ಎಲ್ಲ ರಂಗಗಳಲ್ಲೂ ಮಹಿಳೆ ಬರಬೇಕು

7
ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಚಂದ್ರ ಪೂಜಾರಿ ಹೇಳಿಕೆ

ಎಲ್ಲ ರಂಗಗಳಲ್ಲೂ ಮಹಿಳೆ ಬರಬೇಕು

Published:
Updated:
Deccan Herald

ಹೊಸಪೇಟೆ: ‘ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದಲ್ಲಿ ಮಹಿಳೆಯರ ಪಾಲುದಾರಿಕೆ ಹೆಚ್ಚಾಗಬೇಕು. ಆಗ ಅವರ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು’ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಚಂದ್ರ ಪೂಜಾರಿ ಹೇಳಿದರು.

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಭಾನುವಾರ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ‘ಚುನಾವಣೆ; ಒಳ ಹೊರಗೆ’ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

‘ಸಂವಿಧಾನದ ಮೂರೂ ಪ್ರಮುಖ ಅಂಗಗಳಲ್ಲಿ ಮಹಿಳೆಯರ ಸಂಖ್ಯೆ ತೀರ ಕಡಿಮೆ ಇದೆ. ಹೀಗಾಗಿ ಅವುಗಳಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪಾಗುತ್ತದೆ. ಮಾಧ್ಯಮ ಕ್ಷೇತ್ರದಲ್ಲೂ ಮಹಿಳೆಯರ ಪಾಲುದಾರಿಕೆ ತೀರ ಕಡಿಮೆ ಇದೆ. ಚಾನೆಲ್‌ಗಳಲ್ಲಿ ಮಹಿಳೆಯರು ಆ್ಯಂಕರ್‌ಗಷ್ಟೇ ಸೀಮಿತವಾಗಿದ್ದಾರೆ. ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಈಗಲೂ ಪುರುಷರದ್ದೇ ಪ್ರಾಬಲ್ಯ ಇದೆ’ ಎಂದರು.

‘ವಾಸ್ತವದಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಕೊಡಬೇಕು. ಆದರೆ, ಇದುವರೆಗೆ ನಮಗೆ ಶೇ 33ರಷ್ಟು ಮೀಸಲು ಕೊಡಲು ಸಾಧ್ಯವಾಗಿಲ್ಲ. ಮಹಿಳೆಯರಿಗೆ ಮೀಸಲಾತಿ ಸೌಲಭ್ಯ ಸಿಕ್ಕರೆ ಚುನಾವಣೆಗಳಲ್ಲಿ ಮಹಿಳೆಯರು ಗೆದ್ದು ಬಂದು, ನೀತಿ ನಿರೂಪಣೆಗಳಲ್ಲಿ ಪಾಲ್ಗೊಂಡು ಮಹಿಳಾ ಕುಲಕ್ಕೆ ನ್ಯಾಯ ಒದಗಿಸಬಹುದು’ ಎಂದು ತಿಳಿಸಿದರು.

‘ಚುನಾವಣೆಗೆ ಸಂಬಂಧಿಸಿದಂತೆ ದೇಶದಲ್ಲಿ ಅತ್ಯುತ್ತಮ ಕಾಯ್ದೆಗಳಿವೆ. ಆದರೆ, ಚುನಾವಣೆ ಸಂದರ್ಭದಲ್ಲಿ ಅದು ಸರಿಯಾಗಿ ಜಾರಿಗೆ ಬರುವುದಿಲ್ಲ. ಸಮಾನತೆ, ಜಾತ್ಯತೀತತೆಯ ಸಂವಿಧಾನದ ಪರಿಕಲ್ಪನೆಗಳು ಇನ್ನೂ ಈಡೇರಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಾಧ್ಯಾಪಕಿ ಎಂ. ಉಷಾ ಮಾತನಾಡಿ, ‘ಮಹಿಳೆಯರು ಓಟ್‌ ಬ್ಯಾಂಕ್‌ಗಳಾಗಿ ಬದಲಾಗಬೇಕು. ಆಗ ಸ್ತ್ರೀಯರ ಆಶಯಗಳು ಈಡೇರಲು ಸಾಧ್ಯ. ಈ ನಿಟ್ಟಿನಲ್ಲಿ ಮಹಿಳಾ ಪರ ಸಂಘಟನೆಗಳು ಕೆಲಸ ನಿರ್ವಹಿಸುವ ಅಗತ್ಯವಿದೆ’ ಎಂದರು.

‘ಚುನಾವಣೆಯಲ್ಲಿ ಹೆಣ್ಣು ಮಗಳೊಬ್ಬಳು ಸ್ಪರ್ಧಿಸಿದರೆ ಮಹಿಳೆಯರೇ ಆಕೆ ಪರವಾಗಿ ಮತ ಚಲಾಯಿಸುವುದಿಲ್ಲ. 70 ವರ್ಷಗಳಿಂದ ಇದನ್ನೇ ಮಾಡುತ್ತಿದ್ದೇವೆ. ಅದು ಈಗಲೂ ಮುಂದುವರಿದಿದೆ. ಈ ಧೋರಣೆ ಬದಲಾಗಬೇಕು’ ಎಂದು ಹೇಳಿದರು.

ಹೋರಾಟಗಾರ್ತಿ ನಸ್ರೀನ್‌ ಮಿಠಾಯಿ ಉದ್ಘಾಟಿಸಿದರು. ಕವಯತ್ರಿ ನೂರ್‌ ಜಹಾನ್‌, ಅಂಜಲಿ ಬೆಳಗಲ್‌, ಎಚ್‌.ಎಸ್‌. ಅನುಪಮ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !