ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಮು ಚುಮು ಚಳಿ.. ಮಂಜಿನಾಟ ಶುರು

Last Updated 28 ಅಕ್ಟೋಬರ್ 2018, 9:01 IST
ಅಕ್ಷರ ಗಾತ್ರ

ಹೊಸಪೇಟೆ: ನಗರದಲ್ಲಿ ಕೆಲವು ದಿನಗಳಿಂದ ಚುಮು.. ಚುಮು ಚಳಿ ಆರಂಭಗೊಂಡಿದೆ. ಅದರ ಜತೆಗೆ ಮಂಜಿನಾಟ ಕೂಡ ಶುರುವಾಗಿದೆ.

ಎರಡು ವಾರಗಳ ಹಿಂದೆ ಬೆಳಿಗ್ಗೆ ಆರು ಗಂಟೆಗೆಲ್ಲ ಬೆಳಕು ಹರಿಯುತ್ತಿತ್ತು. ಆದರೆ, ಈಗ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಬೆಳಿಗ್ಗೆ ಏಳೂವರೆ–ಎಂಟು ಗಂಟೆಯ ವರೆಗೆ ಮಂಜು ಆವರಿಸಿಕೊಂಡಿರುತ್ತಿದೆ. ಮತ್ತೆ ಸಂಜೆ ಐದು ಗಂಟೆಗೆ ಅದರ ಆಟ ಶುರುವಾಗುತ್ತಿದ್ದು, ಬೇಗ ಕತ್ತಲಾದ ಅನುಭವವಾಗುತ್ತಿದೆ. ದಟ್ಟ ಮಂಜಿನಿಂದಾಗಿ ಇನ್ನೂರು–ಮುನ್ನೂರು ಮೀಟರ್‌ ದೂರದಲ್ಲಿರುವ ವಸ್ತುಗಳು ಗೋಚರಿಸುತ್ತಿಲ್ಲ. ಹೀಗಾಗಿ ವಾಹನಗಳು ದೀಪ ಬೆಳಗಿಸಿಕೊಂಡು ಸಂಚರಿಸುತ್ತಿವೆ.

ಸೂರ್ಯ ಮುಳುಗಿ ರಾತ್ರಿಯಾಗುತ್ತಿದ್ದಂತೆ ಚುಮು.. ಚುಮು ಚಳಿಯ ಕಾರುಬಾರು ಶುರುವಾಗುತ್ತಿದೆ. ಹೀಗೆ ಆರಂಭಗೊಳ್ಳುವ ಚಳಿ ಬೆಳಿಗ್ಗೆ ಎಂಟು ಗಂಟೆಯ ವರೆಗೆ ಇರುತ್ತಿದೆ. ಇದರಿಂದಾಗಿ ಬೆಳಿಗ್ಗೆ ಎಂಟು ಗಂಟೆಯ ವರೆಗೆ ಮತ್ತು ರಾತ್ರಿ ಎಂಟು ಗಂಟೆಯ ನಂತರ ಜನ ಹೊರಗೆ ಓಡಾಡುವುದು ಸ್ವಲ್ಪ ತಗ್ಗಿದೆ. ಪ್ರಮುಖ ರಸ್ತೆಗಳು ಬಿಕೊ ಎನ್ನುತ್ತಿವೆ.

ಚಳಿಯಿಂದಾಗಿ ವಾಯುವಿಹಾರಕ್ಕೆ ಹೋಗುವವರು ಕೂಡ ಸಮಯ ಬದಲಿಸಿಕೊಂಡಿದ್ದಾರೆ. ಬೆಳಿಗ್ಗೆ ಐದರಿಂದ ಆರು ಗಂಟೆಗೆಲ್ಲ ಇಲ್ಲಿನ ಮುನ್ಸಿಪಲ್‌ ಮೈದಾನದಲ್ಲಿ ಜನರ ಹಿಂಡು ಕಾಣಿಸಿಕೊಳ್ಳುತ್ತಿತ್ತು. ಈಗ ಏಳು ಗಂಟೆಯ ಬಳಿಕವಷ್ಟೇ ಜನ ಬಂದು ಹೋಗುತ್ತಿದ್ದಾರೆ. ಸಂಜೆ ಐದರಿಂದ ಆರು ಗಂಟೆಗೆ ಕ್ರೀಡಾಂಗಣದತ್ತ ಸುಳಿಯುವ ಜನ ಏಳು ಗಂಟೆಯ ಒಳಗೆ ಮನೆ ಸೇರಿಕೊಳ್ಳುತ್ತಿದ್ದಾರೆ. ಎಂ.ಜೆ. ನಗರ, ಟಿ.ಬಿ. ಡ್ಯಾಂ, ಶ್ರೀರಾಮುಲು ಉದ್ಯಾನ ಸೇರಿದಂತೆ ಬಹುತೇಕ ಕಡೆ ಇದೇ ಪರಿಸ್ಥಿತಿ ಇದೆ.

ಬಿಸಿ ಬಿಸಿ ಚಹಾ.. ಮಿರ್ಚಿ ಮಂಡಕ್ಕಿ:ಚಳಿಯ ಪ್ರಮಾಣ ಹೆಚ್ಚಾಗಿರುವುದರಿಂದ ಜನ ಬಿಸಿ ಬಿಸಿ ಉಪಾಹಾರ, ಆಹಾರಕ್ಕೆ ಮೊರೆ ಹೋಗುತ್ತಿದ್ದಾರೆ. ಸಂಜೆ ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಮಿರ್ಚಿ–ಮಂಡಕ್ಕಿ, ಬಿಸಿ ಬಿಸಿ ಚಹಾಕ್ಕೆ ಬೇಡಿಕೆ ಹೆಚ್ಚಾಗಿದೆ. ಫಾಸ್ಟ್‌ಫುಡ್‌ಗೂ ಡಿಮ್ಯಾಂಡ್‌ ಸೃಷ್ಟಿಯಾಗಿದೆ. ಅದರಲ್ಲೂ ರಸ್ತೆ ಬದಿ ವ್ಯಾಪಾರಿಗಳು ಹಾಗೂ ಗೂಡಂಗಡಿಗಳಲ್ಲಿ ಉತ್ತಮ ವ್ಯಾಪಾರ ಆಗುತ್ತಿದ್ದು, ಕೈತುಂಬ ಹಣ ಗಳಿಸುತ್ತಿದ್ದಾರೆ. ಇನ್ನೊಂದೆಡೆ ಎಳನೀರು, ಹಣ್ಣಿನ ರಸ ಮಾರಾಟ ಮಾಡುವ ಮಳಿಗೆಗಳಲ್ಲಿ ವ್ಯಾಪಾರ ಸ್ವಲ್ಪ ಪ್ರಮಾಣದಲ್ಲಿ ತಗ್ಗಿದೆ.

‘ಇಷ್ಟು ದಿನ ವಿಪರೀತ ಬಿಸಿಲಿತ್ತು. ಹೀಗಾಗಿಯೇ ಜ್ಯೂಸ್‌ ಸೇವಿಸಲು ಹೆಚ್ಚಾಗಿ ಜನ ಬರುತ್ತಿದ್ದರು. ಈಗ ಚಳಿ ಆರಂಭಗೊಂಡಿರುವುದರಿಂದ ಜನ ಬರುವುದು ಕಡಿಮೆಯಾಗಿದೆ. ಚಳಿಗಾಲ ಮುಗಿಯುವವರೆಗೆ ಇದೇ ಪರಿಸ್ಥಿತಿ ಇರುತ್ತದೆ’ ಎನ್ನುತ್ತಾರೆ ಇಲ್ಲಿನ ಕಾಲೇಜು ರಸ್ತೆಯಲ್ಲಿರುವ ಹಣ್ಣಿನ ರಸದ ವ್ಯಾಪಾರಿ ರಾಜು.

ಅಲ್ಮೇರಾದಿಂದ ಹೊರಬಂದ ಸ್ವೆಟರ್‌:ಇಷ್ಟು ದಿನಗಳ ವರೆಗೆ ಅಲ್ಮೇರಾದಲ್ಲಿ ಬಂದಿಯಾಗಿದ್ದ ಸ್ವೆಟರ್‌, ಶಾಲು, ರುಮಾಲುಗಳು ಹೊರಗೆ ಬಂದಿವೆ. ಬೆಳಿಗ್ಗೆ ಹಾಗೂ ಸಂಜೆ ವೇಳೆ ಜನ ಸ್ವೆಟರ್‌ ಧರಿಸಿಕೊಂಡು ಓಡಾಡುತ್ತಿದ್ದಾರೆ. ಇಲ್ಲದವರು ಮಳಿಗೆಗಳಿಗೆ ಹೋಗಿ ಖರೀದಿಸುತ್ತಿದ್ದಾರೆ. ಬೇಡಿಕೆ ಹೆಚ್ಚಾಗಿರುವುದರಿಂದ ಸ್ವೆಟರ್‌ ಬೆಲೆ ತುಸು ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT