ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ದೀಪಾವಳಿಗೆ ಮಣ್ಣಿನ ಹಣತೆ ಮೆರುಗು

Last Updated 24 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಮಣ್ಣಿನ ಹಣತೆ ಇಲ್ಲದೇ ಬೆಳಕಿನ ಹಬ್ಬ ದೀಪಾವಳಿ ಅಪೂರ್ಣ ಎಂಬ ಮಾತು ಇಂದಿಗೂ ಸತ್ಯ.

ಅದನ್ನು ಪುಷ್ಟೀಕರಿಸುವ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಮಣ್ಣಿನ ಹಣತೆಗಳು ಮಾರಾಟವಾಗುತ್ತಿರುವುದೇ ಅದಕ್ಕೆ ಸಾಕ್ಷಿ.

ಇನ್ನೂ ದೀಪಾವಳಿಗೆ ನಾಲ್ಕು ದಿನಗಳು ಬಾಕಿ ಉಳಿದಿವೆ. ಅಷ್ಟರಲ್ಲಾಗಲೇ ಮಾರುಕಟ್ಟೆಯಲ್ಲಿ ಮಣ್ಣಿನ ಹಣತೆಗಳು ಭರ್ಜರಿಯಾಗಿ ಮಾರುಕಟ್ಟೆಯಾಗುತ್ತಿವೆ. ಕಾಲ ಬದಲಾದಂತೆ ಹಣತೆಗಳ ಸ್ವರೂಪ, ಗಾತ್ರ ಕೂಡ ಬದಲಾಗಿದೆ.

ಹೂವಿನ ಹಣತೆ, ನಮಸ್ಕಾರ ಮಾಡುವ ಭಂಘಿ, ಗೊಂಬೆಯಾಕಾರ, ಗಣಪನ ಮಾದರಿಯ ಹಣತೆಗಳು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿವೆ. ಥೇಟ್‌ ಹಣತೆಯಂತೆ ಕಾಣುವ ಎಲ್‌.ಇ.ಡಿ.ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೆ, ಜನ ಅವುಗಳ ಮೋಹಕ್ಕೆ ಒಳಗಾಗಿಲ್ಲ. ಇದರಿಂದಾಗಿ ಮಣ್ಣಿನ ಹಣತೆಗಳಿಗೂ ಈಗಲೂ ಹಿಂದಿನಂತೆಯೇ ಭಾರಿ ಬೇಡಿಕೆ ಇದೆ.

ಹಣತೆಯಲ್ಲಿ ಹತ್ತಿಯ ದೀಪ ಹಾಕಿ, ಅದಕ್ಕೆ ತೈಲ ಸುರಿದು ದೀಪ ಬೆಳಗಿಸಿದರೆ ಲಕ್ಷ್ಮಿ ಒಲಿಯುತ್ತಾಳೆ ಎಂಬ ನಂಬಿಕೆ ಈಗಲೂ ಜನರಲ್ಲಿ ಮನೆ ಮಾಡಿರುವುದರಿಂದ ಮಣ್ಣಿನ ಹಣತೆಗಳಿಗೆ ಬೇಡಿಕೆ ಇರಲು ಪ್ರಮುಖ ಕಾರಣ.

‘ದೀಪಾವಳಿ ಹಬ್ಬ ಹಿಂದೂಗಳಿಗೆ ಬಹಳ ಪವಿತ್ರವಾದ ಹಬ್ಬ. ಮನೆ, ಮನ ಬೆಳಗಿಸಿಕೊಂಡು ಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಸಂದರ್ಭ. ಇಂತಹ ಹಬ್ಬವನ್ನು ಕೃತಕವಾಗಿ ಆಚರಿಸಿದರೆ ಅದಕ್ಕೆ ಅರ್ಥವಿರುವುದಿಲ್ಲ. ಮನೆಯೆಲ್ಲ ಮಣ್ಣಿನ ಹಣತೆಗಳಿಂದ ಅಲಂಕರಿಸಿದರೆ ಅದಕ್ಕೆ ವಿಶೇಷ ಮೆರುಗು’ ಎಂದು ಬಸವೇಶ್ವರ ಬಡಾವಣೆಯ ಶೋಭಾ ಹೇಳಿದರು.

‘ಮಾರುಕಟ್ಟೆಯಲ್ಲಿ ತರಹೇವಾರಿ ಪ್ಲಾಸ್ಟಿಕ್‌, ಎಲ್‌.ಇ.ಡಿ. ಹಣತೆಗಳು ಬಂದಿವೆ. ಮಣ್ಣಿನ ಹಣತೆಗಳಿಗೆ ಹೋಲಿಸಿದರೆ ಅವುಗಳು ದುಬಾರಿ. ಅಷ್ಟೇ ಅಲ್ಲ, ಅವುಗಳನ್ನು ಹಾಕಿದರೆ ಬಹಳ ಕೃತಕವಾಗಿ ಕಾಣಿಸುತ್ತದೆ. ಮಣ್ಣಿನ ಹಣತೆಗಳನ್ನು ಹಚ್ಚಿದರೆ ಬಹಳ ಅಂದವಾಗಿ ಕಾಣುತ್ತದೆ’ ಎಂದರು.

‘ಮಣ್ಣಿನ ಹಣತೆಗಳನ್ನು ಖರೀದಿಸಿದರೆ ಬಡವರಿಗೆ ಅನುಕೂಲವಾಗುತ್ತದೆ. ಹಣತೆ ಮಾಡುವವರು, ಮಾರಾಟ ಮಾಡುವವರು ಕೂಡ ಬಡವರೇ ಆಗಿರುವುದರಿಂದ ಅವರಿಗೆ ನೆರವು ಮಾಡಿದಂತಾಗುತ್ತದೆ. ಪ್ಲಾಸ್ಟಿಕ್‌, ಎಲ್‌.ಇ.ಡಿ. ಹಣತೆ ಖರೀದಿಸಿದರೆ ಕಂಪೆನಿಗಳಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ’ ಎಂದು ಹೇಳಿದರು.

ತಲಾ ಐದು ರೂಪಾಯಿಯಿಂದ ₹50 ಬೆಲೆಬಾಳುವ ಹಣತೆಗಳು ಮಾರುಕಟ್ಟೆಯಲ್ಲಿ ಇವೆ.

ಮಾರುಕಟ್ಟೆಯಲ್ಲಿ ತರಹೇವಾರಿ ಆಕಾಶಬುಟ್ಟಿಗಳು ಬಂದಿದ್ದು, ಅವುಗಳ ಸಹ ಭರ್ಜರಿಯಾಗಿ ಬಿಕರಿಯಾಗುತ್ತಿವೆ. ₹150ರಿಂದ ₹850ರ ವರೆಗಿನ ಬಗೆಬಗೆಯ ಆಕಾಶಬುಟ್ಟಿಗಳು ಮಾರಾಟಕ್ಕೆ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT