ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರ್ಗ ಪ್ರೀತಿಸುವ ಮನೋಧರ್ಮ ಬೆಳೆಯಲಿ

ಕಾವ್ಯ ಕಮ್ಮಟದಲ್ಲಿ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿಕೆ
Last Updated 24 ಮಾರ್ಚ್ 2019, 12:57 IST
ಅಕ್ಷರ ಗಾತ್ರ

ಹೊಸಪೇಟೆ: ‘ನಾಡು–ನುಡಿ, ಎಲ್ಲ ಜನವರ್ಗಗಳನ್ನು ಪ್ರೀತಿಸುವ ಮನೋಧರ್ಮ ಕವಿಗಳು ಬೆಳೆಸಿಕೊಳ್ಳಬೇಕು. ಸ್ತ್ರೀಯರು, ದಲಿತರು, ಶೋಷಿತರು, ಅಲ್ಪಸಂಖ್ಯಾತರ ಪರವಾದ ನಿಲುವು ಹೊಂದಿ ಅದನ್ನು ಸಾಹಿತ್ಯದಲ್ಲಿ ತರಬೇಕು’ ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ತಾಲ್ಲೂಕು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ಕಾವ್ಯ ಕಮ್ಮಟ ಉದ್ಘಾಟಿಸಿ ಮಾತನಾಡಿದರು.

‘ಏಕತೆ ಕಟ್ಟುವ, ಅನೈಕ್ಯತೆ ಕೆಡಹಬಲ್ಲ ಶಕ್ತಿ ಕವಿ, ಕಲಾವಿದರಲ್ಲಿ ಇದೆ. ಕವಿಗಳಾದವರು ಸಮಾಜದ ಕಟ್ಟಕಡೆಯ ಮನುಷ್ಯ, ದುಡಿಯುವ ವರ್ಗದವರ ಪರ ಇರಬೇಕು. ನಿತ್ಯ ಸರಿಯಾಗಿ ಪತ್ರಿಕೆ ಓದಬೇಕು. ಅನೇಕ ಯುವ ಕವಿಗಳು ಪತ್ರಿಕೆಯನ್ನೇ ಓದುವುದಿಲ್ಲ. ಪತ್ರಿಕೆ ಓದಿದರೆ ಕಾವ್ಯ ಕಟ್ಟಲು ಅನೇಕ ವಿಷಯಗಳು ಸಿಗುತ್ತವೆ’ ಎಂದು ತಿಳಿಸಿದರು.

‘ಕಾವ್ಯವನ್ನು ಕಟ್ಟಬೇಕಾದರೆ ಕವಿಯಾದವನು ಬಹಳ ತಯಾರಿ ಮಾಡಬೇಕಾಗುತ್ತದೆ. ಜನಜೀವನವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಕಾವ್ಯ ಕಟ್ಟಬಹುದು. ಹಳೆ ಮೈಸೂರಿನ ಅನೇಕ ಸಾಹಿತಿಗಳಿಗೆ ಉತ್ತರ ಕರ್ನಾಟಕದ ಪರಿಚಯವೇ ಇಲ್ಲ. ಆದರೆ, ಹೈದರಾಬಾದ್‌ ಕರ್ನಾಟಕದ ಸಾಹಿತಿಗಳಿಗೆ ಸಮಗ್ರ ಕರ್ನಾಟಕದ ಪರಿಚಯವಿದೆ. ನಮ್ಮ ನಾಡು ನುಡಿಯ ಬಗ್ಗೆ ಸಮಗ್ರವಾಗಿ ತಿಳಿದುಕೊಂಡರಷ್ಟೇ ಕಾವ್ಯ ಕಟ್ಟುವಾಗ ಅನೇಕ ವಿಷಯಗಳು ಸಿಗುತ್ತವೆ’ ಎಂದು ಹೇಳಿದರು.

‘ಎಲ್ಲ ಕಾವ್ಯಗಳು ಗಂಭೀರವಾಗಿಯೇ ಇರಬೇಕಂತಲ್ಲ. ಹಾಸ್ಯ, ವಿಡಂಬನೆ ಜತೆಗೆ ಲಘು ಕವಿತೆಗಳನ್ನು ರಚಿಸಬೇಕು. ಮನುಷ್ಯನನ್ನು ನಗಿಸಲು ನಗೆಕೂಟ ಆಯೋಜಿಸಬೇಕಾದ ಸ್ಥಿತಿಯಲ್ಲಿದ್ದೇವೆ. ಮನುಷ್ಯ ಜೀವನದಲ್ಲಿ ಏನು ಕಳೆದುಕೊಂಡರು ರಸಿಕತನ ಕಳೆದುಕೊಳ್ಳಬಾರದು. ಸಾಹಿತ್ಯ, ಸಂಗೀತದ ಮೇಲೆ ಯಾರಿಗೆ ಪ್ರೀತಿ ಇರುತ್ತದೆಯೋ ಅವನು ನಿಜವಾದ ರಸಿಕ’ ಎಂದರು.

‘ಯುವ ಬರಹಗಾರರು ಹಿರಿಯರ ಸಾಹಿತ್ಯ ಓದಿ ಕವನ ರಚಿಸಬೇಕು. ಕಾವ್ಯದ ಬರಹ ಸ್ಥಗಿತಗೊಂಡಾಗ ಲಲಿತಪ್ರಬಂಧ, ನಾಟಕ ಸಾಹಿತ್ಯ, ಜೀವನ ವೃತ್ತಾಂತದ ಮೇಲೆ ಬೆಳಕು ಚೆಲ್ಲಬಹುದು. ಒಂದು ತುತ್ತಿನ ಅನ್ನ ಸಿಗದೆ ಒದ್ದಾಡುತ್ತಿರುವ ಜನ ವರ್ಗವನ್ನು ಒಳಗೊಂಡಿರುವ ಭಾರತ ಒಂದು ಕಡೆಯಾದರೆ, ಕೆಲವೇ ಶ್ರೀಮಂತರಿಂದ ಕೂಡಿರುವ ಮತ್ತೊಂದು ಭಾರತವನ್ನು ನೋಡುತ್ತಿದ್ದೇವೆ. ಈ ಭಾರತ ಜಗತ್ತಿನ ಗುರುವಾಗಲು ಹೊರಟಿದೆ. ಇಂತಹ ಸಂದಿಗ್ಧ ವಿಷಯಗಳ ಮೇಲೆ ಗಮನ ಹರಿಸಿ ಕಾವ್ಯ ಕಟ್ಟಬಹುದು’ ಎಂದು ಸಲಹೆ ಮಾಡಿದರು.

ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಿದ್ದರಾಮ ಕಲ್ಮಠ, ‘ಕನ್ನಡ ಸಾಹಿತ್ಯಕ್ಕೆ ದೊಡ್ಡ ಚರಿತ್ರೆಯೇ ಇದೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ಈ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಬರುವ ದಿನಗಳಲ್ಲಿ ಕಥಾಕಮ್ಮಟ, ರಂಗಗೀತೆ, ಸುಗಮ ಸಂಗೀತ ಕಮ್ಮಟ ಆಯೋಜಿಸಿ, ತಜ್ಞರಿಂದ ಹೊಸಬರಿಗೆ ಮಾರ್ಗದರ್ಶನ ಮಾಡಲು ನಿರ್ಧರಿಸಿದೆ’ ಎಂದು ಹೇಳಿದರು.

ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಎಂ.ಪಿ.ಎಂ. ಮಂಜುನಾಥ, ತಾಲ್ಲೂಕು ಅಧ್ಯಕ್ಷ ಯತ್ನಳ್ಳಿ ಮಲ್ಲಯ್ಯ, ಗೌರವ ಕೋಶಾಧ್ಯಕ್ಷ ಜಿ. ಲಿಂಗಾರೆಡ್ಡಿ, ಸಾಹಿತಿಗಳಾದ ಡಾ. ಸುಲೋಚನಾ, ಸತೀಶ್‌ ಪಾಟೀಲ, ಮೃತ್ಯುಂಜಯ ರುಮಾಲೆ, ಭೂಮಿಕ ಗಡಾದ, ಎನ್‌. ನಾಗರಾಜ, ಟಿ.ಎಂ. ನಾಗಭೂಷಣ, ಕೆ. ಬಸವರಾಜ ಇದ್ದರು. ಜಿಲ್ಲೆಯ ವಿವಿಧ ಭಾಗದ 50 ಕವಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT