಇದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

26ರಂದು ಟ್ರ್ಯಾಕ್ಟರ್ ರ್ಯಾಲಿ
ಗಣರಾಜ್ಯೋತ್ಸವದ ದಿನ ಪ್ರಧಾನಿಯವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ನಂತರ ನವದೆಹಲಿಯೊಳಗೆ ಪ್ರವೇಶಿಸಿ ರೈತರು ಬೃಹತ್ ಟ್ರ್ಯಾಕ್ಟರ್ ರ್ಯಾಲಿ ನಡೆಸುವರು. ಸುಮಾರು ಹತ್ತು ಲಕ್ಷ ಜನ ರೈತರು ಸೇರುವ ನಿರೀಕ್ಷೆ ಇದೆ. ಅದೇ ಮಾದರಿಯಲ್ಲಿ ಆ ದಿನ ಬೆಂಗಳೂರಿನಲ್ಲೂ ಜಾಥಾ ನಡೆಯಲಿದೆ. ರೈತರು ರಾಷ್ಟ್ರ ಧ್ವಜದೊಂದಿಗೆ ವಿನೂತನವಾಗಿ ಹೋರಾಟ ನಡೆಸುವರು. ಯಾರು ಕೂಡ ಅಹಿಂಸೆಗೆ ಇಳಿಯಬಾರದು. ಎರಡನೇ ಸ್ವಾತಂತ್ರ್ಯ ಸಂಗ್ರಾಮದ ಮಾದರಿಯಲ್ಲಿ ನಡೆಯಲಿರುವ ಚಳಿವಳಿ ಈ ದೇಶದ ದಿಕ್ಕು ಬದಲಿಸಲಿದೆ ಎಂದು ಹೇಳಿದರು.

ಆ ದಿನ ಬೆಳಿಗ್ಗೆ ನೈಸ್ ರಸ್ತೆಯಲ್ಲಿ ಸೇರಿ, ಯಶವಂತಪುರ, ಮಲ್ಲೇಶ್ವರ, ಶೇಷಾದ್ರಿಪುರ ರಸ್ತೆಯ ಮಾರ್ಗವಾಗಿ ಸ್ವಾತಂತ್ರ್ಯ ಉದ್ಯಾನದ ವರೆಗೆ ಜಾಥಾ ನಡೆಯಲಿದೆ. ಬಳಿಕ ವಿವಿಧ ಸಂಘಟನೆಗಳ ಮುಖಂಡರು ರೈತರನ್ನು ಉದ್ದೇಶಿಸಿ ಮಾತನಾಡುವರು ಎಂದು ತಿಳಿಸಿದರು.

ಉತ್ತರ ಪ್ರದೇಶ, ಪಂಜಾಬ್ ನಲ್ಲಿ ರೈತರು ಜಿಯೊ ಮೊಬೈಲ್ ಟವರ್ ಗಳಿಗೆ ನಾಶ ಮಾಡಿದರೆ ಅದರ ಮುಖ್ಯಸ್ಥ ಮುಕೇಶ್ ಅಂಬಾನಿಯವರು, ನಾನು ರೈತರ ವಿರುದ್ಧವಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಅದೇ ಮಾತು ಬಿಜೆಪಿಯ ಮುಖಂಡರು ಹೇಳುತ್ತಿದ್ದಾರೆ. ಇನ್ನೊಂದೆಡೆ ಸಿಂಧನೂರಿನಲ್ಲಿ ರಿಲಯನ್ಸ್ ನವರಿಗೆ ಅಕ್ಕಿ ಖರೀದಿಸಲು ಅವಕಾಶ ಕಲ್ಪಿಸಿದ್ದಾರೆ. ಇದು ಅವರ ಇಬ್ಬಗೆಯ ನೀತಿ ತೋರಿಸುತ್ತದೆ ಎಂದಿದ್ದಾರೆ.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜೆ.‌ಕಾರ್ತಿಕ್, ಮುಖಂಡರಾದ ರೇವಣಸಿದ್ದಪ್ಪ, ಸಣ್ಣಕ್ಕಿ ರುದ್ರಪ್ಪ, ತಳವಾರ ವೆಂಕಟೇಶ್ ಇದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು