ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಲಿ ಸಕ್ಕರೆ ಕಾರ್ಖಾನೆ ಆರಂಭವಾಗುವುದೇ?

ಬೆಳೆಗಾರರಲ್ಲಿ ಮೂಡಿದ ಆಶಾವಾದ, ಗರಿಗೆದರಿದ ಚರ್ಚೆ
Last Updated 11 ಏಪ್ರಿಲ್ 2019, 17:55 IST
ಅಕ್ಷರ ಗಾತ್ರ

ಕಂಪ್ಲಿ: ಇಲ್ಲಿನ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಮತ್ತೆ ಆರಂಭಿಸುವ ಕುರಿತು ಪರಿಶೀಲಿಸಿ ವರದಿ ಸಲ್ಲಿಸುವಂತೆ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಆಯುಕ್ತರು ಕಲಬುರ್ಗಿ ಪ್ರಾಂತ್ಯದ ಸಹಕಾರ ಸಂಘಗಳ ಜಂಟಿ ನಿಬಂಧಕರು ಹಾಗೂ ಕಾರ್ಖಾನೆ ಸಮಾಪನಾಧಿಕಾರಿಗಳಿಗೆ ಮಾ. 19ಕ್ಕೆ ಪತ್ರ ಬರೆದಿರುವುದರಿಂದ ಈ ಭಾಗದ ಕಬ್ಬು ಬೆಳೆಗಾರರಲ್ಲಿ ಮತ್ತೊಮ್ಮೆ ಆಸೆ ಚಿಗುರಿದೆ.

ಸಕ್ಕರೆ ಕಾರ್ಖಾನೆಯ ಸ್ಥಳದಲ್ಲಿಯೇ ನೂತನ ಕಾರ್ಖಾನೆಯನ್ನು ಸ್ಥಾಪಿಸಬೇಕು ಎಂದು ಕಂಪ್ಲಿ ಸಹಕಾರ ಸಕ್ಕರೆ ಕಾರ್ಖಾನೆ ಹೋರಾಟ ಸಮಿತಿ ನೇತೃತ್ವದಲ್ಲಿ 2015ರ ಜುಲೈ 9ರಂದು ಚಿತ್ರದುರ್ಗ ಮುರುಘಾ ಶರಣರ ನೇತೃತ್ವದಲ್ಲಿ ನಾಡಿನ 30ಕ್ಕೂ ಹೆಚ್ಚು ಶರಣರ ‘ಋಷಿ ಯಾತ್ರೆ ಕೃಷಿ ಪಾತ್ರೆ’ ಎನ್ನುವ ಪಾದಯಾತ್ರೆ ನಡೆದಿತ್ತು.

ನಂತರ ಹೋರಾಟ ಸಮಿತಿಯ ಭರತ್‌ ಮಾಲತೇಶ ಮಗದೂರ ಅವರು, ಸಕ್ಕರೆ ಕಾರ್ಖಾನೆ ಸಮಾಪನೆ ನಂತರ ಮಾಲೀಕರು ಷರತ್ತು ಉಲ್ಲಂಘಿಸಿದ ಅಂಶಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದರು. ಸರ್ಕಾರ ಪರಿಶೀಲಿಸಿ ಅಕ್ಟೋಬರ್‌ 2017ರಲ್ಲಿ ಕಾರ್ಖಾನೆಯ 176.51 ಎಕರೆಯನ್ನು ತನ್ನ ವಶಕ್ಕೆ ಪಡೆದಿತ್ತು.

ನಂತರ ಕೆಲವರು ಕಾರ್ಖಾನೆ ಸ್ಥಳದಲ್ಲಿ ಅಥವಾ ಹೊಸ ಭೂಮಿ ಖರೀದಿಸಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ರೈತರೊಂದಿಗೆ ಒಂದು ಸುತ್ತಿನ ಸಭೆ ನಡೆಸಿ ಮರಳಿದ್ದಾರೆ.

ಈ ನಡುವೆಯೇ ಕೆ. ಹರ್ಷಿತ್‌ ಎನ್ನುವವರು ಜನವರಿ 9ರಂದು ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಸೂಚನೆ ಬಂದಿದೆ. ಅದರಿಂದ ಸಕ್ಕರೆ ಕಾರ್ಖಾನೆ ಮತ್ತೆ ಸ್ಥಾಪನೆಯಾಗುವದೇ ಎಂಬ ಚರ್ಚೆಗೂ ದಾರಿಯಾಗಿದೆ.

ಇತಿಹಾಸ: ಬಳ್ಳಾರಿ ಸೆಂಟ್ರಲ್ ಸಹಕಾರಿ ಸ್ಟೋರ್ ಮತ್ತು ರೈತರ ಷೇರುಗಳೊಂದಿಗೆ 1955 ಡಿಸೆಂಬರ್‌ 17ರಂದು ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು.

1956ರಲ್ಲಿ ಜರ್ಮನಿಯ ಯಂತ್ರೋಪಕರಣಗಳನ್ನು ಅಳವಡಿಸಿ, 1958ರಲ್ಲಿ ಕಬ್ಬು ನುರಿಸಲು ಆರಂಭಿಸಲಾಯಿತು. 1968- 1969ರಲ್ಲಿ ಹಾಲಿ ಸಕ್ಕರೆ ಕಾರ್ಖಾನೆ ಬಳ್ಳಾರಿ ಸೆಂಟ್ರಲ್ ಸ್ಟೋರ್‌ನಿಂದ ಬಿಡುಗಡೆಗೊಂಡು ಸ್ವತಂತ್ರವಾಗಿ ಕಂಪ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಯಾಗಿ ಬದಲಾವಣೆಗೊಂಡಿತು.

ಆರಂಭದಲ್ಲಿ 800 ಟನ್ ಕಬ್ಬು ನುರಿಸುತ್ತಿದ್ದ ಕಾರ್ಖಾನೆ ನಂತರ 1200 ಟನ್ ಕಬ್ಬು ನುರಿಸುವ ಮೂಲಕ ₹5 ಲಕ್ಷ ಲಾಭಗಳಿಸಿತ್ತು.
1977ರಲ್ಲಿ ಸರ್ಕಾರದ ನಾಮ ನಿರ್ದೇಶನ ಸದಸ್ಯರು ಆಡಳಿತ ಮಂಡಳಿ ಅಧ್ಯಕ್ಷರಾದ ನಂತರ ಅಧಿಕಾರ ದುರ್ಬಳಕೆಯಾಗಿ ನಷ್ಟದ ಹಾದಿ ಹಿಡಿಯಿತು.

1982ರಿಂದ 1985ರವರೆಗೆ ಪಾರದರ್ಶಕ ಮತ್ತು ಕಟ್ಟು ನಿಟ್ಟಿನ ಆಡಳಿತದಿಂದ ಮತ್ತೆ ಆರ್ಥಿಕವಾಗಿ ಸುಧಾರಣೆ ಕಂಡಿತು. ಆದರೆ ನಂತರದ ದಿನಗಳಲ್ಲಿ ಮತ್ತೆ ನಷ್ಟದತ್ತ ಮುಖ ಮಾಡಿ 1995 ಜುಲೈ 21ರಂದು ಸಮಾಪನೆಗೊಂಡಿತು.

176 ಎಕರೆ ಕೃಷಿ ಭೂಮಿ, ಗೋದಾಮು, ಸಿಬ್ಬಂದಿ ವಸತಿ ಗೃಹ, ಕಟ್ಟಡಗಳ ಸ್ಥಳ ಸೇರಿ ಒಟ್ಟು ಮೌಲ್ಯ ₹90 ಕೋಟಿ ಎಂದು ಅಂದಾಜಿಸಲಾಗಿದೆ.

ಸಹಕಾರಿ ಕಾರ್ಖಾನೆ ‘ಸುಂದರಿ ಶುಗರ್ಸ್’ ಆಯಿತು!
ಇಂಥ ಕಾರ್ಖಾನೆಯನ್ನು ಕೇವಲ ₹8.01 ಕೋಟಿಗೆ ಆಂಧ್ರಪ್ರದೇಶ ಮೂಲದ ಉದ್ಯಮಿ ಸುಬ್ಬರಾವು ಎನ್ನುವವರಿಗೆ 1998ರಲ್ಲಿ ಅಂದಿನ ಸರ್ಕಾರ ಮಾರಾಟ ಮಾಡಿತ್ತು. ಅವರು ಕಾರ್ಖಾನೆಯ ಹೆಸರು ಬದಲಿಸಿ ಮೆ. ಸುಂದರಿ ಶುಗರ್‍್ಸ ಲಿಮಿಟೆಡ್‌ ಎಂದು ನಾಮಕರಣ ಮಾಡಿದರು.

1999 ಜನವರಿಯಿಂದ ಮಾರ್ಚ್‌ವರೆಗೆ 25 ಸಾವಿರ ಚೀಲ ಸಕ್ಕರೆ ಉತ್ಪಾದಿಸಿ ಕಾರ್ಖಾನೆಯನ್ನು ಬಂದ್‌ ಮಾಡಿದರು. ನಂತರ ಸುಸ್ಥಿತಿಯಲ್ಲಿದ್ದ ಕಾರ್ಖಾನೆಯ ಎಲ್ಲಾ ಯಂತ್ರೋಪಕರಣಗಳನ್ನು ಮುಂಬೈ ಮೂಲದ ಭಾವನಾ ಎಂಟರ್‌ಪ್ರೈಸಸ್ ಅವರಿಗೆ ಮಾರಾಟ ಮಾಡಲಾಯಿತು.

ಸರ್ಕಾರ ಮಾರಾಟ ಮಾಡಿದ ಸಂದರ್ಭದಲ್ಲಿ ಬರೆದ ಕರಾರು ಪತ್ರದಲ್ಲಿ ಖರೀದಿದಾರರು ಹಾಲಿ ಸ್ಥಳದಲ್ಲಿಯೇ ಕಾರ್ಖಾನೆ ನಡೆಸಿಕೊಂಡು ಹೋಗಬೇಕು. ಕಾರ್ಖಾನೆ ಯಂತ್ರೋಪಕರಣಗಳನ್ನು ಬೇರೆ ಕಡೆ ಸಾಗಿಸುವಂತಿಲ್ಲ ಎನ್ನುವ ನಿಬಂಧನೆಯನ್ನು ವಿಧಿಸಿತ್ತು.

ಆದರೆ ಈ ಎಲ್ಲಾ ನಿಬಂಧನೆಯನ್ನು ಮೆ. ಸುಂದರಿ ಶುಗರ್‍ಸ್‌ ಲಿಮಿಟೆಡ್‌ ಉಲ್ಲಂಘಿಸಿರುವುದರಿಂದ ಈ ಭಾಗದ ರೈತರು ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮತ್ತು ಅದೇ ಸ್ಥಳದಲ್ಲಿ ಹೊಸ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸುವಂತೆ ಮನವಿ ಮಾಡಿದ್ದರು.

**

ಮತ್ತೆ ಸಕ್ಕರೆ ಕಾರ್ಖಾನೆ ಸ್ಥಾಪನೆಯಾದರೆ ಈ ಭಾಗದ ರೈತರ ಬಹುದಿನಗಳ ಕನಸು ನನಸಾಗುತ್ತದೆ, ಹೊಲ ಗದ್ದೆಗಳಲ್ಲಿ ಮತ್ತೆ ಕಬ್ಬಿನ ಬೆಳೆ ಪರ್ವ ಆರಂಭವಾಗಲಿದೆ.
–ಬಿ. ನಾರಾಯಣಪ್ಪ, ಹೋರಾಟ ಸಮಿತಿ ಮುಖಂಡರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT