ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕಿತ ಡೆಂಗಿ ಪ್ರಕರಣ ಹೆಚ್ಚಳ

ಸ್ವಚ್ಛತೆ, ಲಾರ್ವಾ ಸರ್ವೇ ನಡೆಸಿ–ತಾಲ್ಲೂಕು ಪಂಚಾಯಿತಿ ಇ.ಒ. ಸೂಚನೆ
Last Updated 7 ನವೆಂಬರ್ 2019, 20:00 IST
ಅಕ್ಷರ ಗಾತ್ರ

ಹೊಸಪೇಟೆ: ‘ತಾಲ್ಲೂಕು ವ್ಯಾಪ್ತಿಯಲ್ಲಿ ಶಂಕಿತ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅದನ್ನು ತಡೆಯಲು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆರ್‌.ಕೆ. ಶ್ರೀಕುಮಾರ ಇಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗುರುವಾರ ನಗರದಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ನಿತ್ಯ ಎಲ್ಲ ಕಡೆಗಳಲ್ಲಿ ಫಾಗಿಂಗ್‌ ಮಾಡಬೇಕು. ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಮನೆ ಮನೆಗಳಿಗೆ ಭೇಟಿ ನಿಡಿ ಪರಿಶೀಲನೆ ನಡೆಸಬೇಕು. ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು. ಈ ವಿಷಯದಲ್ಲಿ ಯಾರು ಕೂಡ ನಿರ್ಲಕ್ಷ್ಯತೋರಬಾರದು’ ಎಂದು ಹೇಳಿದರು.

ಸದಸ್ಯ ಬಿ.ಎಸ್‌. ರಾಜಪ್ಪ ಮಾತನಾಡಿ, ‘ಸೊಳ್ಳೆಗಳು ಜೇನು ನೊಣಗಳಂತಾಗಿವೆ. ನಿತ್ಯ ಅನೇಕ ಜನ ಆಸ್ಪತ್ರೆಗೆ ಸೇರುತ್ತಿದ್ದಾರೆ. ಚಿಲಕನಹಟ್ಟಿ ಸಮೀಪದ ಕೋಳಿ ಫಾರಂನಿಂದ ನೊಣಗಳ ಸಂಖ್ಯೆ ಹೆಚ್ಚಾಗಿದ್ದು, ಅದು ಪರಿಸ್ಥಿತಿ ಮತ್ತಷ್ಟು ಹದಗೆಡಿಸಿದೆ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ಪ್ರತಿಕ್ರಿಯಿಸಿ, ‘ತಾಲ್ಲೂಕಿನ ಗಾದಿಗನೂರು, ದೇವಸಮುದ್ರದಲ್ಲಿ ತಲಾ ಎರಡು, ಶ್ರೀರಾಮರಂಗಾಪುರ ಹಾಗೂ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ತಲಾ ಒಂದು ಡೆಂಗಿ ಪ್ರಕರಣಗಳು ವರದಿಯಾಗಿವೆ. ಗರಗ ನಾಗಲಾಪುರದಲ್ಲಿ ಶಂಕಿತ ಡೆಂಗಿಯಿಂದ ಬಾಲಕಿ ಮೃತಪಟ್ಟಿದ್ದಾಳೆ. ಇನ್ನಷ್ಟೇ ವೈದ್ಯಕೀಯ ವರದಿ ಕೈಸೇರಬೇಕಿದೆ’ ಎಂದು ಮಾಹಿತಿ ನೀಡಿದರು.

‘ಆರೋಗ್ಯ ಇಲಾಖೆಯ ಕಾರ್ಯಕರ್ತರು ಪ್ರತಿಯೊಂದು ಮನೆಗಳಿಗೆ ಭೇಟಿ ನಿಡಿ ಲಾರ್ವಾ ಸರ್ವೇ ನಡೆಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿಯೊಂದಿಗೆ ಜಂಟಿಯಾಗಿ ಕೆಲಸ ಮಾಡುತ್ತಿದ್ದೇವೆ. ಜ್ವರ ಬಂದವರಿಗೆ ತಕ್ಷಣವೇ ಚಿಕಿತ್ಸೆ ನೀಡಲಾಗುತ್ತಿದೆ. ಡೆಂಗಿ ದೃಢಪಟ್ಟರೆ ಫಾಗಿಂಗ್‌ ಮಾಡಲಾಗುವುದು. ಅನಗತ್ಯವಾಗಿ ಫಾಗಿಂಗ್‌ ಮಾಡಿದರೆ ಅದರಿಂದ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು’ ಎಂದು ತಿಳಿಸಿದರು.

ಆಕ್ಷೇಪ:

‘ತಾಲ್ಲೂಕಿನ ಮುದ್ದಾಪುರದಲ್ಲಿ ಯಾರ ಗಮನಕ್ಕೂ ತರದೇ ಸಮುದಾಯ ಭವನ ನೆಲಸಮಗೊಳಿಸಿ, ಅಂಗನವಾಡಿ ಕೇಂದ್ರದ ಕಟ್ಟಡ ಕಟ್ಟಲಾಗುತ್ತಿದೆ. ಇದು ಸರಿಯಾದುದಲ್ಲ. ಆಶ್ರಯ ಕಾಲೊನಿಯ ಬಡವರು ಸಣ್ಣಪುಟ್ಟ ಕಾರ್ಯಕ್ರಮಗಳಿಗಾಗಿ ಅದನ್ನು ಕಟ್ಟಲಾಗಿತ್ತು. ಕಟ್ಟಡ ಕೆಡವಿದ್ದರಿಂದ ಅವರಿಗೆ ತೊಂದರೆಯಾಗುತ್ತಿದೆ. ಅದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪುನಃ ಅದೇ ಜಾಗದಲ್ಲಿ ಸಮುದಾಯ ಭವನ ಕಟ್ಟಬೇಕು. ಇಲ್ಲವಾದಲ್ಲಿ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವೆ’ ಎಂದು ಸದಸ್ಯ ಶಿವಮೂರ್ತಿ ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪಿ.ಡಿ.ಒ. ಬೀರಲಿಂಗಯ್ಯ, ‘ಸಮುದಾಯ ಭವನದ ಕಟ್ಟಡ ಸಂಪೂರ್ಣ ಶಿಥಿಲಗೊಂಡಿತ್ತು. ಅದನ್ನು ಕೆಡವಿ ಅಂಗನವಾಡಿ ಕಟ್ಟಲಾಗುತ್ತಿದೆ. ಗ್ರಾಮ ಪಂಚಾಯಿತಿಯಲ್ಲಿ ಕೈಗೊಂಡ ನಿರ್ಧಾರದಂತೆ ಕೆಲಸ ನಡೆಯುತ್ತಿದೆ. ಶಿವಮೂರ್ತಿ ಅವರಿಗೂ ಈ ವಿಷಯ ತಿಳಿಸಲಾಗಿತ್ತು’ ಎಂದರು.

ಮಧ್ಯ ಪ್ರವೇಶಿಸಿ ಮಾತನಾಡಿದ ಇ.ಒ. ಶ್ರೀಕುಮಾರ, ‘ನಾನೇ ಖುದ್ದಾಗಿ ಗ್ರಾಮಕ್ಕೆ ಬಂದು, ಗ್ರಾಮಸ್ಥರ ಅಭಿಪ್ರಾಯ ಪಡೆಯುತ್ತೇನೆ. ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT