ಸೋಮವಾರ, ಮಾರ್ಚ್ 1, 2021
19 °C
ವೆಂಕಟಯ್ಯ ಅಪ್ಪಗೆರೆ ‘ದಣಿವರಿಯದ ಪಯಣ’ ಕೃತಿ ಲೋಕಾರ್ಪಣೆ

ಮೆಚ್ಚಿಸಲೆಂದೇ ಬರೆಯಬಾರದು: ಐಜಿಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ‘ಬರೆಹಗಾರರು, ಕಲಾವಿದರು ನಾಲ್ಕು ಮಂದಿಯನ್ನು ಮೆಚ್ಚಿಸಲೆಂದೇ ಬರೆಯಬಾರದು’ ಎಂದು ಐಜಿಪಿ ಎಂ.ನಂಜುಂಡಸ್ವಾಮಿ ಪ್ರತಿಪಾದಿಸಿದರು.

ಸಂಸ್ಕೃತಿ ಪ್ರಕಾಶನವು ಪ್ರಕಟಿಸಿರುವ ಅಪ್ಪಗೆರೆ ವೆಂಕಟಯ್ಯನವರ ಅನುಭವ ಕಥನ ‘ದಣಿವರಿಯದ ಪಯಣ’ ಕೃತಿಯನ್ನು ನಗರದ ರೇಯ್ಸ್‌ ಹಾಸ್ಪಿಟಲ್‌ ಸಭಾಂಗಣದಲ್ಲಿ ಭಾನವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಲೇಖಕರು ನಿಸ್ಸಂಕೋಚದಿಂದ, ಮುಲಾಜುಗಳಿಲ್ಲದೆ ಬರೆಯಬೇಕು. ಖುಷ್ವಂತ್‌ಸಿಂಗ್‌ ಹಾಗೆ ಪುಸ್ತಕಗಳನ್ನು ಬರೆದರು. ಮತ್ತೆ ಮತ್ತೆ ಓದುವಂತೆ, ಓದಿದಷ್ಟೂ ಮುಗಿಯದಂತೆ ಡಾ.ಅಂಬೇಡ್ಕರ್‌ ಅಗಾಧವಾಗಿ ಬರೆದರು’ ಎಂದು ಹೇಳಿದರು.

‘ಮಾರ್ಕ್ಸ್‌ ದಸ್‌ ಕ್ಯಾಪಿಟಲ್‌ ಕೃತಿಯನ್ನು ಬರೆದಾಗ ಕೇವಲ 50 ಪ್ರತಿಯಷ್ಟೇ ಮುದ್ರಣಗೊಂಡಿತ್ತು. ಇಂದು ಜಗತ್ತಿನೆಲ್ಲೆಡೆ ಆ ಕೃತಿಯನ್ನು ಜನ ಓದುತ್ತಾರೆ. ಆ ಕೃತಿಯಿಂದಾಗಿಯೇ ಹೊಸ ದೇಶಗಳು ಹುಟ್ಟಿಕೊಂಡವು. ಯಾರನ್ನೋ ಮೆಚ್ಚಿಸಲೆಂದೇ ಕೃತಿಯನ್ನು ಬರೆದಿದ್ದರೆ ಅಂಥ ಪರಿಣಾಮಗಳಾಗುತ್ತಿರಲಿಲ್ಲ’ ಎಂದು.

‘ತನ್ನ ಬಗ್ಗೆ ಒಂದು ಸಾಲನ್ನೂ ಬರೆದುಕೊಳ್ಳದವರ ಬಗ್ಗೆ ಮಾತನಾಡಲು ಏನೂ ಇರುವುದಿಲ್ಲ ಎಂದು ಗೆಳೆಯರೊಬ್ಬರು ಹೇಳುತ್ತಿದ್ದರು. ಆ ದೃಷ್ಟಿಯಿಂದ, ಆತ್ಮಕತೆ ಬರೆಯುವುದು ದಿಟ್ಟತನದ ಪ್ರಯತ್ನ. ಅಂಥ ಪ್ರಯತ್ನವನ್ನು ವೆಂಕಟಯ್ಯ ಮಾಡಿರುವುದು ಶ್ಲಾಘನೀಯ’ ಎಂದರು.

‘ವೈರುಧ್ಯಗಳಲ್ಲೇ ಇಂದಿನ ಬದುಕು ಸಾಗುತ್ತಿದೆ. ಅದೇ ನಮ್ಮ ವೈರಿ. ಆದರೆ ವೆಂಕಟಯ್ಯನವರ ಬದುಕು ವೈರುಧ್ಯಗಳಿಂದ ದೂರವಾಗಿ ಸರಳ, ಸಹಜವಾಗಿದೆ’ ಎಂದು ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ ಅಭಿಪ್ರಾಯಪಟ್ಟರು.

ಕೃತಿ ಕುರಿತು ಪತ್ರಕರ್ತ ಕೆ.ನರಸಿಂಹಮೂರ್ತಿ ಪರಿಚಯಿಸಿದರು. ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಅಧ್ಯಕ್ಷ ಶ್ರೀನಾಥ ಜೋಷಿ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶನದ ಸಿ.ಮಂಜುನಾಥ, ಹಾಸ್ಟಿಟಲ್‌ನ ಟಿ.ಆರ್‌.ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು. ಗಂಗಾಧರ ಪತ್ತಾರ್‌ ಅವರು ವೆಂಕಟಯ್ಯ ಕುರಿತ ಕವನ ಓದಿದರು.

ಬಾಲಕಿ ಕವನಶ್ರೀ ಕೊರವಂಜಿ ವೇಷಧಾರಿಯಾಗಿ ತಂದ ಬಿದಿರಿನ ಬುಟ್ಟಿಯಲ್ಲಿ ಹೊಸ ಬಟ್ಟೆ ಹೊದಿಸಿಟ್ಟ ಪುಸ್ತಕಗಳನ್ನು ಹೊರತೆಗೆಯುವ ಮೂಲಕ ಲೋಕಾರ್ಪಣೆ ಮಾಡಿದ್ದು ವಿಶೇಷ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು